ಕೃಷಿಕರಿಗೆ ಸಿಗುವ ಎಲ್ಲಾ ಸರ್ಕಾರಿ ಸೌಲಭ್ಯಗಳು ಮೀನುಗಾರರಿಗೂ ದೊರೆಯಬೇಕು ಎಂದು ಶಾಸಕ ಯಶ್ ಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಉಡುಪಿ: ಕರಾವಳಿಯ ಜನರ ಜೀವನೋಪಾಯವಾಗಿರುವ ಮೀನುಗಾರಿಕೆ ಕೂಡಾ ಕೃಷಿಯ ಒಂದು ಭಾಗವಾಗಿದೆ. ಭೂಮಿಯಲ್ಲಿ ರೈತರು ದುಡಿಯುವಂತೆ, ಮೀನುಗಾರರು ಕೂಡಾ ಸಮುದ್ರದಲ್ಲಿ ಜೀವದ ಹಂಗು ತೊರೆದು ನಡೆಸುವ ಕಷ್ಟದ ಉದ್ಯಮವಾಗಿದೆ. ಆದ್ದರಿಂದ ಕೃಷಿಕರಿಗೆ ಸಿಗುವ ಎಲ್ಲಾ ಸರ್ಕಾರಿ ಸೌಲಭ್ಯಗಳು ಮೀನುಗಾರರಿಗೂ ದೊರೆಯಬೇಕು ಎಂದು ಶಾಸಕ ಯಶ್ ಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೈಸೂರು ವಿಭಾಗದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ನಡೆದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮೀನುಗಾರಿಕೆಗೆ ಸಂಬಂಧಪಟ್ಟ ನಿಯಮಗಳು ಕೂಡಾ ಸಕಾಲದಿಂದ ಕಾಲಕ್ಕೆ ಬದಲಾಗುತ್ತವೆ. ಇದರಿಂದ ಮೀನುಗಾರರಿಗೆ ಸೌಲಭ್ಯಗಳಲ್ಲಿ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಮೀನುಗಾರಿಕೆಯ ನಿಯಮ ಮತ್ತು ಮೀನುಗಾರರಿಗೆ ಕೃಷಿಕರಿಗೆ ಸಿಗುವ ಸೌಲಭ್ಯಗಳು ಸ್ಪಷ್ಟವಾಗಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಅಧ್ಯಕತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು, ನಿರಂತರ ಕಲಿಕೆ ನಮ್ಮ ಕ್ಷೇತ್ರದಲ್ಲಿ ಯಶಸ್ಸಿಗೆ ಸಹಕಾರಿ. ಆ ನಿಟ್ಟಿನಲ್ಲಿ ಇಂದು ಹಮ್ಮಿಕೊಂಡ ಕಾರ್ಯಾಗಾರ ಎಲ್ಲರಿಗೂ ಮಹತ್ವವಾದದ್ದು ಎಂದರು.ಕರಾವಳಿಯ ಮೀನುಗಾರ ಸಮುದಾಯವು ಈ ಭಾಗದಲ್ಲಿ ಸಹಕಾರಿ ರಂಗದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ. ಅದೇ ರೀತಿ ಸಹಕಾರಿ ಕ್ಷೇತ್ರ ಹಾಗೂ ಮೀನುಗಾರಿಕೆ ಕ್ಷೇತ್ರ ಜತೆಜತೆಯಾಗಿ ಸಾಗುವ ಮೂಲಕ ತಮ್ಮ ಆರ್ಥಿಕ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕಾಗಿದೆ ಎಂದರು.
ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್.ಲಾವಣ್ಯ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ಬಿ.ವಿ., ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಮತ್ತಿತರರಿದ್ದರು.