ಹಾವೇರಿ: ಉತ್ತರ ಕರ್ನಾಟಕದ ಪ್ರಸಿದ್ಧ ಜನಪ್ರಿಯ ಹಬ್ಬಗಳಲ್ಲೊಂದಾದ ಸೀಗೆ ಹುಣ್ಣಿಮೆ ಹಬ್ಬವನ್ನು ಸೋಮವಾರ ಜಿಲ್ಲೆಯ ಹಲವೆಡೆ ರೈತ ಬಾಂಧವರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಜಿಲ್ಲಾದ್ಯಂತ ಗ್ರಾಮೀಣ ಹಾಗೂ ನಗರದ ಹಲವೆಡೆ ಸಾಂಪ್ರದಾಯಿಕವಾಗಿ ಸೀಗೆ ಹುಣ್ಣಿಮೆ ಹಬ್ಬವನ್ನು ಆಚರಿಸಿದರು. ಸಹಕುಟುಂಬ ಪರಿವಾರದೊಂದಿಗೆ ರೈತಾಪಿ ವರ್ಗದವರು ತಮ್ಮ ಹೊಲ ಗದ್ದೆಗಳಿಗೆ ತೆರಳಿ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಉಡಿತುಂಬಿ, ಚರಗ ಚೆಲ್ಲುವ ಮೂಲಕ ಸೀಗೆ ಹುಣ್ಣಿಮೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿದರು. ಮಳೆ ಕೊರತೆ ಹಾಗೂ ಬರಗಾಲ ಹಿನ್ನೆಲೆ ಕೆಲವು ಹೊಲಗಳಲ್ಲಿ ಹಸಿರಿನ ಸಿರಿ ಇಲ್ಲದಿದ್ದರೂ ರೈತರು ಸಾಂಪ್ರದಾಯಿಕವಾಗಿ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನೀರಾವರಿ ಸೌಲಭ್ಯ ಹೊಂದಿರುವ ರೈತರು ಹಸಿರು ಸಿರಿಯ ಮಧ್ಯೆ ಹಬ್ಬವನ್ನು ಸಂಭ್ರಮಿಸಿದರು. ರೈತರು, ರೈತ ಮಹಿಳೆಯರು ಮತ್ತು ಮಕ್ಕಳು ಭೂಮಿ ತಾಯಿಗೆ ಸೀಮಂತ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸುವಲ್ಲಿ ಕಾರ್ಯನಿರತರಾಗಿರುವುದು ವಿಶೇಷವಾಗಿ ಎಲ್ಲೆಡೆ ಕಂಡುಬಂದಿತು.ರೈತರು ತಮ್ಮ ಜಮೀನುಗಳಲ್ಲಿರುವ ಬನ್ನಿ ಮರದ ಬಳಿ ಅಥವಾ ಬೆಳೆದ ಪೈರುಗಳ ಮಧ್ಯೆ 5 ಜೋಳದ ದಂಟನ್ನು ತಂದು ನಿಲ್ಲಿಸಿ, ಅದರೊಳಗಡೆ ಚಿಕ್ಕದಾದ 5 ಕಲ್ಲುಗಳನ್ನು (ಪಂಚಪಾಂಡವರು) ಇಟ್ಟು ವಿಭೂತಿ, ಕುಂಕುಮ ಹಚ್ಚಿ ಪೂಜಿಸಿ, ಆರತಿ ಬೆಳಗುತ್ತಾರೆ. ಮಹಿಳೆಯರು ಮಕ್ಕಳೆಲ್ಲರೂ ಸೇರಿ ಭೂಮಿತಾಯಿಗೆ ಉಡಿ ತುಂಬುತ್ತಾರೆ. ನಂತರ ವಿವಿಧ ಬಗೆಯ ಖಾದ್ಯಗಳಿಂದ ತಯಾರಿಸಿದ ಎಡೆಯ ನೈವೇದ್ಯವನ್ನು ದೇವರಿಗೆ ಅರ್ಪಿಸಿ, ನಂತರ ಹೊಲದ ತುಂಬೆಲ್ಲಾ ಹುಲಿಗೋ ಹುಲಿಗೋ... ಎಂದು ಚರಗ ಚೆಲ್ಲಿ ರೈತನ ಅನ್ನದ ತುತ್ತನ್ನು ಭೂತಾಯಿಗೆ ಅರ್ಪಿಸಿದರು.
ಮೃಷ್ಟಾನ್ನ ಭೊಜನ: ಸೀಗೆ ಹುಣ್ಣಿಮೆ ಹಬ್ಬವೆಂದರೆ ಸಾಕು ರೈತರಿಗೆ ಎಲ್ಲಿಲ್ಲದ ಸಡಗರ ಸಂಭ್ರಮ. ಮನೆಯಲ್ಲಿ ನಿರಂತರ ಮೂರು ದಿನಗಳಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿಕೊಳ್ಳುವಲ್ಲಿ ಮಹಿಳೆಯರು ಸಿದ್ಧತೆ ಮಾಡಿಕೊಂಡಿರುತ್ತಾರೆ. ಪ್ರಮುಖವಾಗಿ ಕಡಕ್ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಗುರೇಳ್ಳು ಚಟ್ನಿ, ಎಣ್ಣೆ ಹೋಳಿಗೆ, ಶೇಂಗಾ ಹೊಳಿಗೆ, ಕಡಬು, ಖರ್ಚಿಕಾಯಿ, ಸೆಂಡಿಗೆ, ಹಪ್ಪಳ, ಕೊಡಬಳಿ, ಚಕ್ಕಲಿ, ಒಡೆ, ಮಿರ್ಚಿ, ಕರಿದ ಮೆಣಸಿನಕಾಯಿ, ಎಣ್ಣುಗಾಯಿ ಪಲ್ಯ, ಕಡಲೆಕಾಳು ಪಲ್ಯ, ಹಿಟ್ಟಿನಪಲ್ಯ, ಪುಂಡಿಪಲ್ಯೆ, ಡೊಣ್ಣಗಾಯಿ ಪಲ್ಯ, ಅಕ್ಕಿಹುಗ್ಗಿ, ಮೊಸರು ಬುತ್ತಿ, ಅನ್ನ-ಸಾಂಬಾರು ಸೇರಿದಂತೆ ಮೃಷ್ಟಾನ್ನ ಭೋಜನವನ್ನು ಸವೆಯುವುದರ ಮೂಲಕ ಬಂದಿರುವ ಬೀಗರು ಬಿಜ್ಜರು ಜತೆಗೆ ಹಬ್ಬವನ್ನು ಸಂಭ್ರಮಿಸಿದರು.