ಆಂಧ್ರ ಪ್ರದೇಶದಿಂದ ಅನಧಿಕೃತವಾಗಿ ಬತ್ತ ತಂದು, ವ್ಯಾಪಾರ ವಹಿವಾಟು ಮಾಡಾಗುತ್ತಿದೆಯೆಂದು ಆರೋಪಿಸಿ ಆವರಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬತ್ತದ ಲೋಡ್‌ ಲಾರಿ ಹಿಡಿದು ಎಪಿಎಂಸಿ ಕಚೇರಿಗೆ ತಂದು ಪ್ರತಿಭಟಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

- ಅಕ್ರಮದಲ್ಲಿ ಎಪಿಎಂಸಿ ಅಧಿಕಾರಿಗಳೂ ಶಾಮೀಲು: ಆರೋಪ । ಬತ್ತದ ಲಾರಿ ತಡೆಹಿಡಿದ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ, ರೈತರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಂಧ್ರ ಪ್ರದೇಶದಿಂದ ಅನಧಿಕೃತವಾಗಿ ಬತ್ತ ತಂದು, ವ್ಯಾಪಾರ ವಹಿವಾಟು ಮಾಡಾಗುತ್ತಿದೆಯೆಂದು ಆರೋಪಿಸಿ ಆವರಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬತ್ತದ ಲೋಡ್‌ ಲಾರಿ ಹಿಡಿದು ಎಪಿಎಂಸಿ ಕಚೇರಿಗೆ ತಂದು ಪ್ರತಿಭಟಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

ನಗರದ ಎಪಿಎಂಸಿ ಪ್ರಾಂಗಣಕ್ಕೆ ಆಂಧ್ರ ಪ್ರದೇಶದಿಂದ ಅನಧಿಕೃತವಾಗಿ ತಂದಿದ್ದ ಬತ್ತವನ್ನು ಇಲ್ಲಿ ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ನೇತೃತ್ವದಲ್ಲಿ ಆವರಗೆರೆ, ಸುತ್ತಮುತ್ತಲಿನ ರೈತರು ಲಾರಿಯನ್ನು ಎಪಿಎಂಸಿ ಬಳಿ ತಂದು ಪ್ರತಿಭಟಿಸಿದರು.

ಇದೇ ವೇಳೆ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ದಾವಣಗೆರೆ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಬತ್ತದ ವ್ಯಾಪಾರ ವಹಿವಾಟು ಕಡ್ಡಾಯವಾಗಿ ಇ-ಟೆಂಡರ್ ಪದ್ಧತಿಯಲ್ಲೇ ನಡೆಸಬೇಕೆಂಬ ನಿಯಮವಿದೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ನೆರೆಯ ರಾಜ್ಯಗಳಿಂದ ತಂದ ಬತ್ತವನ್ನು ನೇರವಾಗಿ ಅನಧಿಕೃತವಾಗಿ ವ್ಯಾಪಾರ, ವಹಿವಾಟನ್ನು ನಡೆಸಲಾಗುತ್ತಿದೆ. ಇದರಿಂದ ಬತ್ತದ ದರ ಕುಸಿತ ಕಂಡಿದೆ. ಮಾರುಕಟ್ಟೆ ಶುಲ್ಕ ಪಾವತಿ ಆಗುವುದಿಲ್ಲ. ಎಪಿಎಂಸಿ ಅಧಿಕಾರಿಗಳೂ ಇಂತಹ ಅನಧಿಕೃತ ವ್ಯಾಪಾರ, ವಹಿವಾಟಿನಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ನಾವೆಲ್ಲಾ ಅನಧಿಕೃತ ವ್ಯಾಪಾರ ವಹಿವಾಟಿನ ಬತ್ತದ ಲಾರಿ ಲೋಡ್‌ ಲಾರಿ ತಂದು ಎಪಿಎಂಸಿ ಬಳಿ ಪ್ರತಿಭಟಿಸುತ್ತಿದ್ದರೆ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಶ್ರೀಹರಿ, ಗಿರೀಶ ನಾಯ್ಕ, ಕಚೇರಿ ಸೂಪರ್ ವೈಸರ್ ಪ್ರಸನ್ನ ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಕಚೇರಿಯಲ್ಲಿ ಹೊರಗೆ, ಒಳಗೆ ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ರೊಚ್ಚಿಗೆದ್ದ ರೈತರು ಕಚೇರಿಗೆ ನುಗ್ಗಿ ಅನಧಿಕೃತ ವ್ಯಾಪಾರ ವಹಿವಾಟು ನಡೆಸುತ್ತಿದ್ದವರನ್ನು ಇಲ್ಲಿಗೆ ಕರೆಸುವಂತೆ ಪಟ್ಟುಹಿಡಿದರು.

ಅನಧಿಕೃತ ವ್ಯಾಪಾರ-

ಬತ್ತ ತಂದಿದ್ದ ಭೀಮಣ್ಣ ಎಂಬ ವ್ಯಕ್ತಿಯನ್ನು ಕಚೇರಿಗೆ ಕರೆಸಿದಾಗ ಆತ ತಾನು ರೈತನಲ್ಲ. ಬತ್ತ ಬೆಳೆದ ರೈತರಿಂದ ಖರೀದಿಸಿ, ಹೆಚ್ಚಿನ ಲಾಭಕ್ಕಾಗಿ ಅನಧಿಕೃತವಾಗಿ ವ್ಯಾಪಾರ, ವಹಿವಾಟು ನಡೆಸುತ್ತಿರುವುದಾಗಿ ಹೇಳಿದರು. ತಾನು ಎಪಿಎಂಸಿಗೆ ಮಾರಾಟ ಮಾಡಿರುವುದಕ್ಕೆ ಬಿಲ್‌ಗಳಿವೆ. ಅದು ತನ್ನ ವೃತ್ತಿ ಎಂಬುದಾಗಿ ಭೀಮಣ್ಣ ವಾದಿಸಿದ. ನಂತರ ಮಧ್ಯ ಪ್ರವೇಶಿಸಿದ ಎಪಿಎಂಸಿ ಅಧಿಕಾರಿಗಳು, ಇನ್ನು ಮುಂದೆ ಹೀಗೆಲ್ಲಾ ಅನಧಿಕೃತ ವ್ಯಾಪಾರ ವಹಿವಾಟು ಮಾಡುದಂತೆ ಹೇಳಿ, ಆತನಿಗೆ ಅಲ್ಲಿಂದ ಕಳಿಸಿಕೊಟ್ಟರು.

ಕ್ರಮ ಕೈಗೊಳ್ಳದ್ದಕ್ಕೆ ಆಕ್ರೋಶ:

ಅದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಮಾತನಾಡಿ, ಎಪಿಎಂಸಿಯಲ್ಲಿ ಅನಧಿಕೃತವಾಗಿ ಬತ್ತ ವ್ಯಾಪಾರ, ವಹಿವಾಟು ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಎಪಿಎಂಸಿ ನಿಯಮಾನುಸಾರ, ಕಾನೂನು ಪ್ರಕಾರ ಕ್ರಮ ಕೈಗೊಳ್ಳದೇ ಬಿಟ್ಟು ಕಳಿಸಿದ ಎಪಿಎಂಸಿ ಅಧಿಕಾರಿಗಳು ಸಹ ಇಂತಹ ಅನಧಿಕೃತ ವ್ಯಾಪಾರ, ವಹಿವಾಟಿನಲ್ಲಿ ಭಾಗಿಯಾಗಿದ್ದಾರೆ ಎಂಬುದು ಇಲ್ಲಿನ ಬೆಳವಣಿಗೆಗಳು, ಘಟನೆಗಳಿಂದಲೇ ದೃಢಪಟ್ಟಿತು ಎಂದು ಆಕ್ರೋಶ ಹೊರಹಾಕಿದರು.

ಜಿಲ್ಲಾ ರೈತರ ಒಕ್ಕೂಟದಿಂದ ಎಪಿಎಂಸಿ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ, ದಾವಣಗೆರೆ ಎಪಿಎಂಸಿಯಲ್ಲಿ ನಡೆಯುತ್ತಿರುವ ಅನಧಿಕೃತ ವ್ಯಾಪಾರ ವಹಿವಾಟಿನ ಬಗ್ಗೆ ಗಮನಕ್ಕೆ ತಂದು, ಸೂಕ್ತ ತನಿಖೆಗೆ ಒತ್ತಾಯಿಸುತ್ತೇವೆ. ನಮ್ಮ ಬೇಡಿಕೆಯಂತೆ ತನಿಖೆ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪದ ಹೋರಾಟವನ್ನೂ ನಡೆಸುತ್ತೇವೆ ಎಂದು ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಎಚ್ಚರಿಸಿದರು.

ರೈತ ಮುಖಂಡರಾದ ಗೋಪನಾಳ್ ಎಸ್.ಆರ್.ರಾಜೇಂದ್ರ, ಪರಮೇಶ, ಅವರಗೆರೆ ಅಜ್ಜನಗೌಡ್ರು, ಪಿ.ಎಂ.ಮಂಜುನಾಥ, ಸಿ.ನಾರಪ್ಪ, ಎಸ್.ಬಿ.ಶ್ರೀಧರ, ಗೌಡ್ರ ಅಣ್ಣಪ್ಪ, ಕೆ.ಆರ್.ಶಿವ ಕುಮಾರ್, ಗೌಡ್ರ ಸುರೇಶ, ಧನ್ಯಕುಮಾರ, ಪಾಮೇನಹಳ್ಳಿ ಪರಮೇಶ್ವರಪ್ಪ, ಕಿತ್ತೂರು ಹಾಲೇಶ, ಪಾಮೇನಹಳ್ಳಿ ಮಂಜಪ್ಪ, ಕೊಡಗನೂರು ಶಿವಕುಮಾರ, ಶಿವಕುಮಾರ, ಧನ್ಯಕುಮಾರ, ಬಾರಿಕರ ಮಂಜಣ್ಣ, ಆವರಗೆರೆ ಶ್ರೀಧರ, ಮಂಜಣ್ಣ, ರುದ್ರೇಶ ಇತರರು ಇದ್ದರು.

- - -

-2ಕೆಡಿವಿಜಿ12: ದಾವಣಗೆರೆ ಎಪಿಎಂಸಿಗೆ ಆಂಧ್ರದಿಂದ ಬತ್ತ ತಂದು, ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದುದನ್ನು ಖಂಡಿಸಿ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದರು. -2ಕೆಡಿವಿಜಿ14: ದಾವಣಗೆರೆ ಎಪಿಎಂಸಿಗೆ ಆಂಧ್ರದಿಂದ ಬತ್ತ ತಂದು, ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಲಾರಿಯನ್ನು ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಆವರಗೆರೆ ಹಾಗೂ ಇತರೆ ಗ್ರಾಮಗಳ ರೈತರು ತಡೆದು, ಎಪಿಎಂಸಿಗೆ ತಂದು ನಿಲ್ಲಿಸಿರುವುದು.