ಲಯನ್ಸ್ ಕ್ಲಬ್ ಆಫ್ ಫ್ರೆಂಚ್ ರಾಕ್ಸ್, ಭಗವಾನ್ ಮಹಾವೀರ ದರ್ಶನ ನೇತ್ರ ಆಸ್ಪತ್ರೆ, ಬಾಲ ಭೈರವೇಶ್ವರ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರಕ್ಕೆ ಸಂಸ್ಥೆ ಅಧ್ಯಕ್ಷ ಲ.ಕೆ.ಆರ್.ಸ್ವಾಮೀಗೌಡ ಕುರಹಟ್ಟಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್‌ರಿಂದ ಚಾಲನೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಬ್ಯಾಡರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಜಿ ಶಾಸಕ ದಿ.ಕೆ.ಎಸ್.ಪುಟ್ಟಣ್ಣಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಚಿನಕುರಳಿ ಸಿ.ಎಸ್.ಚಿಕ್ಕರಾಮೇಗೌಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಅಣ್ಣೇಗೌಡರ ಸ್ಮರಣಾರ್ಥ ಕಣ್ಣಿನ ಉಚಿತ ತಪಾಸಣೆ ನಡೆಸಿ ಕನ್ನಡಕ ವಿತರಿಸಲಾಯಿತು.

ಲಯನ್ಸ್ ಕ್ಲಬ್ ಆಫ್ ಫ್ರೆಂಚ್ ರಾಕ್ಸ್, ಭಗವಾನ್ ಮಹಾವೀರ ದರ್ಶನ ನೇತ್ರ ಆಸ್ಪತ್ರೆ, ಬಾಲ ಭೈರವೇಶ್ವರ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರಕ್ಕೆ ಸಂಸ್ಥೆ ಅಧ್ಯಕ್ಷ ಲ.ಕೆ.ಆರ್.ಸ್ವಾಮೀಗೌಡ ಕುರಹಟ್ಟಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅಧ್ಯಕ್ಷ ಲ.ಕೆ.ಆರ್.ಸ್ವಾಮೀಗೌಡ, ಲಯನ್ಸ್ ಕ್ಲಬ್ ಫ್ರೆಂಚ್‌ರಾಕ್ಸ್ ವತಿಯಿಂದ ತಾಲೂಕಿನಲ್ಲಿ 7 ದಿನಗಳ ಕಾಲ ವಿವಿಧ ಗ್ರಾಮಗಳಿಂದ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದೇವೆ. ಡಿ.9 ರಂದು ಸುಂಕಾತೊಣ್ಣೂರು ಗ್ರಾಪಂ ಆವರಣ, ಡಿ.10ರಂದು ಜಕ್ಕನಹಳ್ಳಿ ವೃತ್ತದ ಲಲಿತ ಆನಂದ್ ಕನ್ವೆನ್ಷನ್ ಹಾಲ್, ಡಿ.11ರಂದು ಚಿನಕುರಳಿಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ಡಿ.12ರಂದು ಬನ್ನಂಗಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಡಿ.13ರಂದು ಕ್ಯಾತನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಡಿ.15 ರಂದು ಪಾಂಡವಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ. ಸಾರ್ವಜನಿಕರು ಉಚಿತ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಿದೆ. ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿದೆ ಎಂದರು.

ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಶಿಬಿರದಲ್ಲಿ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ವೃದ್ಧರು, ಮಹಿಳೆಯರು, ಯುವಕ-ಯುವತಿಯರು ಹಾಗೂ ಸಾರ್ವಜನಿಕ ಭಾಗವಹಿಸಿ ಕಣ್ಣಿನ ತಪಾಸಣೆ ಮಾಡಿಸಿಕೊಂಡು, ಅಗತ್ಯ ಇರುವ ಸಾರ್ವಜನಿಕರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡಿದರು. ಶಸ್ತ್ರ ಚಿಕಿತ್ಸೆಗೆ ಅಗತ್ಯ ಇರುವ ರೋಗಿಗಳಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ರವಿರಾಜ್, ಲಯನ್ಸ್ ಕ್ಲಬ್ ಕಾರ್‍ಯದರ್ಶಿ ಪುಟ್ಟಬಸವೇಗೌಡ(ಕಾಂತರಾಜ್), ಖಜಾಂಚಿ ಎಸ್. ಆನಂದ್, ಲಯನ್ ಸುರೇಶ್, ದೇಶವಳ್ಳಿ ಪ್ರಭಾಕರ್, ಕೃಷ್ಣೇಗೌಡ, ಆಸ್ಪತ್ರೆಯ ವೈದ್ಯೆ ದೀಪಿಕ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.