ಚದುರಂಗವು ತಂತ್ರ, ತಾಳ್ಮೆ, ಬೌದ್ಧಿಕ ಶಕ್ತಿ ಉತ್ತೇಜಿಸುವ ಕ್ರೀಡೆ: ಬಹಿರ್ಜಿ ಘೋರ್ಪಡೆ

| Published : Aug 12 2024, 01:00 AM IST

ಚದುರಂಗವು ತಂತ್ರ, ತಾಳ್ಮೆ, ಬೌದ್ಧಿಕ ಶಕ್ತಿ ಉತ್ತೇಜಿಸುವ ಕ್ರೀಡೆ: ಬಹಿರ್ಜಿ ಘೋರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಚೆಸ್ ಆಟವು ತಂತ್ರ, ತಾಳ್ಮೆ ಮತ್ತು ಬೌದ್ಧಿಕ ಶಕ್ತಿಯ ಸಾರವನ್ನು ಒಳಗೊಂಡಿರುವ ಅದ್ಭುತ ಕ್ರೀಡೆಯಾಗಿದೆ.

ಸಂಡೂರು: ಪಟ್ಟಣದ ಸಂಡೂರು ವಸತಿ ಶಾಲೆಯ (ಎಸ್.ಆರ್.ಎಸ್ ಶಾಲೆ) ಡೈಮಂಡ್ ಜ್ಯುಬಿಲಿ ಹಾಲ್‌ನಲ್ಲಿ ಮೂರು ದಿನಗಳ ಅಖಿಲ ಭಾರತ ಪಬ್ಲಿಕ್ ಶಾಲೆಗಳ ವಿದ್ಯಾರ್ಥಿಗಳ ರಾಷ್ಟ್ರ ಮಟ್ಟದ ಚೆಸ್ ಸ್ಫರ್ಧೆಗೆ ಶನಿವಾರ ಚಾಲನೆ ನೀಡಲಾಯಿತು.

ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಅಜಯ್ ಘೋರ್ಪಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಚೆಸ್ ಆಟವು ತಂತ್ರ, ತಾಳ್ಮೆ ಮತ್ತು ಬೌದ್ಧಿಕ ಶಕ್ತಿಯ ಸಾರವನ್ನು ಒಳಗೊಂಡಿರುವ ಅದ್ಭುತ ಕ್ರೀಡೆಯಾಗಿದೆ. ಪಂದ್ಯಾವಳಿಯು ಇಲ್ಲಿ ನೆರೆದಿರುವ ಎಲ್ಲ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಶಿಸ್ತು, ಕ್ರೀಡಾ ಮನೋಭಾವ ಬೆಳೆಸುವ ನಮ್ಮ ಸಾಮೂಹಿಕ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಚೆಸ್ ನಮಗೆ ತಾಳ್ಮೆಯ ಮೌಲ್ಯ, ಗೆಲುವು, ಸೋಲು ಎರಡನ್ನೂ ಸಮಾನ ಘನತೆಯಿಂದ ಸ್ವೀಕರಿಸುವ ಕಲೆ ಕಲಿಸುತ್ತದೆ. ದೇಶದ ವಿವಿಧ ಭಾಗಗಳಿಂದ ಬಂದು ಈ ಸ್ಫರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ. ಈ ಪಂದ್ಯಾವಳಿಯು ಕೇವಲ ಸ್ವರ್ಧೆಯಲ್ಲ, ಆದರೆ ಕಲಿಯಲು, ಬೆಳೆಯಲು ಮತ್ತು ಹೊಸ ಸ್ನೇಹವನ್ನು ಬೆಸೆಯಲು ಒಂದು ಉತ್ತಮ ಆವಕಾಶವಾಗಿದೆ ಎಂದು ಹೇಳಿದರು.

ಸ್ಮಯೋರ್ ಸಂಸ್ಥೆಯ ನಿರ್ದೇಶಕ ಟಿ.ಆರ್. ರಘುನಂದನ್ ಪಂದ್ಯಾವಳಿಗೆ ಚಾಲನೆ ನೀಡಿದರು. ಸ್ಪರ್ಧೆಯು ೧೪ ವರ್ಷದೊಳಗಿನ, ೧೭ ವರ್ಷದೊಳಗಿನ ಹಾಗೂ ೧೯ ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಸೇರಿ ಒಟ್ಟು ೩ ವಿಭಾಗಗಳಲ್ಲಿ ನಡೆಯುತ್ತಿದೆ. ಸಂಡೂರಿನ ಎಸ್‌ಆರ್‌ಎಸ್ ಶಾಲೆ ಸೇರಿ ವಿವಿಧ ರಾಜ್ಯಗಳಾದ ದೆಹಲಿ, ರಾಜಸ್ಥಾನ್, ಉತ್ತರಖಾಂಡ್, ಉತ್ತರಪ್ರದೇಶ ಮುಂತಾದ ರಾಜ್ಯಗಳ ೧೭ ಶಾಲೆಗಳ ೨೦೦ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.

ವೇದಿಕೆಯಲ್ಲಿ ಘೋರ್ಪಡೆ ರಾಜ ವಂಶಸ್ಥರಾದ ವೈಷ್ಣವಿ ಬರ್ಹಿಜಿ ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಮಯೋರ್ ಸಂಸ್ಥೆಯ ಸಿಇಒ ಮಂಜುನಾಥ್ ಪ್ರಭು, ಕೃಷ್ಣೇಂದು ಸನ್ಯಾಲ್, ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಆಶಿಯಾ ಬಾನು, ಎಸ್‌ಆರ್‌ಎಸ್ ಶಾಲೆಯ ಪ್ರಾಂಶುಪಾಲ ಅವಿನಾಶ್ ತ್ಯಾಗಿ ಭಾಗಿಯಾಗಿದ್ದರು. ಪ್ರತಿಭಾ ಜಿರಗಿ, ಜಿಯಾ ಟಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.