ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡಲು ಪಕ್ಷಗಳಲ್ಲೇ ಪೈಪೋಟಿ!

| Published : Dec 18 2023, 02:00 AM IST

ಸಾರಾಂಶ

ಮಂಗಳೂರು ಅಂತಾರಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಪ್ರಸ್ತಾಪ ಮತ್ತೆ ಮುನ್ನಲೆಗೆ ಬಂದಿದೆ. ಯಾರ ಹೆಸರನ್ನು ಇಡಬೇಕು ಎಂಬ ಕುರಿತು ರಾಜಿಕೀಯ ಪಕ್ಷಗಳು, ಮುಖಂಡರಲ್ಲಿ ಪೈಪೋಟಿ, ಚರ್ಚೆ ಶುರುವಾಗಿದೆ. ಕೋಟಿ ಚೆನ್ನಯ, ರಾಣಿ ಅಬ್ಬಕ್ಕ, ನಾರಯಣ ಗುರು, ತುಳುನಾಡು, ಪರಶುರಾಮ ಹೆಸರುಗಳು ಪ್ರಸ್ತಾಪದಲ್ಲಿವೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರುಬೆಳಗಾವಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯದ ಹುಬ್ಬಳ್ಳಿ, ವಿಜಯಪುರ, ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರಿಡುವ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಇದರ ಬೆನ್ನಿಗೇ ಕರ್ನಾಟಕ ಕರಾವಳಿಯ ಏಕೈಕ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರು ಇಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇರಿಸಿದರೆ ಸೂಕ್ತ ಎಂಬ ಬಗ್ಗೆ ರಾಜಕೀಯ ಪಕ್ಷ, ಮುಖಂಡರು ಹಾಗೂ ಸಂಘಸಂಸ್ಥೆಗಳ ನಡುವೆ ತೀವ್ರ ಪೈಪೋಟಿ, ಚರ್ಚೆ ಶುರುವಾಗಿದೆ.

ಅಧಿವೇಶದಲ್ಲಿ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಅವರು, ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ಹೆಸರು ಸೂಕ್ತ ಎಂದಿದ್ದಾರೆ. ಈ ಮೂಲಕ ಕರಾವಳಿಯ ತುಳುನಾಡಿನ ಕಾರಣಿಕ ಐತಿಹ್ಯ ಪುರುಷರನ್ನು ಸದಾ ಸ್ಮರಿಸಿದಂತಾಗುತ್ತದೆ ಎಂದಿದ್ದಾರೆ. ಬಿಜೆಪಿ ಶಾಸಕರು ಕೂಡ ಇದೇ ಹೆಸರಿನ ಬಗ್ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಮಂಗಳೂರಿನವರೇ ಆದ ಸ್ಪೀಕರ್‌ ಯು.ಟಿ.ಖಾದರ್ ಅವರು ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ಉಳ್ಳಾಲದ ‘ವೀರ ರಾಣಿ ಅಬ್ಬಕ್ಕ’ ಹೆಸರು ಕೂಡ ಪ್ರಸ್ತಾಪದಲ್ಲಿದೆ. ಈ ಬಗ್ಗೆ ಚರ್ಚಿಸಿ ಸೂಕ್ತ ಹೆಸರು ನಿರ್ಧರಿಸುವ ವಿಚಾರವನ್ನು ಹೇಳಿದ್ದಾರೆ. ಇದರೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರು ಇರಿಸುವ ವಿಚಾರ ತಕ್ಷಣಕ್ಕೆ ತೀರ್ಮಾನವಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

3 ವರ್ಷಗಳ ಹಿಂದಿನ ಪ್ರಸ್ತಾಪ:

ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರು ಇರಿಸುವ ವಿಚಾರ ಗಂಭೀರ ಸ್ವರೂಪ ಪಡೆದದ್ದು ವಿಮಾನ ನಿಲ್ದಾಣಗಳ ನಿರ್ಹಹಣೆಯನ್ನು ಕೇಂದ್ರ ಸರ್ಕಾರ ಖಾಸಗಿ ಸಹಭಾಗಿತ್ವಕ್ಕೆ ವಹಿಸಿದ ಸಂದರ್ಭ. ಕೇಂದ್ರ ಸರ್ಕಾರ 2020ರಲ್ಲಿ ದೇಶದ ಆರು ವಿಮಾನ ನಿಲ್ದಾಣಗಳನ್ನು ಸರ್ಕಾರಿ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿರ್ಧಾರ ಪ್ರಕಟಿಸಿತ್ತು. ಅದರಲ್ಲಿ ಮಂಗಳೂರು ವಿಮಾನ ನಿಲ್ದಾಣವೂ ಒಳಗೊಂಡಿತ್ತು. ಮೂರು ವರ್ಷಗಳ ಬಳಿಕ ಅದಾನಿ ಕಂಪನಿ ಈ ವಿಮಾನ ನಿಲ್ದಾಣದ ಪೂರ್ಣ ನಿರ್ವಹಣೆಯನ್ನು ಕೈಗೆತ್ತಿಕೊಂಡಿದೆ. ಈ ಸಂದರ್ಭ ಅದಾನಿ ಕಂಪನಿ ವಿಮಾನ ನಿಲ್ದಾಣದ ಹೆಸರು ಬದಲಾವಣೆ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿಲ್‌ರಾಜ್‌ ಆಳ್ವ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಮಾನ ನಿಲ್ದಾಣದ ನಿರ್ವಹಣೆಯನ್ನು ಮಾತ್ರ ನೀಡಿರುವುದರಿಂದ ವಿಮಾನ ನಿಲ್ದಾಣದ ಮೂಲ ಹೆಸರನ್ನು ಬದಲಾಯಿಸುವಂತಿಲ್ಲ ಎಂದು ಹೈಕೋರ್ಟ್‌ ಆದೇಶಿಸಿತ್ತು. ಆ ಬಳಿಕ ವಿಮಾನ ನಿಲ್ದಾಣಕ್ಕೆ ಹೆಸರು ಇರಿಸಬೇಕು ಎಂಬ ಕೂಗು ಪ್ರಬಲವಾಯಿತು.

‘ಕೋಟಿ ಚೆನ್ನಯ’ ಹೆಸರು ಪ್ರಸ್ತಾಪ:

ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವ ಬಗ್ಗೆ ಅವಿಭಜಿತ ದ.ಕ. ಜಿಲ್ಲೆಯ ಶಾಸಕರು ತೀರ್ಮಾನಿಸಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಕುರಿತು ಪ್ರಸ್ತಾವನೆಯನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸುವುದಾಗಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಹೇಳಿದ್ದರು.

ವಾಸ್ತವದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ನಿರ್ದಿಷ್ಟ ಹೆಸರು ಇಡುವ ಬಗ್ಗೆ ರಾಜ್ಯ ಸರ್ಕಾರಗಳಿಂದ ಈವರೆಗೆ ಯಾವುದೇ ಪ್ರಸ್ತಾವನೆ ಕೇಂದ್ರಕ್ಕೆ ಹೋಗಿಲ್ಲ.

ಹೆಸರಿಗೆ ತೀವ್ರ ಪೈಪೋಟಿ:

ಮಂಗಳೂರು ವಿಮಾನ ನಿಲ್ದಾಣವನ್ನು ಕೋಟಿ ಚೆನ್ನಯ ವಿಮಾನ ನಿಲ್ದಾಣ ಎಂದು ಹೆಸರಿಸುವಂತೆ ಬಿಜೆಪಿ ಪ್ರಸ್ತಾಪಿಸಿದೆಯಾದರೂ ಅದು ಕಾರ್ಯಗತಗೊಳ್ಳದ ಕಾರಣ ಕಾಂಗ್ರೆಸ್‌ ಕೂಡ ಇದೇ ಬೇಡಿಕೆ ಮುಂದಿರಿಸಿ ಪಂಜಿನ ಮೆರವಣಿಗೆ ನಡೆಸಿದೆ. ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ನೇತೃತ್ವದಲ್ಲಿ ಒಂದು ವರ್ಷದ ಹಿಂದೆ ಮಂಗಳೂರಲ್ಲಿ ಪಂಜಿನ ಮೆರವಣಿಗೆ ನಡೆಸಿ ಕೋಟಿ ಚೆನ್ನಯ ವಿಮಾನ ನಿಲ್ದಾಣ ಎಂದೇ ಹೆಸರಿಸುವಂತೆ ಬೇಡಿಕೆ ಮಂಡಿಸಿದ್ದರು. ಅಥವಾ ಭೂಮಂಡಲ ಸೃಷ್ಟಿಗೆ ಕಾರಣನಾದ ‘ಪರಶುರಾಮ’ ಹೆಸರನ್ನೂ ಪ್ರಸ್ತಾಪಿಸಿದ್ದರು.

ಈ ನಡುವೆ ಸಾಮಾಜಿಕ ಕಾರ್ಯಕರ್ತ ದಿಲ್‌ರಾಜ್ ಆಳ್ವ ಅವರು, ಐತಿಹಾಸಿಕ ಪುರುಷರ ಹೆಸರುಗಳ ಬಗ್ಗೆ ಪೈಪೋಟಿ ಏರ್ಪಟ್ಟಿರುವುದರಿಂದ ಸಮಗ್ರ ಕರಾವಳಿಯ ಪ್ರಾತಿನಿಧಿಕವಾಗಿ ‘ತುಳುನಾಡು’ ಎಂದು ಹೆಸರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಮಧ್ಯೆ ಉಳ್ಳಾಲದಲ್ಲಿ ಪೋರ್ಚುಗೀಸರನ್ನು ಮಣಿಸಿದ ವೀರರಾಣಿ ಅಬ್ಬಕ್ಕನ ನೆನಪಿನಲ್ಲಿ ‘ವೀರರಾಣಿ ಅಬ್ಬಕ್ಕ’ ವಿಮಾನ ನಿಲ್ದಾಣ ಎಂದು ಹೆಸರಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ವ್ಯಕ್ತಪಡಿಸಿದ್ದಾರೆ. ಬಿಲ್ಲವ ಸಂಘಟನೆಗಳಿಂದ ‘ನಾರಾಯಣಗುರು’ ಹೆಸರೂ ಪ್ರಸ್ತಾಪಕ್ಕೆ ಬಂದಿದೆ. ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರಿಡುವಂತೆ ಈ ಹಿಂದೆಯೇ ಬೇಡಿಕೆ ಇರಿಸಿದ್ದೆವು. ಈಗ ಹಲವು ಹೆಸರುಗಳು ಕೇಳಿಬರುತ್ತಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಒಮ್ಮತದ ಅಭಿಪ್ರಾಯ ಪಡೆದುಕೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.