ತಾಲೂಕಿನ ನಂಜೇದೇವನಪುರದಲ್ಲಿ ಶುಕ್ರವಾರ ಮುಂಜಾನೆ ೩.೩೦ಲ್ಲಿ ಭರ್ಜರಿ ಹುಲಿ ಓಡಾಟ ನಡೆಸಿತ್ತು. ಈ ಹಿಂದೆ ಹುಲಿ ಕಾಣಸಿಕೊಂಡಿದ್ದ ವ್ಯಾಪ್ತಿಯಲ್ಲೇ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ನಂಜೇದೇವನಪುರದಲ್ಲಿ ಶುಕ್ರವಾರ ಮುಂಜಾನೆ ೩.೩೦ಲ್ಲಿ ಭರ್ಜರಿ ಹುಲಿ ಓಡಾಟ ನಡೆಸಿತ್ತು. ಈ ಹಿಂದೆ ಹುಲಿ ಕಾಣಸಿಕೊಂಡಿದ್ದ ವ್ಯಾಪ್ತಿಯಲ್ಲೇ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದ್ದರಿಂದ ಆನೆ ಮಡುವಿನ ಕೆರೆ ಬಳಿಯ ಜಮೀನೊಂದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಹೆಣ್ಣು ಹುಲಿ ಸೆರೆಯಾಗಿದೆ.೭ರಿಂದ ೮ ವರ್ಷದ ಹೆಣ್ಣು ಹುಲಿ ಸೆರೆಯಾಗಿದ್ದು, ೪ ಮರಿ ಹುಲಿಗಳ ತಾಯಿ ಇರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ನಂತರ ಅರವಳಿಕೆ ನೀಡಿ ಬೇರೆ ಬೋನಿಗೆ ಹಾಕಿ ತೆಗೆದುಕೊಂಡು ಹೋಗಿದ್ದಾರೆ. ಮೇಲಾಧಿಕಾರಿಗಳ ಆದೇಶದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಆರ್‌ಟಿ ಉಪ ಅರಣ್ಯಸಂರಕ್ಷಣಾಧಿಕಾರಿ ಶ್ರೀಪತಿ ತಿಳಿಸಿದ್ದಾರೆ. ಈ ಹಿಂದೆ ಗ್ರಾಮದಲ್ಲಿ ೫ ಹುಲಿಗಳ ಓಡಾಟದ ನಂತರ ಅರಣ್ಯ ಇಲಾಖೆ ಆನೆಗಳ ಮೂಲಕ ಕೂಂಬಿಂಗ್ ನಡೆಸಿದ ಜೊತೆಗೆ ಅಲ್ಲಲ್ಲಿ ಬೋನುಗಳನ್ನು ಇರಿಸಿ ಹುಲಿ ಸೆರೆಗೆ ಮುಂದಾಗಿತ್ತು. ಕೆಲ ದಿನಗಳ ಹಿಂದಷ್ಟೇ ಇದೇ ವ್ಯಾಪ್ತಿಯಲ್ಲಿ ಗಂಡು ಹುಲಿಯೊಂದನ್ನು ಆನೆ ಕೂಬಿಂಗ್ ಮೂಲಕ ಸೆರೆ ಹಿಡಿದು ಕಾಡಿಗೆ ಬಿಡಲಾಗಿತ್ತು,ನಾಲ್ಕು ಮರಿ ಹುಲಿಗಳೊಂದಿಗೆ ಕಾಣಿಸಿಕೊಂಡಿದ್ದ ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಹೆಣ್ಣು ಹುಲಿ ಇದಾಗಿದ್ದರೆ ೪ ಮರಿ ಹುಲಿಗಳು ಎಲ್ಲಿ ಹೋದವು ಎಂಬ ಪ್ರಶ್ನೆ ಮೂಡಿಸಿದೆ. ಈ ನಡುವೆ ಹುಲಿ ಸೆರೆ ಸಿಕ್ಕಿರುವುದರಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟರೂ, ನಾಲ್ಕು ಮರಿಗಳು ಇಲ್ಲೇ ಇರಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೋನಿಗೆ ಬಿದ್ದಿರುವ ಹುಲಿಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಅಥವಾ ಬೇರೊಂದು ಹುಲಿಯೇ ಅಥವಾ ೪ ಮರಿಗಳ ತಾಯಿಯೇ ಎಂಬುದು ತಿಳಿದುಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ಹುಲಿ ಬೋನಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಹುಲಿ ನೋಡಲು ಸುತ್ತಮುತ್ತಲಿನ ಸಾವಿರಾರು ಜನರು ಸ್ಥಳಕ್ಕೆ ಆಗಮಿಸಿದ್ದಾರೆ.