ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಅಧಿವೇಶನದಲ್ಲಿ ಚರ್ಚಿಸುವಂತೆ ಆಗ್ರಹಿಸಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ ಅವರಿಗೆ ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ತಮ್ಮ ಜಮೀನಿನ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಾಗರಾಳಹುಲಿ ಗ್ರಾಮದ ರೈತ ಚಂದ್ರಶೇಖರ ಜಮ್ಮಲದಿನ್ನಿ ಹಾಗೂ ರಬಿನಾಳ ಗ್ರಾಮದ ಲಂಕೇಶ ತಳವಾರ ಎಂಬ ರೈತರ ಜಮೀನಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ. ಇವರ ಜಮೀನಿಗೆ ಹೋಗಲು ಇರುವ ಮುಖ್ಯ ರಸ್ತೆಗೆ ಹೊಂದಿಕೊಂಡು ಜಮೀನು ಇರುವ ರೈತರು ನಿಮ್ಮ ಜಮೀನಿಗೆ ನಕಾಶೆಯಲ್ಲಿ ದಾರಿಯಿಲ್ಲ ಎಂದು ತಕರಾರು ಮಾಡುತ್ತಿದ್ದಾರೆ. ಈ ಕುರಿತು ತಹಸೀಲ್ದಾರ್‌ಗೆ ಮನವಿ ಮಾಡಲಾಗಿದ್ದು, ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟ ಆದೇಶ ಉಲ್ಲೇಖಿಸಿಲ್ಲ. ನಕ್ಷೆ ಇದ್ದಲ್ಲಿ ಮಾತ್ರ ಅವಕಾಶ ಕಲ್ಪಿಸಲು ನಮಗೆ ಅಧಿಕಾರವಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದರು.
ಈ ವೇಳೆ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರೈತರು ತಮ್ಮ ಜಮೀನುಗಳಿಗೆ ಹೋಗಲು ಮುಂದಿನ ರೈತರು ದಾರಿ ಬಿಡದ್ದರಿಂದ ಬಿತ್ತನೆ ಮಾಡಲಾಗದೆ ಭೂಮಿ ಪಾಳು ಬಿದ್ದಿದೆ. ಇದು ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲಿನ ರೈತರ ದಾರಿ ಸಮಸ್ಯೆಯಾಗಿದೆ. ಈ ವಿಷಯವಾಗಿ ಕಳೆದ 10 ವರ್ಷಗಳಿಂದ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ನಂತರ ಸರ್ಕಾರ ಕಾಟಾಚಾರಕ್ಕೆ ಸೂತ್ತೋಲೆ ಹೊರಡಿಸಿದ್ದು, ತಹಸೀಲ್ದಾರಗಳು ಇಲ್ಲಿಯವರೆಗೆ ದಾರಿ ಬಿಡಿಸಿಕೊಟ್ಟ ಉದಾಹರಣೆಗಳೇ ಇಲ್ಲ ಎಂದು ದೂರಿದರು. ಆದ್ದರಿಂದ, ವಿಜಯಪುರ ಜಿಲ್ಲೆ ಸೇರಿ ಹಳ್ಳಿಗಳಲ್ಲಿ ಇಂತಹ ಘಟನೆಗಳಿಂದ ರೈತರ ಮಧ್ಯೆ ದ್ವೇಷದ ವಾತಾವರಣ ಉಂಟಾಗಿದೆ ಎಂದರು.ಇಂತಹ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಏಕೆ ಪರಿಗಣಿಸುತ್ತಿಲ್ಲವೆಂದು ತಿಳಿಯದಂತಾಗಿದೆ. ಸರ್ಕಾರಕ್ಕೆ ದಾರಿ ಸಮಸ್ಯೆ ಬಗೆಹರಿಸಲು ಆಗದಿದ್ದರೆ ರೈತ ಒಂದು ಕುಟುಂಬಕ್ಕೆ ಎಷ್ಟು ಜಮೀನು ಹೊಂದಿದ್ದಾರೋ, ಪ್ರತಿ ವರ್ಷ ಎಷ್ಟು ಫಸಲು ಬೆಳೆಯುತ್ತಾರೋ, ಪ್ರತಿ ಎಕರೆಯಂತೆ ಪ್ರತಿ ವರ್ಷ ದಾರಿ ಇಲ್ಲದೆ ಬಿತ್ತನೆ ಮಾಡಲಾಗದೆ ಬೆಳೆ ಬೆಳೆಯಲಾಗದ ರೈತ ಕುಟುಂಬದ ಉಪಜೀವನಕ್ಕೆ ಪರಿಹಾರ ನೀಡಲಿ. ಎರಡರಲ್ಲಿ ಸರ್ಕಾರ ಒಂದು ನಿರ್ಣಯಕ್ಕೆ ಬರಬೇಕು ಎಂದು ಆಗ್ರಹಿಸಿದರು. ತಿದ್ದುಪಡಿಗೆ ಕಾನೂನು ಅಡ್ಡಿಯಾದರೆ ಸುಗ್ರಿವಾಜ್ಞೆ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ ಎಂದರು.
ರಾಜ್ಯದ ಅಧಿವೇಶನದಲ್ಲಿ ದಾರಿಯ ಗಂಭೀರ ಸಮಸ್ಯೆಯನ್ನು ಸದನದಲ್ಲಿ ಚರ್ಚಿಸಿ ಅಗತ್ಯಬಿದ್ದರೆ ಕಾನೂನು ತಜ್ಞರ ಸಲಹೆ ಪಡೆದು ಕಾನೂನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಇದಕ್ಕೊಂದು ಹೊಸ ಕಾನೂನು ರೂಪಿಸಬೇಕು. ಸರ್ಕಾರ ಈ ವಿಷಯವಾಗಿ ಕ್ರಮ ಕೈಗೊಳ್ಳದಿದ್ದರೆ ಹಳ್ಳಿಗಳಲ್ಲಿ ರೈತರ ಮಧ್ಯೆ ನಿರಂತರ ಹೊಡೆದಾಟಗಳು ಮುಂದುವರೆಯುತ್ತವೆ. ಕೊನೆಗೆ ಕೊಲೆಯಾಗುವ ಹಂತಕ್ಕೆ ತಲಪುತ್ತವೆ. ಆದ್ದರಿಂದ ಇಂತಹ ಗಂಭೀರ ಸಮಸ್ಯೆಯನ್ನು ಚರ್ಚಿಸುವ ಮೂಲಕ ದಾರಿ ಸಮಸ್ಯೆಗೆ ಅಂತ್ಯ ಹಾಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಿದ್ದು ಕಣಿಯನಹುಂಡಿ ಮೈಸೂರು, ಕನಕಪುರದ ಜಗದೀಶ.ಹೆಚ್.ಎಂ, ಬಸಪ್ಪ ತೋಟದ ಇತರರು ಉಪಸ್ಥಿತರಿದ್ದರು.------------