ನೀಟ್ ಪರೀಕ್ಷೆ ಮುಂದೂಡಿರುವುದು ಕೇಂದ್ರದ ವೈಫಲ್ಯ

| Published : Jun 25 2024, 12:33 AM IST

ಸಾರಾಂಶ

ವೈದ್ಯಕೀಯ ವ್ಯಾಸಂಗಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಲವು ತಿಂಗಳುಗಳಿಂದ ತಯಾರಿ ನಡೆಸಿಕೊಂಡಿರುತ್ತಾರೆ. ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಪರೀಕ್ಷೆ ಮುಂದೂಡಿದರೆ ವಿದ್ಯಾರ್ಥಿಗಳ ಗತಿ ಏನು?

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ನೀಟ್ ಪರೀಕ್ಷೆ ಏಕಾಏಕಿಯಾಗಿ ರದ್ದುಪಡಿಸಿ ಮುಂದೂಡಿರುವುದು ಕೇಂದ್ರ ಸರ್ಕಾರದ ವೈಫಲ್ಯವಾಗಿದೆ ಇದಕ್ಕೆ ಕೇಂದ್ರ ಸರ್ಕರವೇ ಉತ್ತರಿಸಬೇಕು. ವೈದ್ಯರಾಗುವ ಕನಸು ಕಂಡಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಕೇಂದ್ರ ಸರ್ಕಾರ ಚಲ್ಲಾಟವಾಡುತ್ತಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಟೀಕಿಸಿದರು.

ಪಟ್ಟಣದ ಹೊರವಲಯದ ಸುಂಕಲಮ್ಮ ದೇವಾಲಯದ ಸಮೀಪದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಏರ್ಪಡಿಸಲಾಗಿದ್ದ ಲೋಕಸಭಾ ಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಪಡೆಯಲು ಶ್ರಮಿಸಿದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಪರಿಸ್ಥಿತಿ ಅಯೋಮಯ

ನೀಟ್ ಪರೀಕ್ಷೆ ಸೋಮವಾರ ನಿಗದಿಯಾಗಿತ್ತು. ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ನೀಟ್ ಪರೀಕ್ಷೆಯನ್ನು ಮುಂದೂಡಿದ ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯಕೀಯ ವ್ಯಾಸಂಗಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಲವು ತಿಂಗಳುಗಳಿಂದ ತಯಾರಿ ನಡೆಸಿಕೊಂಡಿರುತ್ತಾರೆ. ಈಗ ದಿಢೀರ್ ಆಗಿ ಪರೀಕ್ಷೆ ರದ್ದುಗೊಳಿಸಿ ಮುಂದೂಡಿದರೆ ಹೇಗೆ ಎಂದು ಪ್ರಶ್ನಿಸಿದರು.

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದಿಂದ ದೇಶದ ಲಕ್ಷಾಂತರ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿ ವಿದ್ಯಾರ್ಥಿಗಳು ಅಘಾತಕ್ಕೆ ಒಳಗಾಗಿದ್ದಾರೆ, ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕೆಂದರು.

ಹೆಚ್ಚು ಮತ ಪಡೆದರೂ ಅಭ್ಯರ್ಥಿ ಸೋಲು

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಆದರೆ ನಮ್ಮ ಪಕ್ಷ ಸೋಲು ಅನುಭವಿಸಿದೆ. ಯಾವುದೇ ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ ಮುಂದಿನ ಚುನಾವಣೆಗಳಲ್ಲಿ ಹೇಗೆ ಎದುರಿಸಬೇಕೆಂದು ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಜೊತೆ ಸಮಾಲೋಚನೆ ನಡೆಸುವ ಅಲೋಚನೆಯಿಂದಾಗಿ ಇಂದು ಪಕ್ಷದ ಎಲ್ಲರಿಗೂ ಔತಣಕೂಟವನ್ನು ಏರ್ಪಡಿಸಿದ್ದಾಗ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಶಂಕರರೆಡ್ಡಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾರಾಮಯ್ಯ, ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

24ಬಿಜಿಪಿ2: ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು. ಶಾಸಕ ಸುಬ್ಬಾರೆಡ್ಡಿ ಇದ್ದಾರೆ.