ಸಾರಾಂಶ
ಯಾದಗಿರಿ ನಗರದ ಕನಕದಾಸರ ವೃತ್ತದಲ್ಲಿ ಜಿಲ್ಲಾ ಕುರುಬ ಸಂಘದ ವತಿಯಿಂದ ರೇವಣಸಿದ್ದೇಶ್ವರರ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಹಾಲುಮತ ಸಮಾಜದ ಜಗದ್ಗುರು ರೇವಣಸಿದ್ದೇಶ್ವರರು ಮೊದಲ ಲಿಂಗದೀಕ್ಷಕರು ಹಾಗೂ ಶಿವನ ಆರಾಧಕರಾಗಿದ್ದರು ಎಂದು ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ಹೇಳಿದರು.ನಗರದ ಕನಕದಾಸರ ವೃತ್ತದಲ್ಲಿ ಜಿಲ್ಲಾ ಕುರುಬ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರೇವಣಸಿದ್ದೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ರೇವಣಸಿದ್ದೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ರೇವಣಸಿದ್ದೇಶ್ವರರವರು ಮೊಟ್ಟ ಮೊದಲ ಲಿಂಗಾರಾಧಕರಾಗಿದ್ದರು. ಜಗದ್ಗುರು ಶಂಕರಾಚಾರ್ಯರಿಗೆ ಲಿಂಗಮೈಳೇಶ್ವರ ಲಿಂಗವನ್ನು ನೀಡಿ ಆಶೀರ್ವದಿಸಿದ್ದರು. ಅವರ ಜೀವಿತಾವಧಿಯಲ್ಲಿ ಹಲವಾರು ಪವಾಡ ಮಾಡುತ್ತಾ, ಮುದ್ದೇಬಿಹಾಳದ ಸರೂರು ಸುಕ್ಷೇತ್ರದಲ್ಲಿ ಶಾಂತಮಯ ಶ್ರೀಗಳಿಗೆ ದೀಕ್ಷೆ ನೀಡಿ ಹಾಲುಮತ ಸಮಾಜದ ಏಳಿಗೆಗಾಗಿ ಶ್ರಮಿಸಿದಂತ ಮಹಾನ್ ಪವಾಡ ಪುರುಷರಾಗಿದ್ದರು. ಅವರ ತರುವಾಯ ಬಸವಾದಿ ಶರಣರು ಲಿಂಗದೀಕ್ಷೆ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದರು.ರಾಜ್ಯ ಸರಕಾರವು ಮುದ್ದೇಬಿಹಾಳ ತಾಲೂಕಿನ ಸರೂರಿನ ಹಾಲುಮತ ಧರ್ಮ ಗುರುಪೀಠದ ಅಭಿವೃದ್ಧಿ ಪಡಿಸುವುದರ ಜತೆಗೆ ರೇವಣಸಿದ್ದೇಶ್ವರರ ಅಧ್ಯಯನ ಪೀಠ ಸ್ಥಾಪಿಸಿ, ಸರ್ಕಾರದಿಂದಲೇ ಅವರ ಜಯಂತಿಯನ್ನು ಆಚರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಕುರುಬ ಸಂಘದ ತಾಲೂಕು ಅಧ್ಯಕ್ಷ ಹೊನ್ನಪ್ಪ ಮುಷ್ಟೂರ, ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಕಸಬಿ, ಭೀಮರಾಯ ಠಾಣಗುಂದಿ, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಕರ್ಕಳ್ಳಿ, ಸಾಹಿತಿ ಶ್ರೀಶೈಲ್ ಪೂಜಾರಿ, ಶರಣಪ್ಪ ಬೋಳಾರಿ, ಸಾಬಣ್ಣ ಬಳಿಚಕ್ರ, ಮರಿಲಿಂಗಪ್ಪ ಗಡ್ಡೆಸೂಗುರ, ರಾಕೇಶ್ ನೀಲಹಳ್ಳಿ, ಬೀರಲಿಂಗ ಅರಿಕೇರಿ, ಭೀಮಾಶಂಕರ್ ಹತ್ತಿಕುಣಿ, ಬೀರಲಿಂಗ ಕನಕನಗರ, ಬಸವರಾಜ್ ಕಾವಲಿ, ಬೀರಪ್ಪ ಮುಂಡರಗಿ, ಭೀಮಣ್ಣ ಪೂಜಾರಿ ಇತರರಿದ್ದರು.