ಶಿಕ್ಷಣವೆಂಬುದು ಪರಿವರ್ತನೆಯ ಶಕ್ತಿಯಾಗಿದ್ದು, ಕೌಶಲ್ಯತೆ, ಉತ್ತಮ ವ್ಯಕ್ತಿತ್ವ, ಸಾಮಾಜಿಕ ಜವಾಬ್ದಾರಿ ಸೇರಿದಾಗ ಮಾತ್ರ ಕಲಿಕೆ ಪರಿಪೂರ್ಣವಾಗಲಿದೆ ಎಂದು ಖ್ಯಾತ ಶಿಕ್ಷಣ ತಜ್ಞ ಡಾ‌.ಕೆ.ಪಿ.ಪುತ್ತೂರಾಯ ಹೇಳಿದರು.

ಶಿವಮೊಗ್ಗ: ಶಿಕ್ಷಣವೆಂಬುದು ಪರಿವರ್ತನೆಯ ಶಕ್ತಿಯಾಗಿದ್ದು, ಕೌಶಲ್ಯತೆ, ಉತ್ತಮ ವ್ಯಕ್ತಿತ್ವ, ಸಾಮಾಜಿಕ ಜವಾಬ್ದಾರಿ ಸೇರಿದಾಗ ಮಾತ್ರ ಕಲಿಕೆ ಪರಿಪೂರ್ಣವಾಗಲಿದೆ ಎಂದು ಖ್ಯಾತ ಶಿಕ್ಷಣ ತಜ್ಞ ಡಾ‌.ಕೆ.ಪಿ.ಪುತ್ತೂರಾಯ ಹೇಳಿದರು.

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಿಂದ ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಡಿಫಾರ್ಮ್, ಬಿಫಾರ್ಮ್, ಎಂಫಾರ್ಮ್ ಪದವಿ ವಿದ್ಯಾರ್ಥಿಗಳ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲಾ ಸಂಸ್ಕೃತಿಯನ್ನು ಪ್ರೀತಿಸಿ, ಆದರೆ ನಿಮ್ಮ ಸಂಸ್ಕೃತಿಯಲ್ಲಿ ಜೀವಿಸಿ. ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ನಮ್ಮ ಭಾರತ ಹೊಂದಿದೆ. ನೀವು ಇತರರಿಗೆ ಮಾಡಿದ ಉಪಕಾರವನ್ನು ಮರೆತುಬಿಡಿ, ಅದರೆ ಇತರರು ನಿಮಗೆ ಮಾಡಿದ ಉಪಕಾರವನ್ನು ಎಂದಿಗೂ ಮರೆಯಬೇಡಿ. ಅದುವೆ ನಮ್ಮ ಸಂಸ್ಕೃತಿ ಸಂಸ್ಕಾರದ ಬಹುದೊಡ್ಡ ಗುಣ. ನಿಜವಾದ ಜ್ಞಾನದ ದೀವಿಗೆ ಬೆಳಗಲು, ನಮ್ಮಲ್ಲಿ ಅಹಂಕಾರ, ಅಜ್ಞಾನವೆಂಬ ಬತ್ತಿ ಕರಗಿ ಹೋಗಬೇಕು ಎಂದರು.

ಜಗತ್ತು ಎಂಬುದು ಪಾಠಶಾಲೆಯಾಗಿದ್ದು, ಅನುಭವವೇ ಗುರುವಾಗಿದೆ‌. ಶಿಕ್ಷಣದ ಉದ್ದೇಶ ಪದವಿ ಪಡೆಯುವುದು ಮಾತ್ರವಲ್ಲ. ಅಂಕಗಳು ಬದುಕಿನ ಅಂತ್ಯವಲ್ಲ. ಕಲಿತ ಜ್ಞಾನದೊಂದಿಗೆ ನೈತಿಕತೆ, ಮನುಕುಲದ ಬಗೆಗಿನ ಕಾಳಜಿಯುತ ಚಿಂತನೆಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳಿ. ಬದುಕಿನಲ್ಲಿ ಅಂತಹ ಪರಿವರ್ತನೆ ನಡೆದಾಗ ಮಾತ್ರ ಶಿಕ್ಷಣ ಎಂಬುದು ಸಾರ್ಥಕವಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಮಹಿಳೆಯರು ಉತ್ತಮ ಶಿಕ್ಷಣದೊಂದಿಗೆ ಎಲ್ಲಾ ಕ್ಷೇತ್ರದಲ್ಲಿ ಸಾಧಕರಾಗಿ ಹೊರಹೊಮ್ಮಬೇಕು. ದೇಶದ ವಿದ್ಯಾಮಾನವನ್ನು ಗಮನಿಸಿದಾಗ, ಶಿಕ್ಷಣ ಒಂದೇ ಸಮಾನತೆ ನೀಡಲು ಸಾಧ್ಯ ಎಂಬ ಸತ್ಯ ಅರಿವಾಗಿದೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಕೌಶಲ್ಯಯುತ ನೈಪುಣ್ಯತೆಗೆ ಹೆಚ್ಚು ಗಮನಹರಿಸಿ, ಕಲಿಕೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಿ. ಆಸಕ್ತಿಯನ್ನು ಕಳೆದುಕೊಂಡವರಲ್ಲಿ ಬದುಕಿನ ಮಾರ್ಗವೇ ಕಳೆದು ಹೋಗುತ್ತದೆ‌ ಎಂದರು.

ಸುಳ್ಳು ಭರವಸೆಗಳಿಗೆ ಆಕರ್ಷಿತರಾಗದೆ, ವಾಸ್ತವತೆಯ ಅರಿವನ್ನು ಪಡೆಯಿರಿ. ನಿಶ್ಚಿತವಾದ ನೌಕರಿಯ ಕ್ಷೇತ್ರವೆಂದರೆ ಫಾರ್ಮಸಿ. ಅಂತಹ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ‌. ಜೊತೆಯಲ್ಲಿ ಮನುಷ್ಯತ್ವದ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಫಾರ್ಮಸಿ ಪದವೀಧರರಲ್ಲಿ ಸಾಮಾಜಿಕ ಸ್ಪಂದನೆ ಎಂಬುದು ಅತ್ಯಗತ್ಯ. ಶಿಸ್ತು, ಕುತೂಹಲ, ಸಮಾಜಮುಖಿ ಚಿಂತನೆಯನ್ನು, ವಿದ್ಯಾರ್ಥಿಗಳಿಂದ ಕಾಲೇಜು ಬಯಸುತ್ತದೆ‌. ಮಾರುಕಟ್ಟೆಯ ನಂಬಿಕೆಯನ್ನು ಸಮತೋಲನವಾಗಿ ನಿರ್ವಹಿಸಬಲ್ಲ ಕೌಶಲ್ಯತೆಯ ಅನಿವಾರ್ಯತೆಯಿದೆ. ವ್ಯಾಕ್ಸಿನ್, ಜನರಿಕ್ ಔಷಧಿಗಳ ಉತ್ಪಾದನೆಯಲ್ಲಿ ಭಾರತ ಅದ್ಭುತ ಸಾಧನೆಯ ಹಾದಿಯಲ್ಲಿ ಮುನ್ನಡೆದಿದೆ ಎಂದರು.

ಎನ್ಇಎಸ್ ಸಹ ಕಾರ್ಯದರ್ಶಿ ಡಾ‌.ಪಿ.ನಾರಾಯಣ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಎಸ್.ಎಂ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.