ಸಾರಾಂಶ
ಹರಪನಹಳ್ಳಿ: ಕೊಟ್ಟೂರು ಗುರುಬಸವೇಶ್ವರ ರಥೋತ್ಸವಕ್ಕೆ ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ಸೇವೆ ನೀಡುವುದು ಭಕ್ತಿಯ ದ್ಯೋತಕ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಹೇಳಿದ್ದಾರೆ.
ಅವರು ಪಟ್ಟಣದ ಕೊಟ್ಟೂರು ವೃತ್ತದಲ್ಲಿ ಕೊಟ್ಟೂರು ಗುರುಬಸವೇಶ್ವರ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ಕಾಲು ನೋವು ಇತ್ಯಾದಿ ಸಮಸ್ಯೆಗಳಿಗೆ ಎಂ.ಪಿ. ರವೀಂದ್ರ ಪ್ರತಿಷ್ಠಾನದಿಂದ ನೀಡಿದ ಉಚಿತ ಆರೋಗ್ಯ ಸೇವೆಯ ವಾಹನಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.ಕೊಟ್ಟೂರು ರಥೋತ್ಸವಕ್ಕೆ ದೂರದ ಊರುಗಳಿಂದ ಭಕ್ತರ ಸಹಸ್ರ ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ, ಅಂತವರಿಗೆ ಪಾದ ಉರಿ, ಕಾಲು ನೋವು, ಸುಸ್ತು ಇತರೆ ದೈಹಿಕ ಸಮಸ್ಯೆಗಳಿಗೆ ಉಚಿತ ಔಷಧೋಪಚಾರ ಹೊತ್ತು ಕೊಂಡ ಸಂಚಾರಿ ಆ್ಯಂಬುಲೆನ್ಸ್ ವಾಹನ ಹರಪನಹಳ್ಳಿಯಿಂದ ಕೊಟ್ಟೂರುಗಳಿಗೆ ನಾಲ್ಕು ದಿನ ಸಂಚರಿಸುತ್ತದೆ ಎಂದು ಹೇಳಿದರು.
ರಾಗ ದ್ವೇಷ ತೊರೆದು ಮಾನವೀಯ ಮೌಲ್ಯ ಬೆಳೆಸಿಕೊಂಡು ಇಂತಹ ಸತ್ಕಾರ್ಯ ಮಾಡಿದರೆ ಕೊಟ್ಟೂರು ಗುರುಬಸವೇಶ್ವರರ ಆಶೀರ್ವಾದ ಸದಾ ಇರುತ್ತದೆ ಎಂದರು.ಎಂ.ಪಿ. ರವೀಂದ್ರ ಪ್ರತಿಷ್ಠಾನದ ಸದಸ್ಯ ಕೊಟ್ಟೂರು ಪ್ರದೀಪ ಮಾತನಾಡಿ, ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಧಾರ್ಮಿಕ, ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡಿದ್ದರು, ಅಂತವರ ಹೆಸರಿನಲ್ಲಿ ಶಾಸಕಿ ಎಂ.ಪಿ. ಲತಾ ಸಾಮಾಜಿಕ ಕಾರ್ಯ ಕೈಗೊಳ್ಳಲು ಎಂ.ಪಿ. ರವೀಂದ್ರ ಪ್ರತಿಷ್ಠಾನ ಸ್ಥಾಪಿಸಿದರು, ಇದೀಗ ಯುವ ಮುಖಂಡ ಗೌತಮ ಅಧ್ಯಕ್ಷರಾಗಿ ಸೇವೆ ಮುಂದುವರೆಸಿದ್ದಾರೆ ಎಂದು ತಿಳಿಸಿದರು.
ಕೊಟ್ಟೂರು ಪಾದಯಾತ್ರಿಗಳು ಈ ವಾಹನದ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.ಪುರಸಭಾ ಸದಸ್ಯ ಮಂಜುನಾಥ ಇಜಂತಕರ್, ಉದ್ದಾರ ಗಣೇಶ, ನಾಮನಿರ್ದೆಶಿತ ಸದಸ್ಯ ಎಚ್.ವಸಂತಪ್ಪ, ಗುಡಿ ನಾಗರಾಜ, ಮಹಾಂತೇಶ ನೀಲಗುಂದ, ಕೌಟಿ ವಾಗೀಶ ಇತರರು ಉಪಸ್ಥಿತರಿದ್ದರು.