ಸಾರಾಂಶ
ದಿಲ್ಲಿ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಹಮ್ಮಿಕೊಂಡಿರುವ ವೋಟ್ ಚೋರ್ ಗದ್ದಿ ಚೋಡ್ ಅಭಿಯಾನಕ್ಕೆ ಬೆಂಬಲವಾಗಿ ಹಾವೇರಿ ಜಿಲ್ಲೆಯ ಎಲ್ಲಾ ಬೂತ್‌ಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು. ಕನಿಷ್ಠ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸಿ ರಾಹುಲ್ ಗಾಂಧಿ ಅವರಿಗೆ ಕಳುಹಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ಹಾವೇರಿ: ದಿಲ್ಲಿ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಹಮ್ಮಿಕೊಂಡಿರುವ ವೋಟ್ ಚೋರ್ ಗದ್ದಿ ಚೋಡ್ ಅಭಿಯಾನಕ್ಕೆ ಬೆಂಬಲವಾಗಿ ಹಾವೇರಿ ಜಿಲ್ಲೆಯ ಎಲ್ಲಾ ಬೂತ್‌ಗಳಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು. ಕನಿಷ್ಠ 1 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸಿ ರಾಹುಲ್ ಗಾಂಧಿ ಅವರಿಗೆ ಕಳುಹಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇಶಾದ್ಯಂತ ಅಭಿಯಾನ ಆರಂಭಗೊಂಡಿದ್ದು, ಜಿಲ್ಲೆಯಲ್ಲಿಯೂ ಮುಂದಿನ 15 ದಿನಗಳ ಕಾಲ ನಡೆಯಲಿದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 100 ಸಹಿ ಸಂಗ್ರಹ ಮಾಡಿ ಕನಿಷ್ಠ 1 ಲಕ್ಷ ಸಹಿ ಸಂಗ್ರಹಿಸಿ ರಾಹುಲ್ ಗಾಂಧಿ ಅವರಿಗೆ ಕಳುಹಿಸಲಾಗುವುದು. ಮತ ಕಳ್ಳತನದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ ಜಾಗ ಖಾಲಿ ಮಾಡಬೇಕೆಂದು ರಾಹುಲ್ ಗಾಂಧಿ ವೋಟ್ ಚೋರ್ ಗದ್ದಿ ಚೋಡ್ ಅಭಿಯಾನ ನಡೆಸುತ್ತಿದ್ದಾರೆ. ರಾಜ್ಯ ಮತ್ತು ದೇಶದಲ್ಲಿ ಆಗಿರುವ ಮತಗಳ್ಳತನವನ್ನು ಚುನಾವಣಾ ಆಯೋಗದ ಮುಂದೆ ಇಡುವ ಅಭಿಯಾನ ಇದಾಗಿದೆ. ರಾಹುಲ್ ಗಾಂಧಿ ಪುರಾವೆ ಸಮೇತ ಹಗರಣ ಬಿಚ್ಚಿಟ್ಟಿದ್ದಾರೆ. ಮತದಾನದ ಹಕ್ಕಿನ ಕಳ್ಳತನ ನಿರಂತರವಾಗಿ ಆಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಶಿಗ್ಗಾವಿ-ಸವಣೂರು ಶಾಸಕ ಯಾಸೀರ್‌ಖಾನ್ ಪಠಾಣ್ ಮಾತನಾಡಿ, ಯಾವುದೇ ಜನಪರ ಯೋಜನೆ ಜಾರಿಗೊಳಿಸದೆ, ಜನಸ್ನೇಹಿ ಕ್ರಾಂತಿ ಮಾಡದೆ ಬಿಜೆಪಿಯವರು ನಿರಂತರವಾಗಿ ಗೆಲ್ಲುತ್ತಾರೆ ಅಂದ್ರೆ ಜನ ಅರ್ಥ ಮಾಡಿಕೊಳ್ಳಬೇಕು. ವೋಟಿಂಗ್ ಮಷಿನ್‌ನಲ್ಲಿ ಸೆಟ್ಟಿಂಗ್ ಮಾಡಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷ, ಆಳಂದದಲ್ಲಿ 9 ಸಾವಿರ ವೋಟ್ ಪಡೆಯುತ್ತಾರೆ. ದೇಶದಲ್ಲಿ ಶೇ.67ರಷ್ಟು ಜನರು ಮೋದಿ ವಿರುದ್ಧವಿದ್ದರೆ, ಶೇ.33ರಷ್ಟು ಪರವಿದ್ದಾರೆ. ಹಾವೇರಿ ನಗರದ ಜನ ವೋಟರ್ ಲಿಸ್ಟ್ ಪರಿಶೀಲನೆ ಮಾಡಿಕೊಳ್ಳಬೇಕು. ಯುವ ಜನತೆ ಉಳಿವು, ದೇಶದ ಉಳಿವಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ತಾಲೂಕು ಹಂತ, ಬ್ಲಾಕ್ ಮಟ್ಟ, ಬೂತ್ ಮಟ್ಟದಲ್ಲಿ ಜಾಗೃತಿ ಮಾಡಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಯುದ್ಧೋಪಾಯದಲ್ಲಿ ಮುನ್ನಡೆಯೋಣ ಎಂದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ವಿರೋಧ ಪಕ್ಷ ನೀಡುವ ಸಲಹೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು. ಸಲಹೆ ಸೂಚನೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಶಕ್ತಿ ಆಡಳಿತ ಪಕ್ಷಕ್ಕೆ ಬರುವುದಿಲ್ಲವೋ ಅದು ಒಳ್ಳೆಯ ಪ್ರಜಾಪ್ರಭುತ್ವ ಅಲ್ಲ. ಜಿಲ್ಲೆಯಲ್ಲಿಯೂ ಚುನಾವಣೆ ಸಮಯದಲ್ಲಿ ಎಲ್ಲೆಲ್ಲಿ ಮತದಾನ ಮಾಡಲಿಕ್ಕೆ ಅವಕಾಶ ಕೊಟ್ಟಿಲ್ಲ ಎಂಬುದನ್ನು ಕಾರ್ಯಕರ್ತರು ಪತ್ತೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಮಹಿಳಾ ಜಿಲ್ಲಾಧ್ಯಕ್ಷೆ ಪ್ರೇಮಾ ಪಾಟೀಲ, ಎಂ.ಎಂ.ಮೈದೂರ ಮಾತನಾಡಿದರು. ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ನಗರಸಭೆ ಆಶ್ರಯ ಕಮಿಟಿ ಅಧ್ಯಕ್ಷ ಜಗದೀಶ ಬೆಟಗೇರಿ, ಪ್ರಭುಗೌಡ ಬಿಷ್ಟನಗೌಡ್ರ, ಬಸವರಾಜ ಹೆಡಿಗ್ಗೊಂಡ, ದಾಸಪ್ಪ ಕರ್ಜಗಿ, ಐ.ಯು.ಪಠಾಣ್, ಮಂಜುನಾಥ ಕಚವಿ, ಎಂ.ಜೆ. ಮುಲ್ಲಾ, ಶಾಂತಕ್ಕ ಶಿರೂರು ಸೇರಿದಂತೆ ಇತರರು ಇದ್ದರು. ಹಾವೇರಿ ಲೋಕಸಭೆ ಕ್ಷೇತ್ರದಲ್ಲೂ ವೋಟ್ ಚೋರಿಯಾಗಿರುವ ಸಂಶಯವಿದೆ. ಬೂತ್ ಹಂತದಲ್ಲಿ ಸಹಿ ಸಂಗ್ರಹ ಮಾಡಿಕೊಂಡು ಬಂದು ತೋರಿಸಿದರೆ ಜನರಿಗೆ ಗೊತ್ತಾಗುತ್ತದೆ. ಬಿಹಾರದಲ್ಲಿ ವೋಟ್ ಚೋರ್ ಅಭಿಯಾನ ಯಶಸ್ವಿಯಾಗಿದ್ದು, ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಬಿಜೆಪಿ ಮುಖವಾಡ ಕಳಚುವ ಶಕ್ತಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತದೆ. ರಾಹುಲ್ ಅವರಿಗೆ ಬಲ ತುಂಬುವ ಪ್ರಯತ್ನ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.