ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸುಪ್ರೀಂಕೋರ್ಟ್ ಆದೇಶದಂತೆ ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿರುವುದನ್ನು ತೆರವು ಮಾಡುವುದು ಸ್ವಾಗತರ್ಹ. ಆದರೆ ಸರ್ಕಾರದಿಂದಲೇ ನಿಯಮಾನುಸಾರವಾಗಿ ಮಂಜೂರಾಗಿರುವ ಜಾಗಗಳನ್ನು ತೆರವು ಕಾರ್ಯಾಚರಣೆಗೊಳಪಡಿಸುವುದು ಅನ್ಯಾಯ. ಏನಾದರೂ ಕಾನೂನು ಪ್ರಕಾರ ಇರುವ ರೈತರ ವಿರುದ್ಧ ಬಂದರೇ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಬಿ. ಶಿವರಾಂ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಒತ್ತುವರಿ ಜಾಗಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶವು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದು ಅರಣ್ಯ ರಕ್ಷಣೆಗೆ ಒಳ್ಳೆಯ ಹೆಜ್ಜೆಯಾದರೂ, ಕಾನೂನು ಬದ್ಧವಾಗಿ ಸಣ್ಣ ಹಿಡುವಳಿದಾರ ರೈತರಿಗೆ ಮಂಜೂರಾಗಿರುವ ಜಾಗವನ್ನು ಅವರಿಗೆ ಬಿಟ್ಟುಕೊಡಬೇಕು. ಅಕ್ರಮವಾಗಿ ಕಬಳಿಸಿದ ಜಾಗವನ್ನಷ್ಟೇ ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಹಾಸನ ಜಿಲ್ಲೆಯಲ್ಲಿ ಒಟ್ಟು ೨,೧೧,೭೬೩ ಎಕರೆ ಅರಣ್ಯ ಪ್ರದೇಶವಿದ್ದು, ಅದರಲ್ಲೂ ಸುಮಾರು ೩೦,೦೦೦ ಎಕರೆ ಪ್ರದೇಶ (ಶೇಕಡಾ ೧೫ರಷ್ಟು) ಒತ್ತುವರಿಯಾಗಿದ್ದು, ಕೆಲವನ್ನು ಸರ್ಕಾರವೇ ರೈತರಿಗೆ ಮಂಜೂರು ಮಾಡಿದೆ. "ಇವುಗಳಲ್ಲಿ ಮಂಜೂರಾದ ಜಾಗಗಳನ್ನು ಹೊರತುಪಡಿಸಿ ಉಳಿದ ಅಕ್ರಮ ಒತ್ತುವರಿಗಳನ್ನು ಮಾತ್ರ ತೆರವುಗೊಳಿಸಬೇಕು " ಎಂದು ಶಿವರಾಂ ಅಭಿಪ್ರಾಯಪಟ್ಟರು.ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಾ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿ, ನಾಲ್ಕು ತಿಂಗಳೊಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದರಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದಿರುವ ಅಕ್ರಮ ಕಬಳಿಕೆ, ದಾಖಲೆಗಳ ಮಿಸ್‌ಯೂಸ್, ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸ್ಪಷ್ಟವಾಗಿ ದಾಖಲಿಸುವಂತೆ ಆದೇಶಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಹೇಳಿ, ಸರ್ಕಾರದಿಂದಲೇ ನಿಯಮಾನುಸಾರವಾಗಿ ಮಂಜೂರಾಗಿರುವ ಜಾಗಗಳನ್ನು ತೆರವು ಕಾರ್ಯಾಚರಣೆಗೊಳಪಡಿಸುವುದು ಅನ್ಯಾಯ. ದಶಕಗಳಿಂದ ತಮ್ಮ ಜೀವನೋಪಾಯಕ್ಕಾಗಿ ಅರಣ್ಯ ಪ್ರದೇಶದಲ್ಲಿ ಬೆಳೆ ಬೆಳೆದು ಬದುಕುತ್ತಿರುವ ಸಣ್ಣ ರೈತರ ಹಕ್ಕು ಕಸಿಯಬಾರದು. ಆದರೆ ಕಾನೂನು ಉಲ್ಲಂಘನೆ ಮಾಡಿ ಪ್ರಭಾವಿ ವ್ಯಕ್ತಿಗಳು ಕಬಳಿಸಿರುವ ಜಾಗಗಳನ್ನು ಕಟ್ಟುನಿಟ್ಟಾಗಿ ವಶಪಡಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಈಗಾಗಲೇ ಗಡುವು ನೀಡಿದೆ. ಅದರೊಳಗೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ನಾನು ಸ್ವತಃ ರೈತರನ್ನು ಕರೆದುಕೊಂಡು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಇಳಿಯುತ್ತೇನೆ. ರೈತರ ಹಿತಕ್ಕಾಗಿ ಹೋರಾಟ ನನ್ನ ಕರ್ತವ್ಯ ಎಂದು ಹೇಳಿದರು.ಪರಿಸರವಾದಿಗಳು ಈ ತೀರ್ಪಿಗೆ ಸ್ವಾಗತ ವ್ಯಕ್ತಪಡಿಸಿದ್ದು, ಅರಣ್ಯ ಪ್ರದೇಶದಲ್ಲಿ ನಡೆದಿರುವ ಅಕ್ರಮ ಕಬಳಿಕೆ ಪರಿಸರಕ್ಕೆ ದೊಡ್ಡ ಧಕ್ಕೆ. ಅನಧಿಕೃತ ಅರಣ್ಯ ನಾಶದಿಂದ ನೀರಿನ ಮೂಲಗಳು ಒಣಗುತ್ತಿವೆ, ವನ್ಯಜೀವಿಗಳಿಗೆ ತೊಂದರೆ ಆಗುತ್ತಿದೆ. ಆದರೆ ನಿಜವಾದ ಬಡ ರೈತರ ಹಕ್ಕುಗಳನ್ನು ಕಾಪಾಡುವಂತೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ. ಒಂದೆಡೆ ಪರಿಸರ ಸಂರಕ್ಷಣೆ ಎಂಬ ಜವಾಬ್ದಾರಿ, ಮತ್ತೊಂದೆಡೆ ಸಣ್ಣ ರೈತರ ಹಿತ ಕಾಪಾಡಬೇಕೆಂಬ ಒತ್ತಡ- ಎರಡರ ನಡುವೆ ಸಮತೋಲನ ಸಾಧಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಈಗಾಗಲೇ ಗಡುವು ನೀಡಿರುವುದರಿಂದ ಸರ್ಕಾರ ತಕ್ಷಣ ಸ್ಪಷ್ಟ ಮಾರ್ಗಸೂಚಿ ರೂಪಿಸುವ ನಿರೀಕ್ಷೆ ಇದೆ ಎಂದರು. ರೈತರ ಹಿತಾದೃಷ್ಠಿಯಿಂದ ಒತ್ತಾಯ ಮಾಡಲಾಗುತ್ತಿದ್ದು, ಸುಪ್ರೀಂಕೋರ್ಟಿನ ಆದೇಶ ಮೇರೆಗೆ ಎಸ್.ಐ.ಟಿ. ಯು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಎರಡನ್ನು ಮಾಡುವುದರ ಮೂಲಕ ಅರಣ್ಯ ಗುರುತಿಸುವಿಕೆ ಆಗಬೇಕು. ಸರಕಾರದ ಗಮನಸೆಳೆದಿದ್ದು, ಸರಕಾರವು ಎಚ್ಚರಿಕೆವಹಿಸಿ ಸರಿಯಾಗಿ ತೀರ್ಮಾನ ತೆಗೆದುಕೊಳ್ಳದಿದ್ದರೇ ರೈತರ ಸಮುದಾಯವನ್ನೆ ಬೀದಿಗೆ ಕರೆದುಕೊಂಡು ಬರುತ್ತೇವೆ. ಕನಿಷ್ಠ ೧೫ ರಿಂದ ೨೦ ಸಾವಿರ ಕುಟುಂಬ ಬೀದಿಗೆ ಬರುತ್ತದೆ. ರೈತರ ಜಮೀನು ಉಳಿಸಲು ಬದ್ಧತೆ ಇಟ್ಟುಕೊಂಡು ನಾವು ಇರುವವರು. ನಾನು ರೈತರ ಪರ ಇರುತ್ತೇನೆ. ರೈತರಿಗೆ ಇದರಲ್ಲಿ ಶೇಕಡ ೫೦ ಭಾಗ ನಾನೇ ಮಂಜೂರು ಮಾಡಿರುವುದು ಸುಮಾರು ೧೫ ಸಾವಿರ ಎಕರೆ ಇದೆ. ಖಾತೆ ಕೂಡ ಆಗಿದೆ. ಎಸ್.ಐ.ಟಿ. ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಹಾಗೂ ಸರಕಾರವು ಕೂಡ ಸರಿಯಾದ ನಿರ್ದೇಶನ ಒದಗಿಸುವಂತೆ ಮಾಡಬೇಕು. ಸ್ಥಳಕ್ಕೆ ಬರುತ್ತಾರೆ. ಆಗ ನಮ್ಮ ಪರವಾಗಿದ್ದರೇ ಓಕೆ. ಇಲ್ಲವಾದರೇ ನೂರಕ್ಕೆ ನೂರರಷ್ಟು ಹೋರಾಟ ಖಚಿತ ಎಂದು ಎಚ್ಚರಿಸಿದರು.