- ವಿದ್ಯುತ್‌ ಟಿಸಿ ಬಳಿಯ ಅಂಗಡಿ । ಹೆಚ್ಚಿನ ಅನಾಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗುಜರಿ ಅಂಗಡಿಯಲ್ಲಿ ಕಾಣಿಸಿದ ಬೆಂಕಿ ಸುಮಾರು 2 ಗಂಟೆಗೂ ಅಧಿಕ ಕಾಲ ಹೊತ್ತಿ ಉರಿದು, ಟಾಟಾ ಏಸ್ ವಾಹನ, ಸ್ಕೂಟರ್, ಗುಜರಿಗೆ ಬಂದಿದ್ದ ಬ್ಯಾಟರಿಗಳು, ರೆಫ್ರಿಜಿರೇಟರ್‌ಗಳು ಸುಟ್ಟು ಕರಕಲು ಮಾಡಿದ ಘಟನೆ ನಗರದ ಕೆ.ಟಿ.ಜೆ. ನಗರದಲ್ಲಿ ಸೋಮವಾರ ಸಂಭವಿಸಿದೆ.

ಕೆ.ಟಿ.ಜೆ. ನಗರದ 8ನೇ ಕ್ರಾಸ್, 3ನೇ ಮುಖ್ಯ ರಸ್ತೆಯ ಸುಧಾ ಲಾಡ್ಜ್, ವಿದ್ಯಾರ್ಥಿ ಭವನ ಕಟ್ಟಡದ ಹಿಂಭಾಗದ ಗುಜರಿ ಅಂಗಡಿಯಲ್ಲಿ ಮಧ್ಯಾಹ್ನ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆಯೇ ಬೆಂಕಿಯು ಜೋರಾಗಿ ಹೊತ್ತಿ ಉರಿಯಲಾರಂಭಿಸಿತು. ಗುಜರಿಯಲ್ಲಿ ಪ್ಲಾಸ್ಟಿಕ್ ಚೀಲ, ಬಾಟಲುಗಳು, ಪತ್ರಿಕೆಗಳು, ಪುಸ್ತಕಗಳು, ಕೆಮಿಕಲ್‌ ಡಬ್ಬಗಳು ಇದ್ದುದರಿಂದ ಬೆಂಕಿಜ್ವಾಲೆ ಹೆಚ್ಚಾಗಿ ಜೋರಾಗಿ ಉರಿಯತೊಡಗಿದೆ.


ಬೆಂಕಿ ಹೊತ್ತಿಕೊಂಡಿದ್ದ ಗುಜರಿ ಅಂಗಡಿ ಪಕ್ಕದಲ್ಲೇ ಟ್ರಾನ್ಸ್‌ಫಾರ್ಮರ್ ಇದ್ದು, ಒಂದುವೇಳೆ ಬೆಂಕಿ ಕೆನ್ನಾಲಿಗೆ ಏನಾದರೂ ಟಿ.ಸಿ. ಕಡೆಗೆ ಹೊರಳಿದ್ದಿದ್ದರೆ ದೊಡ್ಡ ಅನಾಹುತವೇ ಆಗುವಂತಹ ಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. 2 ಗಂಟೆಗೂ ಹೆಚ್ಚು ಕಾಲ ಗುಜರಿ ಅಂಗಡಿಯಲ್ಲಿ ಬೆಂಕಿ ಉರಿಯಿತು. ಅಂಗಡಿ ಎದುರು ನಿಲ್ಲಿಸಿದ್ದ ಟಾಟಾ ಏಸ್ ವಾಹನ, ಸ್ಕೂಟರ್ ಸಹ ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳದ 2 ವಾಹನಗಳು ಸ್ಥಳಕ್ಕೆ ಧಾವಿಸಿ, ನಿರಂತರ ಗಂಟೆ ಕಾಲ ಪ್ರಯತ್ನಿಸಿದರೂ ಬೆಂಕಿ ನಂದಿಸಲು ಹರಸಾಹಸಪಡಬೇಕಾಯಿತು. ಸುಮಾರು ಹೊತ್ತಿನ ನಂತರ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ಆದರೆ, ಟಾಟಾ ಏಸ್ ವಾಹನ, ಸ್ಕೂಟರ್ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಇಬ್ಬರು ಅಮಾಯಕರ ಕಣ್ಣೀರಿಗೆ ಉತ್ತರ ಸಿಗದಂತಾಗಿತ್ತು. ಅದರಲ್ಲೂ ಸ್ಕೂಟರ್ ಮಾಲೀಕ ಹನುಮಂತಪ್ಪ ಗುಜರಿಗೆ ಪೇಪರ್ ಹಾಕಲೆಂದು ಬಂದಿದ್ದವರು ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದರು.

ಘಟನೆಯಲ್ಲಿ ಲಕ್ಷಾಂತರ ರು.ಗಳಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-2ಕೆಡಿವಿಜಿ22: ಬೆಂಕಿಯಿಂದ ಅಂಗಡಿ, ಟಾಟಾ ಏಸ್ ವಾಹನ, ಸ್ಕೂಟರ್‌ ಹೊತ್ತಿ ಉರಿಯುತ್ತಿರುವುದು.

-2ಕೆಡಿವಿಜಿ23: ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.