ಹಾಲಿಗೆ ನೀರು ಸೇರಿಸಿ ಕೆಎಂಎಫ್​​ಗೆ ವಂಚನೆ

| Published : Jun 25 2024, 12:33 AM IST

ಸಾರಾಂಶ

ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ಎನ್ನುವವರು ನಡೆಸುತ್ತಿರುವ ಅವ್ಯವಹಾರದ ಬಗ್ಗೆ ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಕೇಶವ ಅವರು ಕೋಚಿಮುಲ್ ಮತ್ತು ಕೆಎಂಎಫ್ ಗೆ ಮಾಹಿತಿ ನೀಡಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್​​ಗೆ ಹಾಲು ಸರಬರಾಜು ಮಾಡುವ ಬಿ.ಎಂ.ಸಿ ಕೇಂದ್ರ ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಲಸ ಮಾಡುವ ಡೇರಿ ಗುಮಾಸ್ತ ಹಾಗೂ ಕಾರ್ಯದರ್ಶಿ ಸೇರಿಕೊಂಡು ರೈತರು ತಂದು ಕೊಡುವ ಹಾಲಿಗೆ ನೀರು ಮಿಶ್ರಣ ಮಾಡಿ ಹೆಚ್ಚುವರಿ ಹಾಲಿನ ಲೆಕ್ಕ ತೋರಿಸಿದ್ದಾರೆ. ನಂತರ ಹೆಚ್ಚುವರಿಯಾಗಿ ಬಂದ ಹಾಲಿನ ಹಣವನ್ನು ಬೇನಾಮಿ ಅಕೌಂಟ್ ಗಳಿಗೆ ವರ್ಗಾವಣೆ ಮಾಡಿ ಲಕ್ಷ ಲಕ್ಷ ಹಣ ಗುಳಂ ಮಾಡಿರುವ ಘಟನೆ ತಾಲೂಕಿನ ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಿದೆ.

ಹಾಲು ಉತ್ಪಾದಕರ ಪ್ರತಿಭಟನೆ

ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ವಂಚನೆಯ ವಿರುದ್ದ ಆಕ್ರೋಶಗೊಂಡ ಹಾಲು ಉತ್ಪಾದಕರು, ಹಾಲು ಉತ್ಪಾದಕ ಸಹಕಾರ ಸಂಘದ ಮುಂದೆ ಪ್ರತಿಭಟನೆ ನಡೆಸಿದ್ದರು. ಸಂಘದ ಕಾರ್ಯದರ್ಶಿ ಮತ್ತು ಗುಮಾಸ್ತ ಸೇರಿ ಅಕ್ರಮವಾಗಿ ತಿಂದಿರುವ ಹಣ ವಾಪಸ್​​ ಕಟ್ಟಲೇ ಬೇಕು ಎಂದು ಆಗ್ರಹಿಸಿದ್ದರು. ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ಎನ್ನುವವರು ನಡೆಸುತ್ತಿರುವ ಅವ್ಯವಹಾರದ ಬಗ್ಗೆ ಅಜ್ಜವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಕೇಶವ ಅವರು ಕೋಚಿಮುಲ್ ಮತ್ತು ಕೆಎಂಎಫ್ ಗೆ ಮಾಹಿತಿ ನೀಡಿದ್ದರು.

₹4.70 ಲಕ್ಷ ಗೊಲ್‌ಮಾಲ್‌

ಗ್ರಾಮದ ರೈತ ಹರೀಶ ಎನ್ನುವವರು ಡೇರಿಯ ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ಜೋಡಿಯ ಅಕ್ರಮವನ್ನು ಪತ್ತೆ ಹಚ್ಚಿ ಸಂಘದ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ, ಇಬ್ಬರನ್ನೂ ತಕ್ಷಣ ಕೆಲಸದಿಂದ ತೆಗೆದು ಹಾಕಿದ್ದಾರೆ. ಇಬ್ಬರೂ ಸೇರಿ ಕಳೆದ ನಾಲ್ಕು ತಿಂಗಳಿಂದ 4 ಲಕ್ಷದ 70 ಸಾವಿರ ಹಣವನ್ನು ಗೋಲ್ ಮಾಲ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಘದ ಸದಸ್ಯರು ಡೇರಿಯ ಮುಂದೆ ಹಾಲಿನ ಕ್ಯಾನ್ ಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದರು.ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮುನಿರಾಜು ಮತ್ತು ಗುಮಾಸ್ತ ಮುನಿಕೃಷ್ಣ ರೈತರು ಹಾಕುವ ಹಾಲಿಗೆ ನ್ಯಾಯಯುತವಾಗಿ ಹಣ ನೀಡದೆ ರೈತರ ಹಾಲಿಗೆ ನೀರು ಮಿಶ್ರಣ ಮಾಡಿ ನೀರು ಸಮೇತ ಹೆಚ್ಚುವರಿ ಹಾಲನ್ನು ಕೆ.ಎಂಎಫ್ ಡೇರಿಗೆ ಹಾಕಿದ್ದಾರೆ. ರೈತರಿಗೆ ಹಾಗೂ ಕೆಎಂಎಫ್​​ಗೂ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.