ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಆಯೋಜಿಸಿದ್ದ ಮೀಸಲಾತಿ ಮತ್ತು ವರ್ಗೀಕರಣ ವಿಷಯ ಕುರಿತ ಕಾರ್ಯಾಗಾರದ ಬಗ್ಗೆ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯವರು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಕಿಡಿಕಾರಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್ ಅವರ ವಿರುದ್ಧ ವೇದಿಕೆಯವರು ಆಧಾರ ರಹಿತ ಆರೋಪ ಮಾಡಿದ್ದಾರೆ. ಅಲ್ಲದೆ, ಈ ಕುರಿತು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ಸೋಮಶೇಖರ್ ಅವರನ್ನು ಅಮಾನತುಗೊಳಿಸಲು ಕೋರಿರುವುದಾಗಿ ತಿಳಿಸಿದ್ದಾರೆ.ಆದರೆ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿರುವವರು ಕಾರ್ಯಾಗಾರದಲ್ಲಿ ಪಾಲ್ಗೊಂಡಿರಲಿಲ್ಲ. ಕೇವಲ ಪೂರ್ವಾಗ್ರಹದಿಂದ ಆರೋಪಿಸಿದ್ದಾರೆ. ಸೋಮಶೇಖರ್ ಅವರನ್ನು ಬೆದರಿಸುವ ಕುತಂತ್ರ ಇದಾಗಿದೆ. ಹೀಗಾಗಿ ಸೋಮಶೇಖರ್ ಅವರ ವಿರುದ್ಧ ವಿವಿ ಯಾವುದೇ ಕ್ರಮ ಕೈಗೊಳ್ಳದೇ ಅಲ್ಲಿಯೇ ಮುಂದುವರಿಸಬೇಕು ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿರುವುದಾಗಿ ಅವರು ಹೇಳಿದರು.ಜೊತೆಗೆ, ಕಾರ್ಯಾಗಾರ ಬೌದ್ಧಿಕ ಚರ್ಚೆಯಿಂದ ಕೂಡಿತ್ತು. ಈ ವೇಳೆ ಸುಪ್ರೀಂಕೋರ್ಟ್ ತೀರ್ಪನ್ನು ಯಾರೊಬ್ಬರೂ ನಿಂದಿಸಲಿಲ್ಲ. ಮುಕ್ತ ಸಂವಾದವೂ ಇತ್ತು. ಬೇಕಿದ್ದರೆ ಕಾರ್ಯಾಗಾರವನ್ನು ವಿವಿಯ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ಎನ್. ಭಾಸ್ಕರ್, ಕಾಂತರಾಜು, ಭರತ್ ರಾಮಸ್ವಾಮಿ, ಡಾ. ಚನ್ನಕೇಶವಮೂರ್ತಿ, ಶಿವಶಂಕರ್ ಇದ್ದರು.