ಬದುಕಿನ ಬಂಡಿಗೆ ಹೆಗಲುಗೊಟ್ಟ ಆಟೋರಾಣಿ!

| Published : Feb 22 2025, 12:45 AM IST

ಸಾರಾಂಶ

ಪತಿ ತೀರಿಕೊಂಡರೂ ಮಾನಸಿಕವಾಗಿ ಕುಗ್ಗದ ದಾವಲಬೀ ಆಟೋ ಓಡಿಸುತ್ತ ಜೀವನ ಕಟ್ಟಿಕೊಂಡಿದ್ದಾರೆ.

ಮಹೇಶ ಅರಳಿ

ಹುಬ್ಬಳ್ಳಿ: ಆಟೋ ಓಡಿಸುವುದು ಪುರುಷರು ಮಾತ್ರವಲ್ಲ, ಮಹಿಳೆಯರು ಓಡಿಸುತ್ತಾ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ನಗರದ ಅನಕ್ಷರಸ್ಥ ಮಹಿಳೆಯೊಬ್ಬರು ಸಾಧಿಸಿ ತೋರಿಸಿದ್ದಾರೆ.

ದಾವಲಬೀ ಛಬ್ಬಿ ಈ ವಿಭಿನ್ನ ಸಾಹಸಕ್ಕೆ ಕೈ ಹಾಕಿದ ಗಟ್ಟಿಗಿತ್ತಿ.

ನಗರದ ಗಾಂಧಿವಾಡದ ಬಾಡಿಗೆ ಮನೆಯೊಂದರ ನಿವಾಸಿಯಾದ ದಾವಲಬೀಗೆ ಓದು- ಬರಹ ಬಾರದು. ವಯಸ್ಸು 30. ಇಬ್ಬರು ಪುತ್ರರು ಇದ್ದಾರೆ. ಹಿರಿಯ ಮಗ 8ನೇ ತರಗತಿ, ಕಿರಿಯ ಪುತ್ರ 5ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾರೆ.

ದಾವಲಬೀ ಪತಿ ಹಸನಸಾಬ್‌ ಗಾರೆ ಕೆಲಸ ಮಾಡುತ್ತಿದ್ದರು. ಆದರೆ 3 ವರ್ಷದ ಹಿಂದೆ ಕಟ್ಟಡ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ತೀರಿಕೊಂಡರು. ಆಗ ಕುಟುಂಬದ ಜವಾಬ್ದಾರಿ ಇವರ ಹೆಗಲಿಗೆ ಬಿದ್ದಿತು. ಪತಿ ತೀರಿಕೊಂಡರೂ ಮಾನಸಿಕವಾಗಿ ಕುಗ್ಗಲಿಲ್ಲ. ಮಕ್ಕಳಿಗೋಸ್ಕರ ಏನೇ ಕಷ್ಟ ಬಂದರೂ ಎದುರಿಸಬೇಕೆಂದು ಸಂಕಲ್ಪ ಮಾಡಿದರು.

ಪತಿ ಇದ್ದಾಗ ಜೀವನ ಬಂಡಿ ಹೇಗೋ ಸಾಗುತ್ತಿತ್ತು. ಆದರೆ ಹಸನಸಾಬ್‌ ತೀರಿಕೊಂಡಾಗ ಕುಟುಂಬದ ಸಂಪೂರ್ಣ ನಿರ್ವಹಣೆಯ ಭಾರ ಇವರ ಮೇಲೆ ಬಿತ್ತು. ಆದರೂ ಹೆದರದೇ ಅವರಿವರ ಮನೆಯ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಕೆಲಕಾಲ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡಿದರು. ಆದರೆ ಕುಟುಂಬ ನಿರ್ವಹಣೆಗೆ ಆದಾಯ ಸಾಕಾಗುತ್ತಿರಲಿಲ್ಲ. ಅಲ್ಲದೇ ಮಕ್ಕಳಿಗೆ ಅನಾರೋಗ್ಯ ಉಂಟಾದಾಗ, ತಮಗೆ ಅವಶ್ಯಕತೆ ಇದ್ದಾಗ ರಜೆ ಸಿಗುತ್ತಿರಲಿಲ್ಲ ಎಂಬ ದಾವಲಬೀ ಅವರನ್ನು ಕೊರಗು ಕಾಡುತ್ತಿತ್ತು.

ಅವರಿಗೆ ಸ್ವಾವಲಂಬಿ ಆಗಬೇಕೆಂಬ ತುಡಿತ ಮೊದಲಿನಿಂದಲೂ ಇತ್ತು. ಆಟೋ ಓಡಿಸುವುದರಲ್ಲಿ ಆಸಕ್ತಿ ಇತ್ತು. ಸಂಬಂಧಿಯೊಬ್ಬರ ಬಳಿ ಆಟೋ ಓಡಿಸುವುದನ್ನು ಕಲಿತರು. ಅಲ್ಲದೇ ಆಟೋ ಓಡಿಸಿಯೇ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದರು.

2 ತಿಂಗಳ ಹಿಂದೆ ಬ್ಯಾಂಕ್‌ನಲ್ಲಿ ಸಾಲ ಮಾಡಿ ಎಲೆಕ್ಟ್ರಿಕ್‌ ಆಟೋ ಖರೀದಿಸಿದರು. ಅದಕ್ಕಾಗಿ ಎಲ್‌ಎಲ್‌ಆರ್‌ ಮಾಡಿಸಿದರು. 2 ತಿಂಗಳಿನಿಂದ ನಿರಂತರವಾಗಿ ಆಟೋ ಬಾಡಿಗೆ ಓಡಿಸುತ್ತಿದ್ದಾರೆ. ನಿತ್ಯ ಬೆಳಗ್ಗೆ 9.30ಕ್ಕೆ ಇವರ ಕಾಯಕ ಶುರುವಾಗುತ್ತದೆ. ಅಷ್ಟರೊಳಗೆ ತಿಂಡಿ, ಅಡುಗೆ ಸೇರಿ ಮನೆಗೆಲಸವನ್ನು ಮಾಡಿಕೊಳ್ಳುತ್ತಾರೆ. ತನ್ನ ಇಬ್ಬರು ಮಕ್ಕಳನ್ನು ಆಟೋದಲ್ಲಿಯೇ ಕೇಶ್ವಾಪುರದಲ್ಲಿನ ಶಾಲೆಗೆ ಬಿಟ್ಟು ಬರುತ್ತಾರೆ. ಬಳಿಕ ಸಂಜೆ 7 ಗಂಟೆಯವರೆಗೆ ಆಟೋ ಓಡಿಸುತ್ತಾ ದುಡಿಯುತ್ತಾರೆ. ನಿತ್ಯ ಆಟೋ ದುಡಿಮೆಯಿಂದ ₹800ರಿಂದ ₹1000ರ ವರೆಗೆ ಸಂಪಾದನೆ ಮಾಡುತ್ತಾರೆ. ಅದರಲ್ಲಿಯೇ ತಿಂಗಳಿಗೆ 12 ಸಾವಿರವನ್ನು ಆಟೋ ಸಾಲದ ಮರುಪಾವತಿ ಮಾಡುತ್ತಾರೆ. ಜತೆಗೆ ಮನೆ ಬಾಡಿಗೆ, ದಿನಸಿ ಖರ್ಚು, ಮಕ್ಕಳ ಶಾಲೆಯ ಫೀಯನ್ನು ಕಟ್ಟುತ್ತಾರೆ.

ನೀವು ಆಟೋ ಚಾಲಕಿ ವೃತ್ತಿಯನ್ನೇ ಯಾಕೆ ಮಾಡಿಕೊಂಡಿರಿ ಎಂದು ಕೇಳಿದರೆ, ನಾನು ಅನಕ್ಷರಸ್ಥೆ. ಹೀಗಾಗಿ ನೌಕರಿ ಸಿಗಲ್ಲ. ಅವರಿವರ ಬಳಿ ಕೆಲಸ ಮಾಡಿದರೆ ಕಿರಿಕಿರಿಯೇ ಹೆಚ್ಚು. ಸಂಬಂಧಿಯೊಬ್ಬರ ಬಳಿ ಆಟೋ ಓಡಿಸುವುದನ್ನು ಕಲಿತಿದ್ದೆ. ಹೀಗಾಗಿ ಆಟೋದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದೆ ಎಂದು ಮುಗುಳ್ನಗೆ ಬೀರಿದರು ದಾವಲಬೀ.

ಪತಿ ತೀರಿಕೊಂಡರೆಂದು ವಿಧಿಯನ್ನು ಹಳಿಯುತ್ತಾ ಕೂರದೇ ಬಂದ ಕಷ್ಟಗಳನ್ನೆಲ್ಲ ಸಮಚಿತ್ತದಿಂದ ಎದುರಿಸುತ್ತಾ ಛಲದಿಂದ ಬದುಕು ಕಟ್ಟಿಕೊಂಡ ಇವರು ಮಹಿಳೆಯರಿಗೆ ಮಾದರಿಯಾಗಿದ್ದಾರೆ.ಆಟೋವೇ ನನ್ನ ಬದುಕಿನ ಬಂಡಿ

ನಾನು 10 ವರ್ಷದವಳಿದ್ದಾಗ ನನ್ನ ತಂದೆ ತೀರಿಕೊಂಡರು. ಮದುವೆಯಾಗಿ ಕೆಲ ವರ್ಷದಲ್ಲೇ ಪತಿ ವಿಧಿವಶರಾದರು. ಎಲ್ಲಿಯಾದರೂ ಕೆಲಸ ಮಾಡೋಣ ಅಂದರೆ ಓದು- ಬರಹ ಕಲಿತಿರಲಿಲ್ಲ. ನನ್ನ ಆತ್ಮವಿಶ್ವಾಸವೇ ನನ್ನನ್ನು ಸ್ವಾವಲಂಬಿಯಾಗಿಸಿದೆ. ಆಟೋವೇ ನನ್ನ ಬದುಕಿನ ಬಂಡಿ ಸಾಗಿಸುತ್ತಿದೆ.

- ದಾವಲಬೀ ಛಬ್ಬಿ, ಆಟೋ ಚಾಲಕಿ