ಫೈನಾನ್ಸಿಯರ್‌ನನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣದ ಸಂಬಂಧ ರೌಡಿಶೀಟರ್ ಬೇಕರಿ ರಘುನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಫೈನಾನ್ಸಿಯರ್‌ನನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣದ ಸಂಬಂಧ ರೌಡಿಶೀಟರ್ ಬೇಕರಿ ರಘುನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ (ಕೋಕಾ) ರಾಘವೇಂದ್ರ ಅಲಿಯಾಸ್ ಬೇಕರಿ ರಘುನನ್ನು ಬಂಧಿಸಲಾಗಿದೆ. ಫೈನಾನ್ಸಿಯರ್‌ ಮನೋಜ್‌ ಎಂಬುವರನ್ನು ಅಪಹರಿಸಿದ್ದ ಆರೋಪದಡಿ ಕಳೆದ ಆಗಸ್ಟ್‌ನಲ್ಲಿ ರಾಜೇಶ್, ಸೀನಾ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಸೇರಿ 11 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಬೇಕರಿ ರಘು ಕೈವಾಡವಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಆತನನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಕರಣ ವಿವರ: ಮನೋಜ್ ಅವರಿಗೆ ಪರಿಚಿತನಾಗಿದ್ದ ಆರೋಪಿ ರಾಜೇಶ್‌, ಸಿನಿಮಾ ನಿರ್ದೇಶಕರೊಬ್ಬರಿಗೆ 1.20 ಲಕ್ಷ ರು. ಸಾಲ ಕೊಡಿಸಿದ್ದ. ಆದರೆ, ಒಂದು ವರ್ಷ ಕಳೆದರೂ ಸಾಲದ ಹಣವನ್ನು ನಿರ್ದೇಶಕ ಹಿಂತಿರುಗಿಸದಿದ್ದಾಗ ರಾಜೇಶ್ ಮೇಲೆ ಮನೋಜ್ ಒತ್ತಡ ಹೇರಿದ್ದರು. ಆ.26 ರಂದು ಸಂಜೆ 6.30ಕ್ಕೆ ಹಣ ಕೊಡುವುದಾಗಿ ರಾಜಾಜಿನಗರದ ಮೋದಿ ಆಸ್ಪತ್ರೆ ಸರ್ಕಲ್‌ಗೆ ಮನೋಜ್‌ನನ್ನು ರಾಜೇಶ್ ಕರೆಸಿಕೊಂಡಿದ್ದ. ಬಳಿಕ ದೊಡ್ಡವರು ಹಣ ಕೊಡುತ್ತಾರೆ ಎಂದು ಕಾರಿಗೆ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದ. ಮಾರ್ಗ ಮಧ್ಯೆ ಮನೋಜ್‌ನನ್ನು ಮತ್ತೊಂದು ಕಾರಿನಲ್ಲಿ ಕೂರಿಸಿಕೊಂಡು ಆರೋಪಿಗಳು ಅಪಹರಿಸಿದ್ದರು.ಅಲ್ಲದೇ, ನಗರದ ವಿವಿಧೆಡೆ ಸುತ್ತಾಡಿಸಿದ ಬಳಿಕ ಮಾರಕಾಸ್ತ್ರ ತೋರಿಸಿ, ಬೆದರಿಸಿ ಮನೋಜ್‌ ಅವರ ಎರಡು ಖಾತೆಗಳಿಂದ ಒಟ್ಟು 2.96 ಲಕ್ಷ ರು. ವರ್ಗಾಯಿಸಿಕೊಂಡಿದ್ದರು. ನಂತರವೂ 10 ಲಕ್ಷ ರು. ಕೊಡುವಂತೆ ಬೆದರಿಸಿದ್ದರು. 10 ಲಕ್ಷ ಹಣ ನೀಡುವುದಾಗಿ ಮನೋಜ್ ಕುಮಾರ್ ಒಪ್ಪಿಕೊಂಡ ಬಳಿಕ ಮಾರನೇ ದಿನ ಮಧ್ಯಾಹ್ನ ಅವರನ್ನು ಜ್ಞಾನಭಾರತಿ ಕ್ಯಾಂಪಸ್‌ ಬಳಿ ಕಾರಿನಿಂದ ಇಳಿಸಿ ಹೋಗಿದ್ದರು. ಬಳಿಕ ಮನೋಜ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ ವಿರುದ್ಧ 20 ಕ್ಕೂ ಹೆಚ್ಚು ಪ್ರಕರಣಆರೋಪಿ ಬೇಕರಿ ರಘು ವಿರುದ್ಧ ನಗರದ 10 ಠಾಣೆಗಳಲ್ಲಿ ಸುಮಾರು 20ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಮಂಡ್ಯದಲ್ಲಿ ಆತನನ್ನು ಬಂಧಿಸಲಾಗಿದೆ. ಬಂಧನಕ್ಕೆ ತೆರಳಿದ್ದಾಗ ಮಹಿಳೆಯೊಬ್ಬರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಅವರ ವಿರುದ್ಧ ಮಂಡ್ಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೂ ಒಟ್ಟು 12 ಜನರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಡಿಸಿಪಿ ಶ್ರೀಹರಿ ಬಾಬು ತಿಳಿಸಿದ್ದಾರೆ.