ಸಾರಾಂಶ
ಚಾಮರಾಜನಗರ : ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಶಕ್ತಿಯನ್ನು ಅಸ್ಥಿರಗೊಳಿಸಲು ಹೊರಟಿರುವ ಪಟ್ಟಭದ್ರ ಶಕ್ತಿಗಳ ವಿರುದ್ಧ ಹೋರಾಟ ರೂಪಿಸಲು ಶ್ರಮಿಕ ವರ್ಗಗಳ ಒಕ್ಕೂಟದ ಚಿಂತನಾ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ಅಂಬೇಡ್ಕರ್ ಭವನದಲ್ಲಿ ಶ್ರಮಿಕ ವರ್ಗಗಳ ಒಕ್ಕೂಟದ ಮುಖಂಡ ಪು.ಶ್ರೀನಿವಾಸನಾಯಕ ಅವರ ನೇತೃತ್ವದಲ್ಲಿ ನಡೆದ ಚಿಂತನಾ ಸಭೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಚರ್ಚಿಸಿ ಸಲಹೆಗಳನ್ನು ಪಡೆದು ಸಿಎಂ ಸಿದ್ದರಾಮಯ್ಯನವರ ಪರ ಜಿಲ್ಲೆಯಿಂದಲೇ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು.
ಸಭೆ ಅಧ್ಯಕ್ಷತೆ ವಹಿಸಿದ್ದ ಪು.ಶ್ರೀನಿವಾಸನಾಯಕ ಮಾತನಾಡಿ, ಹಿಂದುಳಿದ ವರ್ಗಗಳ ನೇತಾರ, ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಹಗರಣದಲ್ಲಿ ಸಿಲುಕಿ ರಾಜಕೀಯದಿಂದ ಹೊರ ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಅಲ್ಲದೆ ಸಿಎಂ ರಾಜೀನಾಮೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿ ಮನುವಾದಿ ಸರ್ಕಾರ ತರುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಶ್ರಮಿಕ ವರ್ಗಗಳು ಒಗ್ಗೂಡಿ ಪ್ರತಿ ಹೋರಾಟ ರೂಪಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳಬೇಕಿದೆ ಎಂದರು.
ಚಾಮರಾಜನಗರದಿಂದಲ್ಲೇ ಹೋರಾಟ ಆರಂಭಿಸುವ ಮೂಲಕ ರಾಜ್ಯ ವ್ಯಾಪಿ ಹೋರಾಟ ಮಾಡಬೇಕು. ಅದಕ್ಕಾಗಿ ಈ ಸಭೆ ಕರೆಯಲಾಗಿದ್ದು, ಮುಖಂಡರು ಸಭೆಯಲ್ಲಿ ಬೆಂಬಲ ಸೂಚಿಸಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಈ ವೇಳೆ ಸಭೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಸಿಎಂ ಸಿದ್ದರಾಮಯ್ಯನವರ ಜನ್ಮದಿನ ಆಚರಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಮಾಜಿ ಸದಸ್ಯರಾದ ರಮೇಶ್, ಮಧುವನಹಳ್ಳಿ ಶಿವಕುಮಾರ್, ಎಲ್.ನಾಗರಾಜು, ತಾಪಂ ಸದಸ್ಯ ರಾಜು, ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಎಂ.ಶಿವಮೂರ್ತಿ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಲಿಂಗರಾಜು, ಸಿದ್ದರಾಮಯ್ಯ ಅಭಿಮಾನಿ ಬಳಗ ದ ಜಿಲ್ಲಾಧ್ಯಕ್ಷ ಬೆಳ್ಳೇಗೌಡ, ಮೂಳ್ಳೂರು ಶಿವಮಲ್ಲು, ಸುಭಾಷ್ ಮಾಡ್ರಹಳ್ಳಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎನ್.ನಂಜೇಗೌಡ, ಸೋಮಣ್ಣೇಗೌಡ, ಮುಖಂಡರಾದ ಜನ್ನೂರು ಮಹದೇವು, ಸಿ.ಎಂ.ಶಿವಣ್ಣ, ದೊಡ್ಡಿಂದುವಾಡಿ ಸಿದ್ದರಾಜು, ಕೆರೆಹಳ್ಳಿ ರೇವಣ್ಣ, ಮಸಗಾಪುರ ಸ್ವಾಮಿ, ಎಚ್.ಎನ್.ಬಸವರಾಜು, ಕೆಸ್ತೂರುಮರಪ್ಪ, ಕೊಂಡೇಗೌಡ, ಪಿ.ಸಂಘಸೇನ, ಬಸಪ್ಪನಪಾಳ್ಯ ನಟರಾಜು, ಎಪಿಎಂಸಿ ನಿರ್ದೇಶಕ ಗುರುಸ್ವಾಮಿ, ಸಿದ್ದರಾಜನಾಯಕ, ಮುತ್ತಿಗೆ ಶಿವಲಿಂಗೇಗೌಡ, ಕುಂಬಾರ ಸಂಘದ ಚಾಮರಾಜ, ಸವಿತಾ ಸಮಾಜದ ಚಿನ್ನಸ್ವಾಮಿ, ನಗರಸಭಾ ಸದಸ್ಯೆ ಚಿನ್ನಮ್ಮ, ಭಾಗ್ಯಮ್ಮ, ಸೈಯದ್ ಇರ್ಷಾದ್, ಚಾ.ಹ.ರಾಮು, ಲಿಂಗಣ್ಣ, ಅಫ್ಜರ್ ಅಹಮದ್ ಇತರರು ಭಾಗವಹಿಸಿದ್ದರು.