ಸಾರಾಂಶ
ವಿಜಯೇಂದ್ರ ಇನ್ನೂ ಮುಂದುವರಿದು ಮಾತನಾಡಿದರೆ ತಕ್ಕ ಉತ್ತರ ಕೊಡುತ್ತೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಮನಗರ: ಯಾವ ಯಾವ ಭ್ರಷ್ಟಾಚಾರ ಅವರ ಕುಟುಂಬದ ಮೇಲೆ ಇದೆ ಎಂಬುದು ಗೊತ್ತಿದೆ. ಆ ವಿಜಯೇಂದ್ರ ಇನ್ನೂ ಮುಂದುವರಿದು ಮಾತನಾಡಿದರೆ ತಕ್ಕ ಉತ್ತರ ಕೊಡುತ್ತೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯೇಂದ್ರನಿಗೆ 6*3 ತೊಟ್ಟಿ ವಿಚಾರ, ಪೋಸ್ಕೋ ಹಗರಣದ ವಿವರ ಹೇಳಬೇಕಾಗುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಜೆಪಿ-ಜೆಡಿಎಸ್ ನಾಯಕರೇ 1400 ನಿವೇಶನಗಳನ್ನು ಮುಡಾದಿಂದ ಪಡೆದಿದ್ದಾರೆ. ಅವರ ಶಾಸಕರು, ಸಚಿವರು, ಮಾಜಿ ಸಚಿವರು, ಕುಟುಂಬಸ್ಥರು, ಕುಮಾರಸ್ವಾಮಿ ಕುಟುಂಬ, ಜಿ.ಟಿ.ದೇವೇಗೌಡರ ಕುಟುಂಬ ಎಲ್ಲರೂ ಇದರ ಫಲಾನುಭವಿಗಳೇ. ಅದನ್ನು ಮುಚ್ಚಿಹಾಕಲು ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಬಿಜೆಪಿ-ಜೆಡಿಎಸ್‌ನವರೇ ಮೂಲ ಪುರುಷರು ಎಂದು ತಿರುಗೇಟು ನೀಡಿದರು.
ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ತಂದಿದ್ದೇ ಕಾಂಗ್ರೆಸ್ ಪಕ್ಷ. ಅದಕ್ಕಾಗಿ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿದ್ದು, ಆ ಎಲ್ಲಾ ಹಣವನ್ನು ಮರಳಿ ಪಡೆಯಲಾಗುತ್ತಿದೆ. ಬಿಜೆಪಿ ಕಾಲದಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ, ಭೋವಿ ಹಗರಣ ಸೇರಿ ಸಾಕಷ್ಟು ಹಗರಣಗಳು ನಡೆದಿವೆ. ಆಗ ಧ್ವನಿ ಎತ್ತದವರು ಈಗ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಮೈಸೂರು ಚಲೋ ಮಾಡುತ್ತಿದ್ದಾರೆ. ಇದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಒಬ್ಬರು ಪಾದಯಾತ್ರೆ ಮಾಡುತ್ತೇವೆ ಅಂದರೆ, ಮತ್ತೊಬ್ಬರು ಬರುವುದಿಲ್ಲ ಅಂತಾರೆ. ಅವರದ್ದು ಬೆಳಿಗ್ಗೆ ಒಂದು ಮಾತು, ರಾತ್ರಿ ಒಂದು ಮಾತು. ಇವರಿಗೆ ಪಾದಯಾತ್ರೆ ಮಾಡಲು ಯಾವ ನೈತಿಕತೆ ಇದೆ. ಅಧಿಕಾರಕ್ಕೋಸ್ಕರ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಮಾಡಿರುವ ಹಗರಣ ನಮ್ಮ ಮೂತಿಗೆ ಒರೆಸುವ ಕೆಲಸ ಮಾಡುತ್ತಿದ್ದು, ಅದನ್ನು ಜನರಿಗೆ ಮನವರಿಕೆ ಮಾಡಿಕೊಡಲು ನಾವು ಜನಾಂದೋಲನ ಮಾಡುತ್ತಿದ್ದೇವೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದು ರಾಜಕೀಯ ದುರುದ್ದೇಶ. ಬಿಜೆಪಿ ಅಧಿಕಾರವನ್ನು ಎಷ್ಟರ ಮಟ್ಟಿಗೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಗೊತ್ತಾಗುತ್ತಿದೆ. ಪ್ರಾಸಿಕ್ಯೂಷನ್ ನೀಡಲು ಇನ್ನೂ ಅನೇಕ ಅರ್ಜಿಗಳು ಬಾಕಿ ಉಳಿದಿವೆ. ಆದರೆ, ಇದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಏಕೆ ಕೊಡಬೇಕು. ಒಬ್ಬ ಖಾಸಗಿ ವ್ಯಕ್ತಿ ಕೊಟ್ಟಿರುವ ಅರ್ಜಿಗೆ ನೋಟಿಸ್ ಕೊಟ್ಟಿದ್ದಾರೆ. ಇದು ಆ ಹುದ್ದೆಗೆ ಗೌರವ ತರುವಂತದಲ್ಲ. ಸಚಿವ ಸಂಪುಟದಲ್ಲಿ ನಮ್ಮ ನಾಯಕರು ಇದಕ್ಕೆ ಉತ್ತರ ಕೊಟ್ಟಿದ್ದಾರೆ ಎಂದರು.
ಅಸೂಯೆಗೆ ಮದ್ದು ಇಲ್ಲ
ಕೇಂದ್ರ ಸಚಿವ ಕುಮಾರಸ್ವಾಮಿಗೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ನೀರಾವರಿ, ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ಸೇರಿದಂತೆ ರಾಜ್ಯದ ಅಭಿವೃದ್ಧಿ ಬಗ್ಗೆ ಕೇಂದ್ರದಲ್ಲಿ ಚರ್ಚೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡುವುದೇ ಸಾಧನೆಯಾಗಿದೆ. ಅವರ ಬಗ್ಗೆ ಮಾತನಾಡದಿದ್ದರೆ ನಿದ್ದೆಯೇ ಬರಲ್ಲ, ಊಟ ಸೇರಲ್ಲ. ಹಾಗಾಗಿ ಪದೆಪದೇ ಅವರ ಬಗ್ಗೆ ಮಾತಾಡ್ತಾರೆ. ಅವರಿಗೆ ಪಿಕ್ಚರ್ ತೆಗೆದು ಅಭ್ಯಾಸ ಇದೆ. ಅವರಿಗೆ ಪ್ರೊಡ್ಯೂಸರ್, ನಟನೆ, ಹಂಚಿಕೆ ಎಲ್ಲವೂ ಗೊತ್ತಿದೆ. ಹಾಗಾಗಿ ಸುಳ್ಳನ್ನು ಸತ್ಯ ಮಾಡುವುದು ಅವರಿಗೆ ಗೊತ್ತಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು.