ಬಡವರಿಗೆ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪಬೇಕು-ಹಿರೇಮಠ

| Published : Nov 05 2025, 12:30 AM IST

ಬಡವರಿಗೆ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪಬೇಕು-ಹಿರೇಮಠ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಬಡವರಿಗೆ ತಲುಪಿಸಬೇಕು. ಹೀಗಾಗಿ ಸಮಿತಿಯ ಎಲ್ಲಾ ಸದಸ್ಯರು ತಮ್ಮ ಹಂತದಲ್ಲಿ ಕೆಲಸ ಮಾಡಬೇಕು. ಯೋಜನೆಗಳ ಅನುಷ್ಠಾನದಿಂದ ಸಾರ್ವಜನಿಕರಿಗೆ ಅನುಕೂಲವಾದ ಬಗ್ಗೆ ಯಶೋಗಾಥೆ ಮೂಲಕ ಗಮನ ಸೆಳೆಯಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಹಿರೇಮಠ ಹೇಳಿದರು.

ಹಾವೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಬಡವರಿಗೆ ತಲುಪಿಸಬೇಕು. ಹೀಗಾಗಿ ಸಮಿತಿಯ ಎಲ್ಲಾ ಸದಸ್ಯರು ತಮ್ಮ ಹಂತದಲ್ಲಿ ಕೆಲಸ ಮಾಡಬೇಕು. ಯೋಜನೆಗಳ ಅನುಷ್ಠಾನದಿಂದ ಸಾರ್ವಜನಿಕರಿಗೆ ಅನುಕೂಲವಾದ ಬಗ್ಗೆ ಯಶೋಗಾಥೆ ಮೂಲಕ ಗಮನ ಸೆಳೆಯಬೇಕು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಹಿರೇಮಠ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಹಾಗೂ ಯುವನಿಧಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸಿದರು. ಅಧಿಕಾರಿಗಳು ಅಂಕಿ ಅಂಶಗಳ ಮಾಹಿತಿ ನೀಡಿದರು.ಜಿಲ್ಲೆಯಲ್ಲಿನ ಎಲ್ಲ ಬಸ್ ನಿಲ್ದಾಣಗಳಲ್ಲಿನ ಶೌಚಾಲಯ ಸ್ವಚ್ಛತೆ, ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಹೊಸ ಮಾರ್ಗಗಳಲ್ಲಿ ಮತ್ತು ಕೋರಿರುವ ಮಾರ್ಗದಲ್ಲಿ ಹೊಸ ಸಾರಿಗೆ ಸೌಲಭ್ಯ ಅವಶ್ಯವಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮಾರ್ಗಗಳನ್ನು ಹೊಂದಾಣಿಕೆ ಮಾಡಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.ಗೃಹಜ್ಯೋತಿ ಯೋಜನೆ ಕುರಿತು ಚರ್ಚಿಸಿ ಪಿ.ಎಂ. ಸೂರ್ಯಘರ್ ಯೋಜನೆ, ಸೋಲಾರ್ ಬಳಕೆ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಿ ಮತ್ತು ಗ್ರಾಮೀಣ ಭಾಗಗಳಲ್ಲಿ ದಿನವಿಡಿ ವಿದ್ಯುತ್ ಉರಿಯುತ್ತಿರುತ್ತವೆ. ಇದರಿಂದ ಅನಗತ್ಯ ವಿದ್ಯುತ್ ಬಳಕೆಯಾಗುತ್ತಿದೆ. ಇದನ್ನು ತಡೆಯಲು ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಗೃಹಲಕ್ಷ್ಮಿ ಯೋಜನೆ ಕುರಿತು ಪರಿಶೀಲನೆ ನಡೆಸಿ, ಜುಲೈವರೆಗೆ 2 ಸಾವಿರ ರು., ಜಮೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇತ್ತೀಚಿಗೆ ಗ್ರಾಮೀಣ ಬ್ಯಾಂಕ್ ವಿಲೀನ ಆಗಿ ಕೆಲ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವುದಿಲ್ಲ ಇದನ್ನು ಕೂಡಲೇ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಯುವನಿಧಿಯಡಿ ವಿದ್ಯಾರ್ಥಿಗಳ ನೋಂದಣಿಗಾಗಿ ಅಭಿಯಾನ ಕೈಕೊಂಡು ನೋಂದಣಿ ಮಾಡಿಸಿ, ಇದು ನಿರಂತರ ಕ್ರಿಯೆಯಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಈ ಯೋಜನೆ ಕುರಿತು ಅರಿವು ಮೂಡಿಸಿ, ಜಿಲ್ಲೆಯಲ್ಲಿ ಪ್ರತಿಶತ ಶೇ. 88ರಷ್ಟು ಗುರಿ ಸಾಧಿಸಲಾಗಿದೆ ಎಂದರು. ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಎಚ್.ವೈ. ಮೀಸಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.