ದೇವೇಗೌಡರಂತೆ ಮೊಮ್ಮಗ ಪ್ರಜ್ವಲ್‌ ರೇವಣ್ಣನಿಗೂ ಬುದ್ಧಿ ಕಲಿಸಿ: ಉಸ್ತುವಾರಿ ಮಂತ್ರಿ ರಾಜಣ್ಣ

| Published : Mar 23 2024, 01:02 AM IST

ದೇವೇಗೌಡರಂತೆ ಮೊಮ್ಮಗ ಪ್ರಜ್ವಲ್‌ ರೇವಣ್ಣನಿಗೂ ಬುದ್ಧಿ ಕಲಿಸಿ: ಉಸ್ತುವಾರಿ ಮಂತ್ರಿ ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ದೇವೇಗೌಡರಿಗೆ ಹಿಂದೆ ತುಮಕೂರಿನ ಜನ ಸೋಲಿಸುವ ಮೂಲಕ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಹಾಗೆಯೇ ಈ ಬಾರಿ ಹಾಸನದ ಜನರು ಅವರ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು ಸೋಲಿಸುವ ಮೂಲಕ ಅವರಿಗೂ ಬುದ್ಧಿ ಕಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಹಾಸನದಲ್ಲಿ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿದರು.

ದಲಿತ ಮುಖಂಡರ ಸಭೆ । ಶ್ರೇಯಸ್‌ ಪಟೇಲ್‌ ಗೆಲ್ಲಿಸಿ

ಕನ್ನಡಪ್ರಭ ವಾರ್ತೆ ಹಾಸನ

ತಮ್ಮ ಕುಟುಂಬದ ಶ್ರೇಯಸ್ಸನ್ನಷ್ಟೇ ಬಯಸುವ ದೇವೇಗೌಡರಿಗೆ ಹಿಂದೆ ತುಮಕೂರಿನ ಜನ ಸೋಲಿಸುವ ಮೂಲಕ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಹಾಗೆಯೇ ಈ ಬಾರಿ ಹಾಸನದ ಜನರು ಅವರ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು ಸೋಲಿಸುವ ಮೂಲಕ ಅವರಿಗೂ ಬುದ್ಧಿ ಕಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ನಗರದ ಕರಾವಳಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ್ದ ದಲಿತ ಮುಖಂಡರ ಸಭೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ‘ದಲಿತ ಸಮುದಾಯ ಮನಸ್ಸು ಮಾಡಿದರೆ ಒಂದು ಬದಲಾವಣೆ ತರಬಹುದು. ಶಿವಲಿಂಗೇಗೌಡರ ಕ್ಷೇತ್ರದಲ್ಲಿ ಇಪ್ಪತ್ತು ಸಾವಿರ ಒಕ್ಕಲಿಗರು ಇರಬಹುದು. ದಲಿತರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ನಾನು ಮತ್ತು ಶಿವಲಿಂಗೇಗೌಡರೇ ಉದಾಹರಣೆ. ಪುಟ್ಟಸ್ವಾಮಿಗೌಡ ಎಂದರೆ ದೇವರಂತಹ ಮನಷ್ಯ ಎನ್ನುತ್ತಾರೆ. ಅಂತಹ ಸರ ಕುಟುಂಬದಿಂದ ಚುನಾವಣೆಗೆ ಬಂದಿರುವುದು ಸೌಭಾಗ್ಯ’ ಎಂದು ಹೇಳಿದರು.

ದಲಿತ ಸಮಾಜವಾಗಲೀ, ಯಾರೇ ಆಗಲೀ ಕೆಳವರ್ಗ ಮತ್ತು ಮೇಲ್ವರ್ಗ ಎಂದು ಮಾತನಾಡಬೇಡಿ ಎಂದು ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟು ಸಮಾಜದಲ್ಲಿ ಉನ್ನತ ಮಟ್ಟಕ್ಜೆ ಹೋಗಲು ಅವಕಾಶ ನೀಡಿ. ಈ ಬಾರಿ ದಲಿತರೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಬೇಕು. ದೇವೇಗೌಡರ ಮೊಮ್ಮಗನನ್ನು ಸೋಲಿಸಿ, ಪುಟ್ಟಸ್ವಾಮಿ ಗೌಡರ ಮೊಮ್ಮಗನನ್ನು ಗೆಲ್ಲಿಸಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿ ಹಾಸನ ರಾಜಕಾರಣದಲ್ಲಿ ಇತಿಹಾಸ ಬರೆಯಬೇಕು. ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಲು ಮುಂದಾಗಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ‘ನಿಮ್ಮ ಮನೆ ಮಗನಾಗಿ ನಿಮ್ಮೆಲ್ಲರ ಜೊತೆ ಇರುತ್ತೇನೆ. ಜೆಡಿಎಸ್ ಪಕ್ಷದಲ್ಲಿ ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಹಾಗೂ ಜಿಲ್ಲಾ ಪಂಚಾಯಿತಿವರೆಗೂ ಜಿಲ್ಲೆಯ ಜನರು ಅವಕಾಶ ನೀಡಿದ್ದು, ಈ ಬಾರಿ ನನಗೆ ಸೇವೆ ಮಾಡುವ ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು.

ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ಮಾದಿಗ ದಂಡೋರದ ಮುಖಂಡರಾದ ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ಎಚ್.ಕೆ. ಮಹೇಶ್, ಮುರುಳಿಧರ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ವಾಲ್ಮಿಕಿ ಸಮಾಜದ ಜಿ.ಒ. ಮಹಾಂತಪ್ಪ, ದಲಿತ ಸಂಘರ್ಷ ಸಮಿತಿ ಮುಖಂಡ ರಾಜಶೇಖರ್ ಇದ್ದರು.

ಹಾಸನದ ದಲಿತ ಮುಖಂಡರ ಸಭೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಮಾತನಾಡಿದರು.