ಡ್ರಗ್ಸ್ ವಿಷವರ್ತುಲದಲ್ಲಿ ಕಿತ್ತೂರು ಕರ್ನಾಟಕ ಅಕ್ಷರಶಃ ನಲುಗುತ್ತಿದೆ. ಪ್ರಮುಖವಾಗಿ ವಿದ್ಯಾರ್ಥಿಗಳು, ಯುವ ಸಮೂಹ, ಕೂಲಿ ಕಾರ್ಮಿಕರು ವ್ಯಸನಿಗಳಾಗುತ್ತಿದ್ದಾರೆ. ಅಪರಾಧ ಪ್ರಕರಣಗಳ ಹೆಚ್ಚಳಕ್ಕೂ ಡ್ರಗ್ಸ್ ಕಾರಣವಾಗುತ್ತಿರುವ ಅಂಶ ಕೂಡ ಬೆಳಕಿಗೆ ಬರುತ್ತಿದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಡ್ರಗ್ಸ್ ವಿಷವರ್ತುಲದಲ್ಲಿ ಕಿತ್ತೂರು ಕರ್ನಾಟಕ ಅಕ್ಷರಶಃ ನಲುಗುತ್ತಿದೆ. ಪ್ರಮುಖವಾಗಿ ವಿದ್ಯಾರ್ಥಿಗಳು, ಯುವ ಸಮೂಹ, ಕೂಲಿ ಕಾರ್ಮಿಕರು ವ್ಯಸನಿಗಳಾಗುತ್ತಿದ್ದಾರೆ. ಅಪರಾಧ ಪ್ರಕರಣಗಳ ಹೆಚ್ಚಳಕ್ಕೂ ಡ್ರಗ್ಸ್ ಕಾರಣವಾಗುತ್ತಿರುವ ಅಂಶ ಕೂಡ ಬೆಳಕಿಗೆ ಬರುತ್ತಿದೆ.

ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಮಾದಕ ವಸ್ತುಗಳೆಂದರೆ ಗಾಂಜಾ. ಗಾಂಜಾನೇ ಇಲ್ಲಿ ಕಿಂಗ್. ಉಳಿದಂತೆ, ಚರಸ್, ಕೊಕೇನ್, ಹೆರಾಯಿನ್ ಅಷ್ಟೇ ಅಲ್ಲದೆ, ಎಂಡಿಎಂಎನಂತಹ ವಿದೇಶಿ ಡ್ರಗ್ಸ್‌ಗಳು ಕೂಡ ಪತ್ತೆಯಾಗುತ್ತಿವೆ.

ನೈಟ್ ಲೈಫ್:

‘ನೈಟ್ ಲೈಫ್’ ಎನ್ನುವುದು ಬರೀ ಮೆಟ್ರೋ ಪಾಲಿಟನ್ ಸಿಟಿಗಳಿಗಷ್ಟೇ ಸೀಮಿತವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಛೋಟಾ ಮುಂಬೈ ಎಂದು ಹೆಸರು ಪಡೆದಿರುವ ಹುಬ್ಬಳ್ಳಿ-ಧಾರವಾಡದ ದೊಡ್ಡ ಹೋಟೆಲ್‌ಗಳು ಕೂಡ ನೈಟ್ ಲೈಫ್‌ಗೆ ಸಾಕ್ಷಿಯಾಗುತ್ತಿವೆ. ವಿದೇಶಿ ಡ್ರಗ್ಸ್‌ ಬಳಕೆಗೂ ನಾಂದಿ ಹಾಡಿವೆ. ಶ್ರೀಮಂತ ವಲಯದ ಯುವ ಸಮೂಹ ಈ ರೀತಿ ನೈಟ್ ಲೈಫ್‌ನಿಂದಾಗಿ ಡ್ರಗ್ಸ್ ಜಾಲಕ್ಕೆ ಸಿಲುಕುತ್ತಿವೆ.

ಮೊದಲೆಲ್ಲಾ ಹೆರಾಯಿನ್, ಚರಸ್, ಕೊಕೇನ್‌ಗಳು ಅಲ್ಲಲ್ಲಿ ಅಲ್ಪ-ಸ್ವಲ್ಪ ಸಿಗುತ್ತಿದ್ದವು. ಆದರೆ, ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಎಂಡಿಎಂಎ (ಮೆಥಿಲೆನೆಡಿಯೋಕ್ಷಿ ಎನ್- ಮೆಥಾಂಫೆಟಮೈನ್) ಕೂಡ ಪತ್ತೆಯಾಗುವ ಮೂಲಕ ಪೊಲೀಸರೇ ಹುಬ್ಬೇರಿಸುವಂತೆ ಆಗಿತ್ತು. ಆಗ ಬರೋಬ್ಬರಿ ₹12 ಲಕ್ಷ ಮೌಲ್ಯಕ್ಕೂ ಅಧಿಕ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಗಲ್ಲಿ-ಗಲ್ಲಿಯಲ್ಲಿ ಗಾಂಜಾ:

ಗಾಂಜಾ ಮಾರಾಟಕ್ಕೆದೊಡ್ಡ ಜಾಲವೇ ಹುಬ್ಬಳ್ಳಿಯಲ್ಲಿದೆ. ಹಲವು ವರ್ಷಗಳಿಂದಲೂ ನಿರಂತರವಾಗಿ ಗಲ್ಲಿ-ಗಲ್ಲಿಗಳಲ್ಲೂ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿವೆ. ಇಲ್ಲಿ ಗಾಂಜಾ ಹೋಲ್‌ಸೇಲ್ ಹಾಗೂ ಚಿಲ್ಲರೆಯಾಗಿಯೂ ದೊರೆಯುತ್ತದೆ. 5 ಗ್ರಾಂ.ಗಳ ಪುಟ್ಟ ಪ್ಯಾಕೆಟ್ ಸೇರಿದಂತೆ ನೂರಾರು ಗ್ರಾಂ.ಗಳ ಲೆಕ್ಕದಲ್ಲೂ ಮಾರಾಟವಾಗುತ್ತಿರುವುದು ಬಹಿರಂಗ ಸತ್ಯ.

ಸಿಗರೆಟ್‌ನಲ್ಲಿನ ತಂಬಾಕು ತೆಗೆದು ಅದರಲ್ಲಿ ಗಾಂಜಾ ತುಂಬಿಕೊಂಡು ಸೇದುವುದು ಹೆಚ್ಚು. ಇನ್ನು, ಇದಕ್ಕಾಗಿ ಹುಕ್ಕಾಗಳನ್ನು ಕೂಡ ಬಳಸುತ್ತಾರೆ. ಮುಂಬೈ, ಗೋವಾ, ಆಂಧ್ರಪ್ರದೇಶದ ವಿವಿಧೆಡೆಯಿಂದ ಡ್ರಗ್ಸ್ ಇಲ್ಲಿಗೆ ಬರುತ್ತದೆ. ರೈಲು, ಖಾಸಗಿ ಪಾರ್ಸಲ್‌ಗಳಲ್ಲಿ ಗಾಂಜಾ ಮೂಟೆಗಳ ಲೆಕ್ಕದಲ್ಲಿ ಬರುತ್ತದೆ. ಹುಬ್ಬಳ್ಳಿಗೆ ಬರುವ ಗಾಂಜಾ, ಬಳಿಕ ಹಾವೇರಿ, ಗದಗ ಸೇರಿದಂತೆ ವಿವಿಧೆಡೆ ರವಾನೆಯಾಗುತ್ತದೆ. ಇನ್ನುಳಿದಂತೆ ಗೋವಾ ಸೇರಿದಂತೆ ಕರಾವಳಿ ಭಾಗದಿಂದಲೂ ಗಾಂಜಾ ಬರುತ್ತಿದೆ. ವಿದೇಶಿ ಡ್ರಗ್ಸ್, ಜಲಸಾರಿಗೆ ಹಾಗೂ ವಿದೇಶಿ ಪ್ರವಾಸಿಗರ ಮೂಲಕ ಬರುತ್ತಿದೆ ಎನ್ನುತ್ತವೆ ಮೂಲಗಳು.

(ಬಾಕ್ಸ್ ):

ಅಪರಾಧ ಪ್ರಕರಣ ಜಾಸ್ತಿ:

ಗಾಂಜಾ ಸೇರಿದಂತೆ ಡ್ರಗ್ಸ್ ವಿಷದ ಜಾಲಕ್ಕೆ ಸಿಲುಕಿರುವವರಿಂದಲೇ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಏಪ್ರಿಲ್‌ನಲ್ಲಿ ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ ಆರೋಪಿಯೂ ಗಾಂಜಾ ಗುಂಗಿನಲ್ಲೇ ಅತ್ಯಾಚಾರ ಮಾಡಿದ್ದ ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.

ವೈಟ್ನರ್ ಅಚ್ಚುಮೆಚ್ಚು!:

ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿ ಗಾಂಜಾ ಕಿಂಗ್ ಆದರೂ ಇತ್ತೀಚಿನ ದಿನಗಳಲ್ಲಿ ವೈಟ್ನರ್‌ ಕೂಡ ಮಾದಕ ವಸ್ತುವಾಗಿ ಬಳಕೆ ಆಗುತ್ತಿರುವುದು ಕಂಡು ಬರುತ್ತಿದೆ. ಹೆಚ್ಚಾಗಿ ಕೊಳಚೆ ಪ್ರದೇಶದಲ್ಲಿನ ಬಡಮಕ್ಕಳೇ ವೈಟ್ನರ್ ಬಳಕೆ ಮಾಡುತ್ತಾರೆ. ಈಚೆಗೆ ಶಾಲೆ ಹಾಗೂ ಕಾಲೇಜ್ ವಿದ್ಯಾರ್ಥಿಗಳು ಇದನ್ನು ಹೆಚ್ಚಾಗಿ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂಬುದನ್ನು ಸರ್ಕಾರಿ ವೈದ್ಯರೊಬ್ಬರು ತಿಳಿಸುತ್ತಾರೆ. ಕರ್ಚೀಫ್‌ನಲ್ಲಿ ಮೂರಾಲ್ಕು ಹನಿ ವೈಟ್ನರ್ ಹಾಕಿಕೊಂಡು ಮೂಗಿನಿಂದ ಇನ್‌ಹೇಲರ್‌ನಂತೆ ಜೋರಾಗಿ ಎಳೆದುಕೊಳ್ಳುತ್ತಾರೆ. ಇದು ಎರಡ್ಮೂರು ಗಂಟೆ ಮತ್ತೇರಿ ಉಳಿಯುತ್ತದೆಯಂತೆ. ವೈಟ್ನರ್ ಕೊಳ್ಳಲು ಬೇಕಾದ ಹಣಕ್ಕಾಗಿ ಬಡ ಮಕ್ಕಳು ಭಿಕ್ಷಾಟನೆ ನಡೆಸುವುದೂ ಉಂಟು. ಆದರೆ, ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಏಕೆಂದರೆ, ಇದರಿಂದ ವಾಸನೆಯೂ ಬರಲ್ಲ, ಗೊತ್ತೂ ಆಗಲ್ಲ. ಆದರೆ, ಮತ್ತೇರಿಸಿಕೊಂಡು ಗುಂಗಿನಲ್ಲೇ ವ್ಯಸನಿಗಳು ಇರುತ್ತಾರೆ.

2023-24ರಲ್ಲಿ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ 87 ಪ್ರಕರಣ ದಾಖಲಿಸಿಕೊಂಡು, 187 ಜನರನ್ನು ಬಂಧಿಸಿ, ₹28 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 2024-25ರಲ್ಲಿ 245 ಪ್ರಕರಣ ಭೇದಿಸಿ, 1,011 ಜನರನ್ನು ಬಂಧಿಸಿ, ₹40 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.‌ ಈ ವರ್ಷ ನವೆಂಬರ್ ಅಂತ್ಯದವರೆಗೆ 215 ಪ್ರಕರಣ ದಾಖಲಿಸಿಕೊಂಡು, 538 ಜನರನ್ನು ಬಂಧಿಸಿ, ₹35 ಲಕ್ಷ ಮೌಲ್ಯದ 40 ಕೆ.ಜಿ.ಯಷ್ಟು ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.