ರೋಗಿಗಳ ಚಿಕಿತ್ಸೆಗೆ ಬಳಕೆಯಾಗಬೇಕಾದ ಲಕ್ಷಾಂತರ ರುಪಾಯಿ ಮೌಲ್ಯದ ಔಷಧಿಗಳು ಅವಧಿ ಮೀರಿದ ಕಾರಣ, ಅವುಗಳ ವಿಲೇವಾರಿಗೆ ಪ್ರತಿ ಕೆಜಿಗೆ ₹25 ನೀಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ರೋಗಿಗಳ ಚಿಕಿತ್ಸೆಗೆ ಬಳಕೆಯಾಗಬೇಕಾದ ಲಕ್ಷಾಂತರ ರುಪಾಯಿ ಮೌಲ್ಯದ ಔಷಧಿಗಳು ಅವಧಿ ಮೀರಿದ ಕಾರಣ, "ಕೊಪ್ಪಳ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ತಾಯಿ-ಮಕ್ಕಳ ಆಸ್ಪತ್ರೆ "ಯಲ್ಲಿ ಅವುಗಳ ವಿಲೇವಾರಿಗೆ ಪ್ರತಿ ಕೆಜಿಗೆ ₹25 ನೀಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈಗ ''''ಕನ್ನಡಪ್ರಭ''''ಕ್ಕೆ ಲಭ್ಯವಾದ ದಾಖಲೆಗಳ ಪ್ರಕಾರ, ಬರೋಬ್ಬರಿ 1033 ಕೆಜಿ ಔಷಧಿಗಳನ್ನು ಕಿಮ್ಸ್ ನಿರ್ದೇಶಕರ ಮೌಖಿಕ ಸೂಚನೆಯ ಮೇರೆಗೆ ಔಷಧಿ ಉಗ್ರಾಣ ನಿರ್ವಹಣಾಧಿಕಾರಿಗಳೇ ವಿಲೇವಾರಿ ಮಾಡಿದ್ದಾರೆ.

ಇವು ಕೇವಲ 2024-25ನೇ ಸಾಲಿನ ಔಷಧಿಗಳಾಗಿವೆ. 2026ರ ಏಪ್ರಿಲ್ 15ರಂದು ಈ 10 ಕ್ವಿಂಟಲ್ ಔಷಧಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ದಾಖಲೆ ಸೃಜಿಸಲಾಗಿದೆ. ಆದರೆ, ವಾಸ್ತವದಲ್ಲಿ ವಿಲೇವಾರಿ ಮಾಡಿದ್ದೇ ಬೇರೆ ಎನ್ನಲಾಗಿದೆ.

20 ಕ್ವಿಂಟಲ್ ಔಷಧಿ: ಅವಧಿ ಮೀರಿದ ಇನ್ನೂ 20 ಕ್ವಿಂಟಾಲ್ ಔಷಧಿಗಳು ದಾಸ್ತಾನು ಮಳಿಗೆಯಲ್ಲಿವೆ ಎನ್ನುವ ಆರೋಪವೂ ಕೇಳಿಬಂದಿದೆ. ಏಕಕಾಲಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದ ಔಷಧಿಗಳನ್ನು ವಿಲೇವಾರಿ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಹಂತ ಹಂತವಾಗಿ ವಿಲೇವಾರಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಅವಧಿ ಮೀರಿದ್ದು ಯಾಕೆ?: ಕಿಮ್ಸ್ ಆಸ್ಪತ್ರೆಗೆ ನಿತ್ಯವೂ ನಾಲ್ಕಾರು ನೂರು ರೋಗಿಗಳು ಬರುತ್ತಾರೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿಯೂ ನೂರಾರು ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆದರೂ ಇಷ್ಟೊಂದು ದೊಡ್ಡ ಪ್ರಮಾಣದ ಔಷಧಿಗಳು ಅವಧಿ ಮೀರಿದ್ದು ಯಾಕೆ ಎನ್ನುವ ಪ್ರಶ್ನೆಗೆ ಕಿಮ್ಸ್ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.

ಅಚ್ಚರಿ ಎಂದರೆ, ಹರ್ನಿಯಾ ಆಪರೇಷನ್ ಮಾಡುವ ವೇಳೆ ಬಳಸುವ ಔಷಧಿಯ ಬೆಲೆ ಬರೋಬ್ಬರಿ ₹3500. ಇಂತಹ ಔಷಧಿಗಳನ್ನೇ ಬಾಕ್ಸ್‌ಗಟ್ಟಲೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಎಸೆಯಲಾಗಿದೆ.

ಗೋಲ್‌ಮಾಲ್: ನಿಯಮಾನುಸಾರ ಕನಿಷ್ಠ 18 ತಿಂಗಳ ಅವಧಿ ಇರುವ ಔಷಧಿಗಳನ್ನು ಮಾತ್ರ ಖರೀದಿ ಮಾಡಬೇಕು. ಕೇವಲ 2 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದ ಔಷಧಿಗಳು ಅವಧಿ ಮೀರಿದ್ದು ಹೇಗೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಹಾಗೊಂದು ವೇಳೆ ಔಷಧಿಗಳ ಅವಧಿ ಮುಗಿಯುವ ಕಾಲ ಸಮೀಪಿಸಿದರೆ, ತಕ್ಷಣ ಅವುಗಳನ್ನು ಬೇಡಿಕೆ ಇರುವ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಬೇಕು. ಇಲ್ಲಿ ಯಾಕೆ ಕಳುಹಿಸಲಿಲ್ಲ?

ಆಸ್ಪತ್ರೆಯಲ್ಲಿ ಔಷಧಿಗಳನ್ನು ಬಳಕೆ ಮಾಡಲಿಲ್ಲವೋ ಅಥವಾ ಖರೀದಿ ಮಾಡಿದ್ದೇ ಅವಧಿ ಮೀರಿದ ಔಷಧಿಗಳನ್ನೋ ಎನ್ನುವುದು ಪ್ರಶ್ನಾರ್ಥಕವಾಗಿರುವ ವಿಷಯವಾಗಿದೆ. ಇದರಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ತನಿಖೆಯಿಂದಷ್ಟೇ ಇವೆಲ್ಲ ಬೆಳಕಿಗೆ ಬರಬೇಕಿದೆ.

ಔಷಧಿ ಇಲ್ಲ: ಅದೆಷ್ಟೋ ರೋಗಿಗಳಿಗೆ ಇದೇ ಆಸ್ಪತ್ರೆಯಲ್ಲಿ ಔಷಧಿಗಳನ್ನು ನೀಡದೆ, ಖಾಸಗಿಯಾಗಿ ಖರೀದಿಸಿಕೊಂಡು ಬನ್ನಿ ಎಂದು ಚೀಟಿ ಬರೆದುಕೊಡುತ್ತಾರೆ. ಆದರೆ, ಇಲ್ಲಿ ನೋಡಿದರೆ ಲಕ್ಷಾಂತರ ರುಪಾಯಿ ಮೌಲ್ಯದ ಔಷಧಿಗಳನ್ನು ಬಳಕೆ ಮಾಡದೆ, ಅವಧಿ ಮುಗಿದಿದೆ ಎಂದು ತ್ಯಾಜ್ಯ ಘಟಕಕ್ಕೆ ಸುರಿಯುತ್ತಿದ್ದಾರೆ.

ಸಮಗ್ರ ತನಿಖೆಯಾಗಲಿ: ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ಔಷಧಿ ಹಗರಣ ದೊಡ್ಡ ಮಟ್ಟದಲ್ಲಿದ್ದು, ಇದರ ತನಿಖೆಯಾಗಬೇಕು. ಸರ್ಕಾರ ರೋಗಿಗಳಿಗೆ ಅನುಕೂಲವಾಗಲಿ ಎಂದು ಕಿಮ್ಸ್ ಆಸ್ಪತ್ರೆಯ ವೆಚ್ಚಕ್ಕಾಗಿ ಕೋಟ್ಯಂತರ ರುಪಾಯಿ ನೀಡುತ್ತಿದ್ದು, ಅದನ್ನು ಈ ರೀತಿ ಗೋಲ್‌ಮಾಲ್ ಮಾಡಿ ಲೂಟಿ ಮಾಡಲಾಗುತ್ತಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ವೈದ್ಯರೊಬ್ಬರು ಆಗ್ರಹಿಸಿದ್ದಾರೆ.