ದಂಡು ರೈಲ್ವೇ ನಿಲ್ದಾಣ ಬಳಿ ಸಂಚಾರ ದಟ್ಟಣೆ ತಡೆಗೆ ಒತ್ತಾಯ

| Published : Jan 24 2024, 02:02 AM IST

ದಂಡು ರೈಲ್ವೇ ನಿಲ್ದಾಣ ಬಳಿ ಸಂಚಾರ ದಟ್ಟಣೆ ತಡೆಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ದಂಡು ನಿಲ್ದಾಣವನ್ನು ಪ್ರತಿದಿನ ಸರಾಸರಿ 20 ಸಾವಿರ ಪ್ರಯಾಣಿಕರು ಬಳಸುತ್ತಿದ್ದಾರೆ. ಹೆಚ್ಚುವರಿ ಪ್ಲಾಟ್‌ಫಾರ್ಮ್‌ನಿಂದ ಹಾಗೂ ಭವಿಷ್ಯದಲ್ಲಿ ದಂಡು ನಿಲ್ದಾಣ ಬೆಂಗಳೂರಿನ ನಾಲ್ಕನೇ ಟರ್ಮಿನಲ್‌ ಆಗಿ ಹೊರಹೊಮ್ಮುವ ಕಾರಣ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ದಿನಂಪ್ರತಿ 1 ಲಕ್ಷ ದಾಟಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದಂಡು ರೈಲ್ವೇ ನಿಲ್ದಾಣದ ಎದುರು ನಿರ್ಮಿಸಲಾದ ಹೊಸ ರಸ್ತೆ ಹಾಗೂ ಪಕ್ಕದ ತಿಮ್ಮಯ್ಯ ರಸ್ತೆ ನಡುವೆ ‘ಲಿಂಕ್‌ ರೋಡ್‌’ ನಿರ್ಮಿಸಬೇಕು ಹಾಗೂ ಉದಯ ಟಿವಿ ಜಂಕ್ಷನ್‌ ಅಗಲೀಕರಣ, ಮರು ವಿನ್ಯಾಸಗೊಳಿಸಿ ಸಂಚಾರ ದಟ್ಟಣೆ ನಿಯಂತ್ರಿಸುವಂತೆ ನಗರ ಸಾರಿಗೆ ತಜ್ಞರು ಒತ್ತಾಯಿಸಿದ್ದಾರೆ.

ದಂಡು ರೈಲ್ವೇ ನಿಲ್ದಾಣದ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಡಿಸೆಂಬರ್‌ನಲ್ಲಿ ಹೊಸ ನಾಲ್ಕು ಪ್ಲಾಟ್‌ಫಾರ್ಮ್‌ ನಿರ್ಮಾಣವಾಗಿದ್ದು, ಸದ್ಯ ಮೊದಲ ಪ್ಲಾಟ್‌ಫಾರ್ಮ್‌ಗೆ ಬೆಂಗಳೂರು - ಕೊಯಮತ್ತೂರು ವಂದೇ ಭಾರತ್‌ ರೈಲು ಮಾತ್ರ ಬರುತ್ತಿದೆ. ಇನ್ನುಳಿದ ಪ್ಲಾಟ್‌ಫಾರ್ಮ್‌ಗಳಲ್ಲೂ ಶೀಘ್ರವೇ ರೈಲುಗಳ ನಿಲುಗಡೆ ಆರಂಭವಾಗಲಿದೆ. ಪ್ರಸ್ತುತ ದಂಡು ನಿಲ್ದಾಣವನ್ನು ಪ್ರತಿದಿನ ಸರಾಸರಿ 20ಸಾವಿರ ಪ್ರಯಾಣಿಕರು ಬಳಸುತ್ತಿದ್ದಾರೆ. ಹೆಚ್ಚುವರಿ ಪ್ಲಾಟ್‌ಫಾರ್ಮ್‌ನಿಂದ ಹಾಗೂ ಭವಿಷ್ಯದಲ್ಲಿ ದಂಡು ನಿಲ್ದಾಣ ಬೆಂಗಳೂರಿನ ನಾಲ್ಕನೇ ಟರ್ಮಿನಲ್‌ ಆಗಿ ಹೊರಹೊಮ್ಮುವ ಕಾರಣ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ 1ಲಕ್ಷ ದಾಟಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ರೈಲ್ವೇ ಭೂಮಿ ಅಭಿವೃದ್ಧಿ ಪ್ರಾಧಿಕಾರದಿಂದ ( ಆರ್‌ಎಲ್‌ಡಿಎ) ಇಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಹುಹಂತದ ಕಟ್ಟಡ ನಿರ್ಮಿಸುವ ಕಾಮಗಾರಿ ಆಗಲಿದೆ. ಇದೇ ನಿಲ್ದಾಣದ ಸಮೀಪವೇ ಕೆ-ರೈಡ್‌ ಅನುಷ್ಠಾನಗೊಳಿಸುತ್ತಿರುವ ಉಪನಗರ ರೈಲಿನ ಪಾರಿಜಾತ ಕಾರಿಡಾರ್‌ನ ಎತ್ತರಿಸಿದ ಮಾರ್ಗದ ನಿಲ್ದಾಣ ನಿರ್ಮಾಣ ಆಗಲಿದೆ. 2026ರ ಹೊತ್ತಿಗೆ ಇಲ್ಲಿ 5-12 ನಿಮಿಷಕ್ಕೊಂದು ರೈಲುಗಳು ನಿಲುಗಡೆ ಆಗಲಿದ್ದು, ಅದರ ಪ್ರಯಾಣಿಕರೂ ಇದೇ ವೃತ್ತದಿಂದಲೆ ಹಾದು ಹೋಗಲಿದ್ದಾರೆ. ಇದರಿಂದ ದಂಡು ರೈಲ್ವೇ ನಿಲ್ದಾಣದ ಸುತ್ತಮುತ್ತ ವಿಪರೀತ ಸಂಚಾರ ದಟ್ಟಣೆ ಉಂಟಾಗಲಿದೆ.

ಈಗಾಗಲೇ ದಂಡು ರೈಲ್ವೇ ನಿಲ್ದಾಣದಿಂದ ಹೊರಬರುವ ಪ್ರಯಾಣಿಕರು, ಮುಖ್ಯವಾಗಿ ಪಾದಚಾರಿಗಳು ರಸ್ತೆ ದಾಟಲು ಕಾಯಬೇಕಾದ ಸ್ಥಿತಿಯಿದೆ. ನೈಋತ್ಯ ರೈಲ್ವೆಯು ನಿಲ್ದಾಣದ ಎದುರು ಅಂದರೆ ಉದಯ ಟಿವಿ ಜಂಕ್ಷನ್‌ನಿಂದ ಪ್ರಿನ್ಸ್‌ ಆಫ್‌ ವೇಲ್ಸ್‌ ರಸ್ತೆ ಸಂಪರ್ಕಿಸುವಂತೆ 24 ಮೀ ಅಗಲ ಸುಮಾರು 250 ಮೀ ಉದ್ದದ ಹೊಸ ರಸ್ತೆ ಮಾಡಿದೆ. ಆದರೆ, ಜಂಕ್ಷನ್‌ನಿಂದ ಮುಂದುವರಿದಂತೆ ರಸ್ತೆ ಕಿರಿದಾಗಿರುವುದರಿಂದ ಸ್ಟೇಷನ್‌ ರಸ್ತೆ, ಕ್ವೀನ್ಸ್‌ ರಸ್ತೆವರೆಗೆ ಹೆಚ್ಚಿನ ದಟ್ಟಣೆ ಸೃಷ್ಟಿಸಲಿದೆ.

ಈ ಮಧ್ಯೆ ಹೊಸ ರಸ್ತೆಯ ನಡುವೆ ಆರ್‌ಎಲ್‌ಡಿಎ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯದ ಕಟ್ಟಡದ ಸ್ಥಳದ ಎದುರು ತಿಮ್ಮಯ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಯಿದ್ದು ಸದ್ಯ ಅದನ್ನು ಎರಡೂ ಕಡೆ ಬಂದ್‌ ಮಾಡಲಾಗಿದೆ. ಇದನ್ನು ಜನಬಳಕೆಗೆ ಮುಕ್ತಗೊಳಿಸಿದಲ್ಲಿ ಮುಂದುವರಿದು ಅರಮನೆ ರಸ್ತೆಗೆ ಸಂಪರ್ಕಿಸಿದಂತಾಗಲಿದೆ. ಇದರಿಂದ ಪ್ರಯಾಣಿಕರು ಕ್ವಿನ್ಸ್‌ ರಸ್ತೆಯಿಂದ 1-1.5 ಕಿಮೀ ಸುತ್ತುವರಿದು ಅರಮನೆ ರಸ್ತೆಗೆ ತಲುಪುವುದು ತಪ್ಪಲಿದ್ದು, ದಟ್ಟಣೆ ಕಡಿಮೆ ಮಾಡಬಹುದು ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಘಟನೆ ಒತ್ತಾಯಿಸಿದೆ.

ದಂಡು ವೃತ್ತದ ಬಳಿ ಭವಿಷ್ಯದ ಸಂಚಾರ ದಟ್ಟಣೆ ಗಮನಿಸಿ ಉಪನಗರ ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶ, ಆಗಮನ ದ್ವಾರ ನಿರ್ಮಿಸಲು ನಾವು ಈವರೆಗೆ ಅನುಮತಿ ನೀಡಿಲ್ಲ ಎಂದು ಪಶ್ಚಿಮ ಸಂಚಾರ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಗರ ಸಾರಿಗೆ ತಜ್ಞ ರಾಜ್‌ಕುಮಾರ್‌ ದುಗರ್‌ ಮಾತನಾಡಿ, ನೈಋತ್ಯ ರೈಲ್ವೆಯು ದಂಡು ರೈಲ್ವೇ ನಿಲ್ದಾಣದ ಎದುರು ಹೊಸ ರಸ್ತೆ ನಿರ್ಮಿಸುವಾಗ ಬಿಬಿಎಂಪಿ, ಸಂಚಾರಿ ಪೊಲೀಸರ ಜೊತೆ ಸಮಾಲೋಚಿಸಿಲ್ಲ. ಇದರಿಂದ ಸಮಸ್ಯೆ ಉಂಟಾಗಿದೆ. ಈಗಲೇ ಎಚ್ಚೆತ್ತು ಹೊಸ ರಸ್ತೆಯಿಂದ ತಿಮ್ಮಯ್ಯ ರಸ್ತೆಗೆ ಸಂಪರ್ಕ ಕಲ್ಪಿಸಬೇಕು, ಟಿವಿ ಜಂಕ್ಷನ್‌ ನವೀಕರಣ ಮಾಡಬೇಕು.

ಪರಿಶೀಲನೆ: ದಂಡು ರೈಲ್ವೇ ನಿಲ್ದಾಣದ ಎದುರಿನ ಹೊಸ ರಸ್ತೆಯಿಂದ ತಿಮ್ಮಯ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು ರೈಲ್ವೇ ಭೂಮಿ ಅಭಿವೃದ್ಧಿ ಪ್ರಾಧಿಕಾರದಿಂದ ಪರಿಶೀಲಿಸಲಾ ಗುವುದು. ಕಾರ್ಯಸಾಧ್ಯತೆ ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್ ಸಂಘಟನೆಗೆ ಪ್ರಾಧಿಕಾರ ಪ್ರತಿಕ್ರಿಯೆ ನೀಡಿದೆ.