ಅಂಗನವಾಡಿ ಸಂಪ್‌ಗೆ ಬಿದ್ದು ಮಗು ಸಾವು

| Published : Mar 23 2024, 01:02 AM IST

ಸಾರಾಂಶ

ಅಂಗನವಾಡಿಗಾಗಿ ನಿರ್ಮಿಸಿರುವ ಸಂಪ್ ಅನ್ನು ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಮುಚ್ಚದೆ ತೆರೆದು ಬಿಟ್ಟಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಇದಕ್ಕೆ ಅಂಗನವಾಡಿ ಸಿಬ್ಬಂದಿಯೇ ಮುಖ್ಯ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಅಂಗನವಾಡಿ ಸಂಪ್ ಗೆ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಅಂತರಸಂತೆಯ ಬಂಗ್ಲಿಹುಂಡಿ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಡಿಪಿಒ, ಅಂಗವಾಡಿಯ ಮೇಲ್ವೀಚಾರಕಿ, ಸಹಾಯಕಿಯರ ವಿರುದ್ಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂತರಸಂತೆಯ ಬಂಗ್ಲಿಹುಂಡಿ ಗ್ರಾಮದ ಅಹಲ್ಯ (3) ಮೃತಪಟ್ಟ ಮಗು.

ಅಂಗನವಾಡಿಗಾಗಿ ನಿರ್ಮಿಸಿರುವ ಸಂಪ್ ಅನ್ನು ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಮುಚ್ಚದೆ ತೆರೆದು ಬಿಟ್ಟಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಇದಕ್ಕೆ ಅಂಗನವಾಡಿ ಸಿಬ್ಬಂದಿಯೇ ಮುಖ್ಯ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.

ಶುಕ್ರವಾರ ಮಗುವಿನ ಶವವಿಟ್ಟಿದ್ದ ಎಚ್.ಡಿ. ಕೋಟೆ ಸಾರ್ವಜನಿಕರ ಆಸ್ಪತ್ರೆಗೆ ಆಗಮಿಸಿದ ಕುಟುಂಬಸ್ಥರು, ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿದ್ದಲ್ಲದೆ, ಮಗುವಿನ ಸಾವಿಗೆ ಸಿಡಿಪಿಒ ಮತ್ತು ಅಂಗನವಾಡಿ ಸಿಬ್ಬಂದಿಗಳೇ ಕಾರಣ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿ ಮಗುವಿನ ಮೃತದೇಹ ಕಂಡು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಆದಿಕರ್ನಾಟಕ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿ, ಸಿಡಿಪಿಒ ಆಶಾ ಮತ್ತು ಅಂಗನವಾಡಿ ಸಿಬ್ಬಂದಿಯ ಬೇಜಾಬ್ದಾರಿ ತನವೇ ಈ ಘಟನೆಗೆ ಕಾರಣ. ಅದು ಅಂಗನವಾಡಿಗೆ ಸೇರಿದ ಸಂಪ್ ಆದ್ದರಿಂದ ಅದನ್ನು ಸರಿಯಾಗಿ ಮುಚ್ಚಬೇಕಾಕದದ್ದು ಸಿಬ್ಬಂದಿ ಕರ್ತವ್ಯ. ಆದರೆ ಇಲ್ಲಿ ಸಂಪೂರ್ಣ ಅಂಗನವಾಡಿಯವರ ನಿರ್ಲಕ್ಷ್ಯದಿಂದಾಗಿ ಮಗು ಸಂಪ್ ಗೆ ಬಿದ್ದು ಪ್ರಾಣ ಕಳೆದುಕೊಂಡಿದೆ. ಸಂಜೆ 7 ಗಂಟೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡು ಪೋಷಕರು ಮಗುವಿಗಾಗಿ ಹುಡುಕಾಟ ನಡೆಸುವ ವೇಳೆ ಮಗು ಮೃತಪಟ್ಟಿರುವುದು ಬೆಳೆಕಿಗೆ ಬಂದಿದೆ.

ಇಂತಹ ಒಂದು ದುರ್ಘಟನೆ ನಡೆದಿದ್ದರೂ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಸಿಡಿಪಿಒ ಅವರು ಮಧ್ಯಹ್ನ 12ಕ್ಕೆ ಬಂದಿದ್ದಾರೆ. ಮಕ್ಕಳು ಎಂದರೆ ಇಷ್ಟೊಂದು ಬೇಜವಾಬ್ದಾರಿ ತೋರುತ್ತಾರೆ ಎಂದರೆ ನಾವು ಮಕ್ಕಳನ್ನು ಹೇಗೆ ಅಂಗನವಾಡಿಗೆ ಕಳುಹಿಸುವುದು? ಅಂಗನವಾಡಿ ಬರುವ ಬಡಮಕ್ಕಳು ಎಂದರೆ ಇಷ್ಟೊಂದು ತಾತ್ಸಾರವೇಕೆ? ಎಂದು ಪ್ರಶ್ನಿಸಿದರು. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಆಶಾ ಅವರು ಅಂಗನವಾಡಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಮಗುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಧರಣಿ ಸತ್ಯಗ್ರಹ ಮಾಡುವುದಾಗಿ ಎಚ್ಚರಿಸಿದರು.

ಬಳಿಕ ಮಗುವಿನ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಮಗುವಿನ ತಾಯಿಯಿಂದ ದೂರು ದಾಖಲು

ಇನ್ನು ಘಟನೆಗೆ ಅಂಗನವಾಡಿ ಸಿಬ್ಬಂದಿಗಳೇ ಮುಖ್ಯ ಕಾರಣ ಎಂದು ಆರೋಪಿಸಿ ಮಗುವಿನ ತಾಯಿ ಅಂಜು ಸಿಡಿಪಿಒ ಆಶಾ ಸೇರಿದಂತೆ ಅಂಗನವಾಡಿ ಸಿಬ್ಬಂದಿಗಳ ಮೇಲೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪುರಸಭಾ ಸದಸ್ಯ ಪ್ರೇಮ್ ಸಾಗರ್, ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜ್, ಗ್ರಾಪಂ ಸದಸ್ಯ ಸೋಮೇಶ್, ದಸಂಸ ಸಂಚಾಲಕ ಸಣ್ಣಕುಮಾರ್, ಪ್ರಕಾಶ್, ಚಿಕ್ಕಮಾದು ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ರಾಜನಾಯಕ, ಮುಖಂಡರಾದ ಕಲೀಂ, ನಿಂಗರಾಜು, ಶೇಖರ್, ಬೆಟ್ಟನಾಯ್ಕ, ಉಮೇಶ್, ನಾಗನಾಯಕ, ದಾಸನಾಯ್ಕ, ಅಂಕನಾಯಕ, ನಿಂಗನಾಯ್ಕ ಇದ್ದರು.