ಸಾರಾಂಶ
ಸವಣೂರ: ಎಸ್.ಎಫ್.ಎಸ್. ಕಾನ್ವೆಂಟ್ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಹಾಕದೆ ರಾಷ್ಟ್ರೀಯ ಹಬ್ಬಗಳನ್ನು ತಿರಸ್ಕರಿಸಲು ಕೇವಲ ಕ್ರಿಶ್ಚಿಯನ್ ಹಬ್ಬಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಇಂತಹ ಶಾಲೆಯ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ಕೈಗೊಂಡು ಬಿಇಓ ಎಂ.ಎಫ್. ಬಾರ್ಕಿ ಅವರ ಮೂಲಕ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದರು.ಭಾರತದಲ್ಲಿ ಹಬ್ಬಗಳಿಗೆ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಮಹತ್ವ ಪಡೆದಿದೆ. ಸಾವಿರಾರು ವರ್ಷದಿಂದ ಆಚರಿಸುತ್ತಾ ಬಂದಿರುವ ಸಂಪ್ರದಾಯ ಭಾರತೀಯರದ್ದಾಗಿದೆ. ಈ ಆಚರಣೆಯು ವೈವಿಧ್ಯತೆಯಿಂದ ಕೂಡಿದೆ ಹಾಗೂ ಆಹಾರ, ಬಂಧುತ್ವ, ವೇಷಭೂಷಣ, ಪೂಜಾ ವಿಧಾನ ಮತ್ತು ಸಾಮರ್ಥ್ಯದಿಂದ ಕೂಡಿದ ಹಬ್ಬಗಳನ್ನು ಆಚರಿಸುವುದು ಹಾಗೂ ಮುಂದಿನ ಪೀಳಿಗೆಗೆ ಒಪ್ಪಿಸುವುದು ನಡೆದುಕೊಂಡು ಬಂದಿದೆ. ದಸರಾ (ವಿಜಯದಶಮಿ) ಹಬ್ಬ ಜಾತಿ, ಭಾಷೆ, ರಾಜ್ಯ ಎಲ್ಲವನ್ನು ಮೀರಿ ಆಚರಿಸುವಂತಹ ಹಬ್ಬಗಳಲ್ಲಿ ವಿಜಯದಶಮಿ ಹಬ್ಬ ಮಹತ್ವ ಪಡೆದಿದೆ. ಸರ್ಕಾರ ಹಾಗೂ ಭಾರತೀಯರು ಉತ್ಸಾಹದಿಂದ ಭಾಗಿಯಾಗಿ ವಿಜೃಂಭಣೆಯಿಂದ ಆಚರಿಸುವುದಕ್ಕಾಗಿ ರಜೆ ಘೋಷಣೆಯನ್ನು ಮಾಡಿದೆ. ಹಾಗೆಯೇ ಮುಂದಿನ ಪೀಳಿಗೆಯಾದ ವಿದ್ಯಾರ್ಥಿಗಳಿಗೆ ಈ ಹಬ್ಬದ ಮಹತ್ವ ಹಾಗೂ ಆಚರಿಸುವ ವಿಧಿವಿಧಾನ ಹಿನ್ನೆಲೆ ಇವುಗಳನ್ನು ತಿಳಿದುಕೊಳ್ಳಲು ಸರ್ಕಾರ ಶಾಲಾ-ಕಾಲೇಜುಗಳಿಗೆ 15 ದಿನಗಳ ರಜೆಯನ್ನು ಘೋಷಿಸಿರುತ್ತದೆ. ಆದರೆ, ಕಾನ್ವೆಂಟ್ ಶಾಲೆಗಳಲ್ಲಿ ಸರ್ಕಾರದ ಸೂಚನೆ ಪಾಲಿಸದೆ ದಸರಾ ರಜೆ ಕೊಡದೆ ಆಜ್ಞೆ ಉಲ್ಲಂಘನೆ ಮಾಡುತ್ತಿದ್ದಾರೆ. ಕಾನ್ವೆಂಟ್ ಶಾಲೆಗಳಲ್ಲಿ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರ ಭಾವಚಿತ್ರ ಕೂಡ ಹಾಕದೆ ಸರ್ಕಾರದ ಸೂಚನೆ ಪಾಲಿಸಲಾಗುತ್ತಿಲ್ಲ. ಕೆಲವೊಂದು ಕಡೆ ರಾಷ್ಟ್ರೀಯ ಹಬ್ಬಗಳ ಆಚರಣೆಯು ಮಾಡುತ್ತಿಲ್ಲ. ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಈ ತಪ್ಪುಗಳನ್ನು ಸರಿಪಡಿಸಲು ಶ್ರೀರಾಮ ಸೇನೆ ಆಗ್ರಹಿಸಿದೆ.ದಸರಾ ರಜೆ ದಿನಗಳಲ್ಲಿ ಪರೀಕ್ಷೆ ಘೋಷಿಸಿದ್ದಾರೆ ಇದು ಅಪಾಯಕಾರಿಯಾಗಿದೆ. ಶಿಕ್ಷಕರು, ಪೋಷಕರು, ಮಕ್ಕಳು ಸೇರಿ ಎಲ್ಲರೂ ಮುಕ್ತವಾಗಿ ಹಬ್ಬವನ್ನು ಆಚರಿಸಲು ಆಗುವುದಿಲ್ಲ. ಅವರನ್ನು ಹಬ್ಬದಿಂದ ವಂಚಿಸಲಾಗುತ್ತಿದೆ. ಆದಕಾರಣ ಪರೀಕ್ಷೆಯನ್ನು ಕೂಡಲೇ ರದ್ದುಗೊಳಿಸಬೇಕು. ಪಾಲಕರು-ಪೋಷಕರು ಈ ಪರೀಕ್ಷೆ ಬಗ್ಗೆ ತಕರಾರು ಮಾಡಿದಲ್ಲಿ ಅವರನ್ನು ಬೆದರಿಸಲಾಗುತ್ತಿದೆ. ಅಷ್ಟೇ ಅಲ್ಲ ತಕರಾರು ಮಾಡಿದ ಪಾಲಕರ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಈ ಕಾರಣಕ್ಕೆ ಕೂಡಲೇ ಪರೀಕ್ಷೆಯನ್ನು ತಡೆದು ಸಂಬಂಧ ಪಟ್ಟವರ ಮೇಲೆ ಕ್ರಮವಾಗಬೇಕು. ಗಾಂಧೀಜಿ ಡಾ. ಬಿ.ಆರ್. ಅಂಬೇಡ್ಕರ್ ಬಸವೇಶ್ವರ ಭಾವಚಿತ್ರ ಕಡ್ಡಾಯವಾಗಿ ಕಾನ್ವೆಂಟ್ ಶಾಲೆಗಳಲ್ಲಿ ಇರುವುದನ್ನು ಅಧಿಕಾರಿಗಳು ದೃಢಪಡಿಸಬೇಕು. ಸಾಕಷ್ಟು ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಉತ್ಸವದ ಆಚರಣೆ ಮಾಡಲಾಗುತ್ತಿಲ್ಲ. ಕಡ್ಡಾಯವಾಗಿ ಆಚರಿಸಿ ಅದರ ವರದಿಯನ್ನು ತರಿಸಿಕೊಳ್ಳಬೇಕು. ಹಿಂದೂ ಹಬ್ಬಗಳಿಗೆ, ಹಿಂದೂ ಆಚರಣೆಗಳಿಗೆ ಹಾಗೂ ಹಿಂದೂ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಮಾನಸಿಕ, ಆರ್ಥಿಕವಾಗಿ ತೊಂದರೆ ಕೊಡುತ್ತಿದ್ದು ಗಮನಕ್ಕೆ ಬಂದಿರುತ್ತದೆ ಇದನ್ನು ಕೂಡಲೇ ನಿಲ್ಲಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಶ್ರೀರಾಮ ಸೇನಾ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಗದಿಗೆಪ್ಪ ಕುರವತ್ತಿ, ಮಹೇಶ ಮುದಗಲ್, ಪ್ರವೀಣ ಚರಂತಿಮಠ, ಕಿರಣಕುಮಾರ ದೊಡ್ಡಮನಿ, ಪ್ರವೀಣ ಬಾಲೇಹೊಸೂರ, ಶ್ರೀನಿವಾಸ ಗಿತ್ತೆ, ಸಮೀತ ಕೆಮ್ಮಣಕೇರಿ, ವಿನಾಯಕ ಕುಲಕರ್ಣಿ, ವೀರೇಶ ಕಳಕಪ್ಪನವರ, ಸಂತೋಷ ಕೆಂಚನಗೌಡ್ರ, ವಿನಾಯಕ ವಾಲಿಶೆಟ್ಟರ, ಗಜಾನನ ರಾಶಿನಕರ, ಅರುಣ ಬೋವಿ, ಮಾಂತೇಶ ಮಾನೇಗಾರ, ಪ್ರವೀಣ ಆರೇರ, ಪವನ ರಸಾಳಕರ, ಮಾಂತೇಶ ಗಡಗದಲಿ, ರವಿ ಗಡಗದಲಿ, ಶಂಭು ಕಲ್ಮಠ, ಪರಶು, ಕುಮಾರ ಉಪ್ಪಿನ, ಅಭಿ ಬೋವಿ, ಮಹೇಶ ಬೋವಿ, ರಘು ಗಡಗದಲಿ, ನವೀನ ಶಿರಸಂಗಿ ಇದ್ದರು.