ಮಾಜಿ ಶಾಸಕ ಕಾಲೇಬುಡ್ಡೆ ನಿಧನ

| Published : Oct 16 2024, 12:30 AM IST

ಸಾರಾಂಶ

ಈದ್ಗಾ ಮೈದಾನದ ವಿವಾದ ರಾಷ್ಟ್ರವ್ಯಾಪ್ತಿ ಖ್ಯಾತಿಗಳಿಸಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡರು ಆಸಕ್ತಿ ವಹಿಸಿ, ಅಂದು ಹುಬ್ಬಳ್ಳಿ ಅಂಜುಮನ್‌ ಸಂಸ್ಥೆಯ ಯುವ ಮುಖಂಡರಾಗಿದ್ದ ಕಾಲೆಬುಡ್ಡೆ ಅವರಿಂದ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.

ಹುಬ್ಬಳ್ಳಿ:

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿ ಕೋಮು ಗಲಭೆಗೆ ಅಂತ್ಯಹಾಡುವ ಮೂಲಕ ದೇಶದ ಗಮನ ಸೆಳೆದಿದ್ದ, ವಿಧಾನಪರಿಷತ್ತಿನ ಮಾಜಿ ಸದಸ್ಯ ಹಾಗೂ ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್‌ಸಾಬ್ ಕಾಲೇಬುಡ್ಡೆ (88) ಸೋಮವಾರ ರಾತ್ರಿ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಾಲ್ದಾರ ಓಣಿಯ ಸ್ವನಿವಾಸದಲ್ಲಿ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವಿದೆ.

ಮಂಗಳವಾರ ನಗರದ ತೊರವಿ ಹಕ್ಕಲದಲ್ಲಿರುವ ಖಬರಸ್ಥಾನ (ಸ್ಮಶಾನ)ದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಅಪಾರ ಪ್ರಮಾಣದ ಗಣ್ಯರು, ನಾಗರಿಕರು ಅಂತ್ಯಕ್ರಿಯೆ ಪಾಲ್ಗೊಂಡಿದ್ದರು.

ಕೋಮು ಸೌಹಾರ್ದದ ಕೊಂಡಿ:

ಇಲ್ಲಿನ ಈದ್ಗಾ ಮೈದಾನದ ವಿವಾದ ರಾಷ್ಟ್ರವ್ಯಾಪ್ತಿ ಖ್ಯಾತಿಗಳಿಸಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡರು ಆಸಕ್ತಿ ವಹಿಸಿ, ಅಂದು ಹುಬ್ಬಳ್ಳಿ ಅಂಜುಮನ್‌ ಸಂಸ್ಥೆಯ ಯುವ ಮುಖಂಡರಾಗಿದ್ದ ಕಾಲೆಬುಡ್ಡೆ ಅವರಿಂದ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.

ಈ ಸಂದರ್ಭದಲ್ಲಿ ದೇಶದ ಗಮನ ಸೆಳೆದ ಕಾಲೆಬುಡ್ಡೆ ಅವರನ್ನು ದೇವೇಗೌಡರು ವಿಧಾನಪರಿಷತ್‌ಗೆ ನೇಮಕ ಮಾಡುವ ಮೂಲಕ ಮುಸ್ಲಿಂ ಸಮುದಾಯದ ಪ್ರೀತಿಯನ್ನು ಗಳಿಸಿದ್ದರು. ಜತೆಗೆ ಹುಬ್ಬಳ್ಳಿ ಜನತೆಗೆ ನೆಮ್ಮದಿ ತಂದುಕೊಟ್ಟರು. ಇಂತಹ ಕೋಮು ಸೌಹಾರ್ದತೆಯ ಕೊಂಡಿ ಇಸ್ಮಾಯಿಲ್‌ ಕಾಲೆಬುಡ್ಡೆ ಅವರು ಇಂದು ನಿಧನರಾಗಿದ್ದು ಮಹಾನಗರದ ಜನತೆಗೆ ಹಾಗೂ ಕೋಮು ಸೌಹಾರ್ದಕ್ಕೆ ತುಂಬಲಾರದ ನಷ್ಟವಾಗಿದೆ.

ಸಂತಾಪ:

ಇಸ್ಮಾಯಿಲ್‌ಸಾಬ್ ಕಾಲೇಬುಡ್ಡೆ ಅವರ ನಿಧನಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್‌, ಸಚಿವರಾದ ಎಚ್‌.ಕೆ. ಪಾಟೀಲ, ಸಂತೋಷ ಲಾಡ್‌, ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಸಲೀಂ ಅಹ್ಮದ್‌, ಅಂಜುಮನ್‌ ಇಸ್ಲಾಂ ಅಧ್ಯಕ್ಷ ಹಾಗೂ ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಹು-ಧಾ ಮಹಾನಗರ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ ಹಳ್ಳೂರ, ಹುಡಾ ಅಧ್ಯಕ್ಷ ಶಾಕೀರ ಸನದಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.