ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಬೇಕು

| Published : Aug 19 2024, 12:46 AM IST

ಸಾರಾಂಶ

ಶಾಲಾ ತೋಟಗಾರಿಕಾ ಶಿಕ್ಷಣ ಶಿಕ್ಷಕರಾದ ಸಿದ್ದಮಲ್ಲಪ್ಪರವರು ಮಾತನಾಡುತ್ತಾ, ನಮಗೆ ದೊರಕಿರುವ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗಬೇಕು. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆಂತರಿಕ ಸ್ವಾತಂತ್ರ್ಯವೂ ಅಗತ್ಯವಿದೆ ಎಂದು ಶಿಕ್ಷಕ ನಾಗರಾಜ್ ಕೋಟೆಕರ್‌ ಹೇಳಿದರು. ಕೊಣನೂರು ಹೋಬಳಿಯ ಸಿದ್ದಾಪುರ ಗೇಟ್ ಸರ್ಕಾರಿ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಕೊಣನೂರು ಹೋಬಳಿಯ ಸಿದ್ದಾಪುರ ಗೇಟ್ ಸರ್ಕಾರಿ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಿದ್ದಪುರ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಸ್ವಾಮಿ ಗೌಡರವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಪ್ರೌಢಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಾತಂತ್ರ ಹೋರಾಟಗಾರರ ಭಾವಚಿತ್ರ ಹಿಡಿದು ಚಳವಳಿಯ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡಲಾಯಿತು. ಸಭಾ ವೇದಿಕೆಯ ಸರ್ವರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.

ಶಾಲಾ ಸಮಾಜ ವಿಜ್ಞಾನ ಶಿಕ್ಷಕರಾದ ರಮೇಶ್ ಮಾತನಾಡುತ್ತಾ, ಸ್ವಾತಂತ್ರ್ಯಕ್ಕಾಗಿ ಮಡಿದ ಯೋಧರ ಬಗ್ಗೆ ಮತ್ತು ಸ್ವಾತಂತ್ರ್ಯ ಗಳಿಸಿದ ವಿವರವನ್ನು ತಿಳಿಸಿದರು. ಈ ಮಧ್ಯೆ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ದಿನದ ಮಹತ್ವ ಕುರಿತು ಮಾತನಾಡಿದರು ಮತ್ತು ಸ್ವಾತಂತ್ರ್ಯ ದಿನಕ್ಕೆ ಸಂಬಂಧಿಸಿದ ನೃತ್ಯ ಮತ್ತು ಹಾಡುಗಾರಿಕೆ ನಡೆಯಿತು.

ಶಾಲಾ ತೋಟಗಾರಿಕಾ ಶಿಕ್ಷಣ ಶಿಕ್ಷಕರಾದ ಸಿದ್ದಮಲ್ಲಪ್ಪರವರು ಮಾತನಾಡುತ್ತಾ, ನಮಗೆ ದೊರಕಿರುವ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿ ಸ್ವಾತಂತ್ರದ ಬಗ್ಗೆ ಸ್ವರಚಿತ ಹಾಡನ್ನು ಕೂಡ ಹಾಡಿದರು. ಕನ್ನಡ ಭಾಷಾ ಶಿಕ್ಷಕರಾದ ನಾಗರಾಜ್ ಕೋಟೆಕರ್‌ರವರು ಮಾತನಾಡುತ್ತಾ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆಂತರಿಕ ಸ್ವಾತಂತ್ರ್ಯವೂ ಅಗತ್ಯವಿದೆ ಎಂದರು.

ನಂತರ ಶಾಲೆಯಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮತ್ತು ಹಿಂದಿ ಭಾಷಾ ಅತಿಥಿ ಶಿಕ್ಷಕರನ್ನು ಹಾಗೂ ಇಲ್ಲಿಯ ತನಕ ಅಡುಗೆ ಮಾಡುತ್ತಿದ್ದ ಜಯಮ್ಮರವರನ್ನು ಹಾಗೂ ಶಾಲಾ ಆಯ ಆಗಿದ್ದ ಪಾರ್ವತಮ್ಮರವರನ್ನ ಮತ್ತು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟ ನಾಲ್ಕು ವಿದ್ಯಾರ್ಥಿ, ವಿದ್ಯಾರ್ಥಿನಿ ಯರನ್ನು ಶಾಲಾ ಪರವಾಗಿ ಸನ್ಮಾನಿಸಲಾಯಿತು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಘವೇಂದ್ರರವರು ಮಾತನಾಡುತ್ತಾ ಕರ್ನಾಟಕದಲ್ಲಿ ಕನ್ನಡ ಭಾಷಾ ಮೀಸಲಾತಿಯನ್ನು ಹೆಚ್ಚಿಸಿ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರಕುವ ನಿಟ್ಟಿನಲ್ಲಿ ಹೋರಾಡಲಾಗುತ್ತಿದೆ ಎಂದರು.

ತದನಂತರದಲ್ಲಿ ಶಾಲಾ ಹಿರಿಯ ಮುಖ್ಯ ಶಿಕ್ಷಕರಾದ ಲೋಕನಾಥ್‌ರವರು ಮಾತನಾಡಿ, ಸಮಾಜದ ಕೆಲವು ಸಮಸ್ಯೆಗಳಿಂದ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಅವೆಲ್ಲವುಗಳನ್ನು ಮೆಟ್ಟಿನಿಂತು ವಿದ್ಯಾವಂತರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಈ ಮೊದಲೇ ನಡೆಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸರ್ವರಿಗೂ ವಂದನೆಯನ್ನು ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು.