ಸಾರಾಂಶ
ಕರ್ನಾಟಕ ಗ್ಯಾರಂಟಿ ಮಾದರಿ ಕೇಂದ್ರ ಗುರುತಿಸಲಿ । ಎಲ್ಲಾ ರಾಜ್ಯಗಳಿಗೂ ಆರ್ಥಿಕ ಬೆಂಬಲ ನೀಡಲಿ: ಸಿಎಂಕನ್ನಡಪ್ರಭ ವಾರ್ತೆ ಬೆಂಗಳೂರು
‘ರಾಜ್ಯದಲ್ಲಿ ಪಂಚ ಗ್ಯಾರಂಟಿಗಳಿಂದ ನಾಲ್ಕು ಜನರ ಕುಟುಂಬ ಕನಿಷ್ಠ ಸರಾಸರಿ ತಿಂಗಳಿಗೆ 10 ಸಾವಿರ ರು. ಪ್ರಯೋಜನ ಪಡೆಯುತ್ತಿದೆ. ತನ್ಮೂಲಕ ಕರ್ನಾಟಕ ಗ್ಯಾರಂಟಿ ಮಾದರಿ ಸಾಮಾಜಿಕ, ಆರ್ಥಿಕ ಕ್ರಾಂತಿಗೆ ಕಾರಣವಾಗಿದ್ದು, ಇದನ್ನು ರಾಷ್ಟ್ರೀಯ ಮಾದರಿಯಾಗಿ ಗುರುತಿಸಿ ಎಲ್ಲಾ ರಾಜ್ಯಗಳಲ್ಲೂ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಆರ್ಥಿಕ ಬೆಂಬಲ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಕೇಂದ್ರ ಸರ್ಕಾರ ರಾಜ್ಯದ ಗ್ಯಾರಂಟಿ ಮಾದರಿಯನ್ನು ಗುರುತಿಸಿ ರಾಜ್ಯಗಳಿಗೆ ಹೆಚ್ಚುವರಿ ಹಾಗೂ ನ್ಯಾಯಬದ್ಧ ಆರ್ಥಿಕ ಬೆಂಬಲ ನೀಡಬೇಕು. ತನ್ಮೂಲಕ ರಾಜ್ಯಗಳು ತನ್ನ ಜನರ ಮೇಲೆ ಹೂಡಿಕೆಗೆ ನೆರವಾಗಬೇಕು ಎಂದೂ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ವಿತ್ತೀಯ ಕಾರ್ಯನೀತಿ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಭಾಷಣವನ್ನು ಅವರ ಅನುಪಸ್ಥಿತಿಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಓದಿದರು.ಈ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿ ಮಾಡಿದಾಗ ಪ್ರತಿಪಕ್ಷಗಳು ಟೀಕಿಸಿದ್ದವು. ಈಗ ಎಲ್ಲಾ ರಾಜ್ಯಗಳಲ್ಲೂ ಇದೇ ಮಾದರಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿವೆ.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದು, 4 ಜನರ ಚಿಕ್ಕ ಕುಟುಂಬ ಸರಾಸರಿ ಮಾಸಿಕ 10,000 ರು. ಪ್ರಯೋಜನ ಪಡೆಯುತ್ತದೆ. ಇದು ನೇರವಾಗಿ ಆರ್ಥಿಕ ಸ್ಥಿರತೆ, ಬಡತನ ನಿರ್ಮೂಲನೆ ಜತೆಗೆ ಅವರ ಸಾಲದ ಅವಲಂಬನೆ ಕಡಿಮೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಭ್ರಷ್ಟಾಚಾರ ಮುಕ್ತ ವ್ಯವಸ್ಥೆ:
ಪಂಚ ಗ್ಯಾರಂಟಿಗಳು ಸಾಮಾಜಿಕ ಕ್ರಾಂತಿ ಜತೆಗೆ ಮಹಿಳೆಯರಿಗೆ ಆರ್ಥಿಕ ಸ್ವಾಯತ್ತತೆ ನೀಡಿದೆ. ಬಡವರಿಗೆ ಘನತೆ ಪುನಃಸ್ಥಾಪಿಸಿವೆ. ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳಿಗೆ ಗ್ಯಾರಂಟಿ ತಲುಪುತ್ತಿರುವುದರಿಂದ ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಜಾರಿಯಾಗಿದೆ. ಇದು ವಿಧಾನಸೌಧದ ಕಾರಿಡಾರ್‌ಗಳಲ್ಲಿ ರೂಪಿಸಿದ ಯೋಜನೆಗಳಲ್ಲ, ಬದಲಾಗಿ ಜನಸಾಮಾನ್ಯರ ಜೀವನದಿಂದ ಪ್ರೇರಣೆ ಪಡೆದ ಯೋಜನೆಗಳು. ಹೀಗಾಗಿಯೇ ಯಶಸ್ವಿಯಾಗಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.96,000 ಕೋಟಿ ರು. ವೆಚ್ಚ:
ಖಾತರಿ ಯೋಜನೆಗಳ ಅನುಷ್ಠಾನಕ್ಕಾಗಿ 96,000 ಕೋಟಿ ರು. ವೆಚ್ಚ ಮಾಡಿದ್ದೇವೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 51,034 ಕೋಟಿ ರು. ಹಂಚಿಕೆ ಮಾಡಲಾಗಿದೆ. ಈ ಪೈಕಿ ಗೃಹ ಲಕ್ಷ್ಮೀಗೆ ಶೇ. 56.06, ಗೃಹಜ್ಯೋತಿಗೆ ಶೇ. 19.7, ಅನ್ನಭಾಗ್ಯ ಯೋಜನೆಗೆ ಶೇ.12.59, ಶಕ್ತಿ ಯೋಜನೆಗೆ ಶೇ.10.39, ಯುವನಿಧಿಗೆ ಶೇ.1.18 ರಷ್ಟು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಅಧ್ಯಯನಗಳ ಪ್ರಕಾರ ಶಕ್ತಿ ಯೋಜನೆ ಬೆಂಗಳೂರಿನಲ್ಲಿ ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದನ್ನು ಶೇ.23 ರಷ್ಟು ಹೆಚ್ಚಿಸಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಶೇ.21ರಷ್ಟು ಹೆಚ್ಚಿಸಿದೆ. ಅವರು ಪ್ರತಿ ತಿಂಗಳು ಸರಾಸರಿ 1,000 ರು. ಪ್ರಯಾಣ ವೆಚ್ಚ ಉಳಿಸುತ್ತಿದ್ದಾರೆ. ರಾಜ್ಯದ ತಲಾದಾಯ ದೇಶದಲ್ಲೇ ಮೊದಲ ಸ್ಥಾನಕ್ಕೆ ತಲುಪಿದ್ದು, ಗ್ಯಾರಂಟಿಗಳಿಂದ ತಳ ಮಟ್ಟದಲ್ಲಿ ಖರೀದಿ ಸಾಮರ್ಥ್ಯ ವೃದ್ಧಿಸಿದೆ. ತನ್ಮೂಲಕ ಗ್ರಾಮೀಣ ಉದ್ಯೋಗ ಸೃಷ್ಟಿ, ಜಿಎಸ್ಟಿ ಸಂಗ್ರಹದಲ್ಲೂ ಹೆಚ್ಚಳ ಕಂಡಿದ್ದು, ಆರ್ಥಿಕತೆ ಉತ್ತಮಗೊಂಡಿದೆ. ಕೇಂದ್ರದ ಮಲತಾಯಿ ಧೋರಣೆ ಹೊರತಾಗಿಯೂ ಯಶಸ್ವಿಯಾಗಿ ರಾಜ್ಯ ಮುನ್ನುಗ್ಗುತ್ತಿದೆ. ನಮ್ಮ ಯೋಜನೆಗಳು ವಿಶ್ವಸಂಸ್ಥೆಗೆ ಪ್ರೇರಣೆಯಾಗಿವೆ ಎಂದರು.
;Resize=(128,128))