ಜನಪದ ಸಂಸ್ಕೃತಿ ಮರೆತರೆ ಉಳಿಗಾಲವಿಲ್ಲ

| Published : Mar 26 2024, 01:16 AM IST

ಸಾರಾಂಶ

ಜನಪದ ಕಲೆ ಮತ್ತು ಸಾಹಿತ್ಯ ನಮ್ಮ ಉಸಿರಾಗಬೇಕು. ಕಲೆ ಉಳಿದರೆ ಕಲಾವಿದರು ಉಳಿಯಲು ಸಾಧ್ಯ. ನಿಜವಾದ ಕಲಾವಿದರಿಗೆ ಮಾಸಾಶನ ದೊರೆಯಬೇಕು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜನಪದ, ಸಂಸ್ಕೃತಿ, ಪರಂಪರೆ ಮರೆತ ದೇಶಕ್ಕೆ ಬಹಳ ದಿನ ಉಳಿಗಾಲವಿಲ್ಲ. ಸರ್ಕಾರಗಳು ಜಾನಪದ ಕಲೆಗಳನ್ನು ಪ್ರೋತ್ಸಾಹಿಸಬೇಕು. ಜಾನಪದ ಕಲಾವಿದರನ್ನು ಗೌರವಿಸಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸದಸ್ಯ ಜಿ.ಕೆ. ತಳವಾರ ಹೇಳಿದರು.

ನವನಗರದ ಅನು ಮ್ಯೂಜಿಕ್ ಫೌಂಡೇಶನ್‌ನಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಮತ್ತು ಜಿಲ್ಲಾ ಘಟಕ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 9ನೇ ಸಂಸ್ಥಾಪನಾ ದಿನಾಚರಣೆಯನ್ನು ಜಾನಪದ ತ್ರಿಪದಿ ವಾಚಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಡಾ.ಎಸ್. ಬಾಲಾಜಿ, ಜಿಲ್ಲೆಯಲ್ಲಿ ಡಿ.ಎಂ. ಸಾವಕಾರ ಸಾರಥ್ಯದಲ್ಲಿ ಪರಿಷತ್ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿದೆ ಎಂದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಎಂ. ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುಡಕಟ್ಟು ಹಾಗೂ ನಾಡಿನ ಜಾನಪದ ಕಲೆ ಸಂಸ್ಕೃತಿ ಉಳಿಸಲು ಮತ್ತು ಎಲೆಮರೆ ಕಾಯಿಯಂತಿರುವ ಜಾನಪದ ಕಲಾವಿದರನ್ನು ಉಳಿಸಿ ಬೆಳೆಸಲು ಪರಿಷತ್ ಸ್ಥಾಪಿಸಲಾಗಿದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿ ರಾಜ್ಯದಲ್ಲಿ ಮಾತ್ರವಲ್ಲ, ಗಡಿನಾಡಿನಲ್ಲಿ, ಹೊರ ರಾಜ್ಯಗಳಲ್ಲಿಯೂ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸ ಮಾಡುತ್ತಿದ್ದಾರೆ. 50 ವರ್ಷ ಮೀರಿದ ಎಲೆಮರೆಯ ಕಾಯಿಯಂತಿರುವ ಜಾನಪದ ಕಲಾವಿದರನ್ನು ಗುರ್ತಿಸಿ, ರಾಜ್ಯಮಟ್ಟದಲ್ಲಿ `ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಗೌರವಿಸುತ್ತಿರುವರು ಎಂದು ಹೇಳಿದರು.

ಕಳೆದ 9 ವರ್ಷಗಳಲ್ಲಿ ರಾಜ್ಯಾದ್ಯಂತ ಸುಮಾರು 8 ಸಾವಿರ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ಶಾಲೆ, ಕಾಲೇಜುಗಳಲ್ಲಿ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮ ಆಯೋಜಿಸಿ, ಜಾನಪದ ಕಲೆ, ಕಲಾವಿದರ ಪರಿಚಯ, ಗ್ರಾಮೀಣ ಪ್ರದೇಶದಲ್ಲಿ ಹಬ್ಬಗಳ ವೈಶಿಷ್ಟ್ಯ, ಮಹತ್ವ ತಿಳಿಸುವ ಕಾರ್ಯ ಮಾಡಲಿದೆ ಎಂದರು.

ರಂಗಕರ್ಮಿ ಎಚ್. ಎನ್. ಶೇಬನ್ನವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜನಪದ ಕಲೆ ಮತ್ತು ಸಾಹಿತ್ಯ ನಮ್ಮ ಉಸಿರಾಗಬೇಕು. ಕಲೆ ಉಳಿದರೆ ಕಲಾವಿದರು ಉಳಿಯಲು ಸಾಧ್ಯ. ನಿಜವಾದ ಕಲಾವಿದರಿಗೆ ಮಾಸಾಶನ ದೊರೆಯಬೇಕು. ಅರ್ಹ ಕಲಾವಿದರು ಮಧ್ಯವರ್ತಿಗಳನ್ನು ತಿರಸ್ಕರಿಸಿ, ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೋಗಿ ಅರ್ಜಿ ಹಾಕಿ ಸೌಲಭ್ಯ ಪಡೆಯುವಂತೆ ಹೇಳಿದರು.

ಹಿರಿಯ ರಂಗಕರ್ಮಿ ಎಚ್. ಎನ್. ಶೇಬನ್ನವರ, ಸಮಾಜ ಸೇವಕ ಸುರೇಶ ವಸ್ತ್ರದ, ಜಾನಪದ ಕಲಾವಿದ ಪುಟ್ಟು ಹಿರೇಮಠ ಅವರನ್ನು ಸತ್ಕರಿಸಲಾಯಿತು. ಜಾನಪದ ಕಲಾವಿದೆ ಪವಿತ್ರಾ ಜಕ್ಕಪ್ಪನವರ, ಶಿಕ್ಷಕ ಎಂ.ಎಸ್. ಕಲಗುಡಿ ಜಾನಪದ ಹಾಡುಗಳನ್ನು ಹಾಡಿದರು. ಕಜಾಪ ಜಿಲ್ಲಾ ಕಾರ್ಯದರ್ಶಿ ಆರ್‌. ಬಿ. ನಬಿವಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಎಸ್. ಬಿ. ಕೋರಿ ಪರಿಚಯಿಸಿದರು.

ವೇದಿಕೆ ಮೇಲೆ ಕಜಾಪ ತಾಲೂಕಾಧ್ಯಕ್ಷ ಎಸ್. ಬಿ. ಕಟಗಿ, ಪದಾಧಿಕಾರಿಗಳಾದ ವಿ. ಜಿ. ಪಾಟೀಲ, ಎಸ್. ಬಿ. ಯಾವಗಲ್ಮಠ, ಸಂಜಯ ನಡುವಿನಮನಿ, ನಾರಾಯಣ ಯಳ್ಳಿಗುತ್ತಿ, ಮುತ್ತು ಅರಕೇರಿ, ಗುರು ಹಿರೇಮಠ, ಪ್ರಶಾಂತ ಪ್ರಭುಕರ, ಮುತ್ತು ಮಾಚಕನೂರ ಮತ್ತಿತರಿದ್ದರು.