ಗುಬ್ಬಿಗಳ ಗಾತ್ರ, ತೂಕ ಅತಿ ಕಡಿಮೆ ಇದ್ದು, ಗುಬ್ಬಿಗಳ ಸಂತತಿ ನಾಶಕ್ಕೆ ಮೊಬೈಲ್ ಟವರ್‌ನಿಂದ ಹೊರಸೂಸುವ ವಿಕಿರಣ ಕಾರಣ ಎಂದು ಬಹುತೇಕರು ತಿಳಿದಿದ್ದೇವೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ.

ಮುಂಡರಗಿ: ಮಾರುಕಟ್ಟೆಯಿಂದ ತರುವ ಎಲ್ಲ ಆಹಾರ ಧಾನ್ಯಗಳು ಸ್ವಚ್ಛಗೊಳಿಸಿ, ಪಾಕೇಟು ರೂಪದಲ್ಲಿ ಬರುತ್ತಿರುವುದರಿಂದ ಒಣಹಾಕುವ ಕ್ರಿಯೆ ನಿಂತಿದೆ. ಹೀಗಾಗಿ ಗುಬ್ಬಚ್ಚಿಗಳಿಗೆ ಆಹಾರ ಕೊರತೆಯಾಗುತ್ತಿದೆ. ಇದರಿಂದ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಜಿಲ್ಲಾ ವನ್ಯಜೀವ ಪರಿಪಾಲಕ ಪ್ರೊ. ಸಿ.ಎಸ್. ಅರಸನಾಳ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮಂಗಳವಾರ ಸುಜಲಾನ್ ಫೌಂಡೇಶನ್, ನೀಡ್ಸ್ ಸಂಸ್ಥೆ ಆಶ್ರಯದಲ್ಲಿ ಜರುಗಿದ ಗುಬ್ಬಚ್ಚಿ ಗೂಡುಗಳ ರಕ್ಷಣೆ ಅಭಿಯಾನದಲ್ಲಿ ಮಾತನಾಡಿ, ಈ ಮೊದಲು ಹಳ್ಳಿ, ಪಟ್ಟಣಗಳಲ್ಲಿ ಆಹಾರ ಧಾನ್ಯಗಳನ್ನು ತಂದು ಮನೆಯ ಮುಂದಿನ ಕಟ್ಟೆಯ ಮೇಲೆ ಅಥವಾ ಬಯಲಿನಲ್ಲಿ ಒಣಗಲು ಹಾಕುತ್ತಿದ್ದರು. ನಂತರ ಅಲ್ಲಿಯೇ ಕುಳಿತು ಸ್ವಚ್ಛಗೊಳಿಸುತ್ತಿದ್ದರು. ಅಲ್ಲಿನ ಕಾಳುಗಳನ್ನು ತಿನ್ನಲು ಗುಬ್ಬಚ್ಚಿಗಳು ಬರುತ್ತಿದ್ದವು ಎಂದರು.

ಗುಬ್ಬಿಗಳ ಗಾತ್ರ, ತೂಕ ಅತಿ ಕಡಿಮೆ ಇದ್ದು, ಗುಬ್ಬಿಗಳ ಸಂತತಿ ನಾಶಕ್ಕೆ ಮೊಬೈಲ್ ಟವರ್‌ನಿಂದ ಹೊರಸೂಸುವ ವಿಕಿರಣ ಕಾರಣ ಎಂದು ಬಹುತೇಕರು ತಿಳಿದಿದ್ದೇವೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಪೆಟ್ರೋಲ್‌ನಿಂದ ಹೊರಸೂಸುವ ಮಿಥೈಲ್ ನೈಟ್ರೇಟ್ ಬಿಡುಗಡೆಯಾದಾಗ ಅದು ಗುಬ್ಬಿ ತನ್ನ ಮರಿಗಳಿಗೆ ಕೊಡುವ ಸಣ್ಣ ಸಣ್ಣ ಕೀಟಗಳ ಮೇಲೆ ಪರಿಣಾಮ ಬೀರಿ ಅವುಗಳಿಗೆ ಆಹಾರ ಕೊರತೆಯಾಗಿ ಅವು ನಾಶವಾಗುವ ಸಂಭವ ಹೆಚ್ಚಾಗಿದೆ ಎಂದರು.

ತಾಲೂಕು ಪ್ರ. ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮಗೆ ನಿಸರ್ಗದತ್ತವಾಗಿ ಸಿಗುವ ವಾತಾವರಣದಲ್ಲಿ ದೊರೆಯುವ ಶಿಕ್ಷಣ ಹೆಚ್ಚು ಪರಿಣಾಮವಾಗಿರುತ್ತದೆ. ಗುಬ್ಬಚ್ಚಿ ಗೂಡುಗಳನ್ನು ನಾವೀಗ ಮಕ್ಕಳಿಗೆ ಚಿತ್ರಪಟದಲ್ಲಿ ತೋರಿಸುವ ಪರಿಸ್ಥಿತಿ ಉಂಟಾಗಿದೆ. ಗುಬ್ಬಿ ಇತರ ಪಕ್ಷಿಸಂಕುಲ ಪರಿಸರ ರಕ್ಷಣೆಗೆ ಸಹಾಯವಾಗುತ್ತವೆ. ಹೀಗಾಗಿ ಓದಿನ ಜತೆಗೆ ಇಂತಹ ವಿಷಯಗಳ ಕುರಿತು ತಿಳಿದುಕೊಳ್ಳಲು ಮುಂದಾಗಬೇಕು. ಇದು ಮಕ್ಕಳಲ್ಲಿ ಪರಿಸರಪ್ರಜ್ಞೆ ಬೆಳೆಸಲು ಸಹಾಯವಾಗುತ್ತದೆ ಎಂದರು.ಕೃಷಿ ಪಂಡಿತ ಪ್ರಶಸ್ಥಿ ಪುರಸ್ಕೃತ ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ರಾಸಾಯನಿಕ ಗೊಬ್ಬರವನ್ನು ಅತಿಯಾಗಿ ಬಳಕೆ ಮಾಡುತ್ತಿರುವುದರ ಪರಿಣಾಮವೇ ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖವಾಗಲು ಕಾರಣವಾಗಿದೆ. ಸಾವಯವ ಬಳಕೆಯಿಂದ ಮನುಷ್ಯನ ಆರೋಗ್ಯ ರಕ್ಷಣೆಯ ಜತೆಗೆ ಗುಬ್ಬಚ್ಚಿಗಳನ್ನೂ ರಕ್ಷಣೆ ಮಾಡಬಹುದು ಎಂದರು.

ಆಯುಷ್ಮಾನ್ ಇಲಾಖೆಯ ಅಧಿಕಾರಿ ಡಾ. ಪಿ.ಬಿ. ಹಿರೇಗೌಡರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುನಿತಾ, ಸಂಸ್ಥೆ ಜಿಲ್ಲಾ ಸಂಯೋಜಕ ಎಂ. ಕರಿಬಸಪ್ಪ, ಸಿಡಿಪಿಒ ಮಹಾದೇವ ಇಸರನಾಳ, ಸಿ.ಎಸ್.ಆರ್ ಅಭಿಲಾಷ, ಪಿ.ಎಸ್. ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನೀಡ್ಸ್ ಸಂಸ್ಥೆ ಸಿಇ ಎಚ್.ಎಫ್. ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಟಿ. ಇಮ್ರಾಪೂರ ಸ್ವಾಗತಿಸಿ, ಗುಡದಪ್ಪ ಲಿಂಗಶೆಟ್ಟರ ನಿರೂಪಿಸಿ, ಎಂ. ಕರಿಬಸಪ್ಪ ವಂದಿಸಿದರು.