ನಿರಂತರ ಮಳೆಗೆ ರು. ೧೮ ಕೋಟಿ ಮೊತ್ತದ ಮೂಲಸೌಕರ್ಯ ಹಾನಿ

| Published : Aug 12 2024, 01:00 AM IST

ಸಾರಾಂಶ

ಕಳೆದ ಜುಲೈನಿಂದ ಜಿಲ್ಲಾದ್ಯಂತ ಎಡೆಬಿಡದೇ ಸುರಿದ ಮಳೆಯಿಂದಾಗಿ ರಸ್ತೆ, ವಿದ್ಯುತ್ ಕಂಬ, ಶಾಲೆ, ಅಂಗನವಾಡಿ ಕಟ್ಟಡ, ವಿದ್ಯುತ್ ಟ್ರಾನ್ಸಫಾರ್ಮರ್ ಹೀಗೆ ಸುಮಾರು ೧೮.೧೦ ಕೋಟಿ ರು. ಮೊತ್ತದ ವಿವಿಧ ಮೂಲಭೂತ ಸೌಕರ್ಯಗಳು ಹಾನಿಯಾಗಿದೆ.

ಹಾವೇರಿ: ಕಳೆದ ಜುಲೈನಿಂದ ಜಿಲ್ಲಾದ್ಯಂತ ಎಡೆಬಿಡದೇ ಸುರಿದ ಮಳೆಯಿಂದಾಗಿ ರಸ್ತೆ, ವಿದ್ಯುತ್ ಕಂಬ, ಶಾಲೆ, ಅಂಗನವಾಡಿ ಕಟ್ಟಡ, ವಿದ್ಯುತ್ ಟ್ರಾನ್ಸಫಾರ್ಮರ್ ಹೀಗೆ ಸುಮಾರು ೧೮.೧೦ ಕೋಟಿ ರು. ಮೊತ್ತದ ವಿವಿಧ ಮೂಲಭೂತ ಸೌಕರ್ಯಗಳು ಹಾನಿಯಾಗಿದೆ. ಮಲೆನಾಡು ಭಾಗದಲ್ಲಿ ಕಳೆದ ಜುಲೈ ತಿಂಗಳು ಸುರಿದ ಅತೀವೃಷ್ಟಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ, ವರದೆ, ಧರ್ಮಾ, ಕುಮದ್ವತಿ ನದಿಗಳು ಉಕ್ಕಿ ಹರಿದ ಪರಿಣಾಮ ನದಿ ಪಾತ್ರದಲ್ಲಿರುವ ಹಲವು ಜಮೀನುಗಳು ಜಲಾವೃತಗೊಂಡು ರೈತರು ಬೆಳೆದ ಬೆಳೆಗಳಿಗೆ ಹಾನಿಯುಂಟಾಗಿದೆ. ಏತನ್ಮಧ್ಯೆ ವಾಡಿಕೆಗಿಂತ ಹೆಚ್ಚಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿರುವ ಕೆಲವು ಮೂಲಭೂತ ಸೌಕರ್ಯಗಳಿಗೆ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೂ ಹಾನಿಯಾಗಿದೆ. ಪ್ರಮುಖವಾಗಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಹೆದ್ದಾರಿ ರಸ್ತೆ, ಜಿಲ್ಲಾ ಮುಖ್ಯ ರಸ್ತೆ, ಸೇತುವೆಗಳು, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ವ್ಯಾಪ್ತಿಗೆ ಬರುವ ಗ್ರಾಮೀಣ ರಸ್ತೆ, ಕೆರೆಗಳು, ಸಣ್ಣ ಸೇತುವೆಗಳು, ಸರಕಾರಿ ಕಟ್ಟಡಗಳಾದ ಶಾಲೆ ಹಾಗೂ ಅಂಗನವಾಡಿನ ಕಟ್ಟಡಗಳು, ಹೆಸ್ಕಾಂಗೆ ಸಂಬಂಧಿಸಿದಂತೆ ವಿದ್ಯುತ್ ಕಂಬ, ವಿದ್ಯುತ್ ಟ್ರಾನ್ಸಫಾರ್ಮರ, ವಿದ್ಯುತ್ ತಂತಿಗಳು ಹೀಗೆ ಹಲವು ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು ೧೮೧೦.೬೨ಲಕ್ಷ ರು.ಗಳಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಸರ್ಕಾರಿ ಕಟ್ಟಡಗಳ ಹಾನಿ: ಸತತ ಮಳೆಯಿಂದಾಗಿ ಅಲ್ಪ ಸ್ವಲ್ಪ ಸೋರಿಕೆ, ಸಣ್ಣ ಪುಟ್ಟ ರಿಪೇರಿ ಕೆಲಸಗಳು ಇರುವುದರಿಂದ ಸರ್ಕಾರಿ ಕಟ್ಟಡಗಳ ಪೈಕಿ ಜಿಲ್ಲೆಯಲ್ಲಿ ೬೩೪ ಪ್ರಾಥಮಿಕ ಶಾಲಾ ಕಟ್ಟಡಗಳನ್ನು ಗುರುತಿಸಲಾಗಿದ್ದು, ಇವುಗಳ ಅಂದಾಜು ಹಾನಿ ೧೨೬೮ ಲಕ್ಷ ರು. ಗಳದ್ದಾಗಿದೆ. ಜತೆಗೆ ೮೪ ಅಂಗನವಾಡಿ ಕಟ್ಟಡಗಳಿಗೆ ಹಾನಿಯುಂಟಾಗಿದ್ದು, ೨೨೦ ಲಕ್ಷ ರು.ಗಳ ಹಾನಿ ಅಂದಾಜಿಸಲಾಗಿದೆ.ಲೋಕೊಪಯೋಗಿ ಇಲಾಖೆ ಹಾನಿ: ಎಡೆಬಿಡದೇ ಸುರಿದ ಮಳೆಯಿಂದ ನದಿಪಾತ್ರದಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಲೋಕೊಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮೂಲ ಸೌಕರ್ಯಗಳಿಗೂ ಹಾನಿಯುಂಟಾಗಿದೆ. ೧೩ಲಕ್ಷ ರು.ಗಳ ಅಂದಾಜಿನಲ್ಲಿ ೦.೭೦ಕಿಮೀ ರಾಜ್ಯ ಹೆದ್ದಾರಿ ರಸ್ತೆ, ೧೮೨ ಲಕ್ಷ ರು. ಮೌಲ್ಯದ ೧೮.೭೦ ಕಿಮೀ ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ೧೩ ಲಕ್ಷ ರು. ಮೌಲ್ಯದ ೩ ಸೇತುವೆಗಳಿಗೆ ಹಾನಿಯುಂಟಾಗಿದೆ. ಪಿಡಬ್ಲ್ಯೂಡಿ ಇಲಾಖೆ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶದ ಮುಖ್ಯ ರಸ್ತೆಗಳಿಗೆ ಹಾನಿಯುಂಟಾಗಿದೆ. ಸುಮಾರು ೩೦.೮೬ ಲಕ್ಷ ರು.ಗಳ ಅಂದಾಜಿನಲ್ಲಿ ೫೧.೪೩ ಕಿಮೀ ರಸ್ತೆ ಹಾಳಾಗಿದೆ. ೧೫ ಲಕ್ಷ ಅಂದಾಜಿನ ಒಂದು ಕೆರೆಗೆ ಹಾನಿಯುಂಟಾಗಿದೆ. ೩ ಲಕ್ಷ ರು. ಅಂದಾಜಿನಲ್ಲಿ ೫ ಸಣ್ಣ ಸೇತುವೆಗಳಿಗೆ ಹಾನಿಯಾಗಿದೆ. ಅಲ್ಲದೇ ಯೋಜನಾ ಅನುಷ್ಠಾನ ವಿಭಾಗ(ಪಿಎಂಜಿಎಸ್‌ವೈ) ದಡಿ ೧೩.೧೫ಲಕ್ಷ ರು. ಮೌಲ್ಯದ ೨.೮೭೦ ಕಿಮೀ ರಸ್ತೆಗೆ ಹಾನಿಯಾಗಿದೆ.ಹೆಸ್ಕಾಂ ವಿಭಾಗ: ನಿರಂತರ ಮಳೆಯಿಂದಾಗಿ ಹೆಸ್ಕಾಂ ವಿಭಾಗದಲ್ಲೂ ಹಲವು ಹಾನಿಗಳು ಸಂಭವಿಸಿವೆ. ೩೩.೯೦ಲಕ್ಷ ರು.ಗಳ ಅಂದಾಜಿನಲ್ಲಿ ೩೩೯ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ೧೮ ಲಕ್ಷ ರು.ಮೌಲ್ಯದ ಅಂದಾಜಿನಲ್ಲಿ ೧೮ ವಿದ್ಯುತ್ ಟ್ರಾನ್ಸಫಾರ್ಮರ್, ೭೧ ಸಾವಿರ ರು. ಮೌಲ್ಯದ ಅಂದಾಜಿನಲ್ಲಿ ೧.೪೨ಕಿಮೀ.ನಷ್ಟು ವಿದ್ಯುತ್ ತಂತಿಗೆಹಾನಿಯಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆ, ಸೇತುವೆ, ವಿದ್ಯುತ್‌ಕಂಬ ಹಾಗೂ ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದು, ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ದುರಸ್ತಿ ಕಾರ್ಯ ಕೈಗೊಳ್ಳುತ್ತೇವೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.