ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಹುಟ್ಟಿದಾಗ ಪ್ರತಿಯೊಬ್ಬರೂ ಸಣ್ಣವರೇ ಇರುತ್ತಾರೆ. ಅನುಭವ, ಪರಿಸರ ಜ್ಞಾನದಿಂದ ದೊಡ್ಡವರಾಗುತ್ತಾರೆ. ದೇವರ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳಿ ಎಂದು ಸ್ಥಳೀಯ ಸಿದ್ದಾರೂಢ ಮಠದ ಸಹಜಾನಂದ ಸ್ವಾಮೀಜಿ ಹೇಳಿದರು.ಸ್ಥಳೀಯ ಜವಳಿ ಬಜಾರದಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದ ಯಲ್ಲಮ್ಮ ದೇವಿ ದೇವಸ್ಥಾನದ ಕಳಸಾರೋಹಣ, ಮಲ್ಲೆಮ್ಮ ದೇವಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಒಂದಾನೊಂದು ಕಾಲದಲ್ಲಿ ಈ ಜವಳಿ ಬಜಾರ ವೈಭವದ ಓಣಿಯಾಗಿತ್ತು. ಇಲ್ಲಿಂದ ದಾವಣಗೆರೆಗೆ ಸೀರೆ ಒಯ್ದು ಅಲ್ಲಿಂದ ನೂಲು ತಂದು ಮತ್ತೆ ಸೀರೆ ತಯಾರಿಸುತ್ತಿದ್ದರು. ಪಟ್ಟಣದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೃದಯ ಭಾಗವಾಗಿತ್ತು. ಈ ಪ್ರದೇಶದಲ್ಲಿ ಅರ್ಧ ಶತಮಾನಗಳ ಹಿಂದೆ ನಿರ್ಮಿಸಿದ ಯಲ್ಲಮ್ಮನ ಗುಡಿ ಕಳಸಾರೋಹಣ ನೆರವೇರಿಸಿದ್ದು, ಸಾರ್ಥಕ ಕ್ಷಣ ಇದು ಪ್ರತಿಯೊಬ್ಬರಿಗೂ ದೇವರ ಸಾನ್ನಿಧ್ಯ ಒದಗಿಸುವ ಕೆಲಸ ಎಂದರು.
ಚಿಮ್ಮಡ ವಿರಕ್ತ ಮಠದ ಪ್ರಭುಸ್ವಾಮೀಜಿ ಮಾತನಾಡಿ, ಭಕ್ತರು ಅತ್ಯಂತ ಕಠಿಣ ಪರಿಶ್ರಮ ಮತ್ತು ಛಲದಿಂದ ಇಂತಹ ದೇವಸ್ಥಾನ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.ರನ್ನ ಬೆಳಗಲಿಯ ಸಿದ್ಧರಾಮ ಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೂ ತಾಳ್ಮೆಯೇ ಮುಖ್ಯ ತಾಳ್ಮೆಯಿಂದ ಮಾನವ ದೇವನಾಗಬಹುದು. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಸರ್ಕಾರದಿಂದ ದೇವಸ್ಥಾನಕ್ಕೆ ₹೫ ಲಕ್ಷ ಅನುದಾನ ಒದಗಿಸುವ ಭರವಸೆ ನೀಡಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿದ್ಯಾಧರ ಸವದಿ ಮತ್ತು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಶಾಸಕ ಸಿದ್ದು ಸವದಿಯವರ ಅನುದಾನದಿಂದ ₹೫ ಲಕ್ಷ ದೇಣಿಗೆ ನೀಡುವ ಭರವಸೆ ನೀಡಿದರು.
ಮರೆಗುದ್ದಿ ಅಡವಿ ಸಿದ್ದೇಶ್ವರ ಮಠದ ಡಾ.ನಿರುಪಾಧೀಶ್ವರ ಸ್ವಾಮೀಜಿ ನೈತೃತ್ವದಲ್ಲಿ ಕಳಸಾರೋಹಣ ಮತ್ತು ಮೂರ್ತಿ ಪ್ರತಿಷ್ಠಾಪನೆ ಜರುಗಿತು. ಡಾ.ಬಸವರಾಜ ದುಂಡಪ್ಪ ಸೋರಗಾಂವಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಎರಡು ದಿನಗಳ ಕಾಲ ಕುಂಭಮೇಳ, ಮೂರ್ತಿ ಮತ್ತು ಕಳಸ ಮೆರವಣಿಗೆ, ಲಕ್ಷ ದೀಪೋತ್ಸವ ಹೋಮಹವನ, ಉಡಿತುಂಬುವ ಕಾರ್ಯಕ್ರಮ, ಮಹಾಪ್ರಸಾದ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಶಂಕರಗೌಡ ಪಾಟೀಲ, ಅಲ್ಲಪ್ಪ ಗುಂಜಿಗಾಂವಿ ಇದ್ದರು.