ಸಾರಾಂಶ
ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2ನೇ ವರ್ಷದ ಹಿಂದೂ ಮಹಾಗಣಪತಿ ಕಾರ್ಯಕ್ರಮವು ಸೆ.7ರಿಂದ 19ರ ವರೆಗೆ ನಡೆಯಲಿದೆ ಎಂದು ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ ರಾಘವೇಂದ್ರ ಹಂಚಿನಮನೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2ನೇ ವರ್ಷದ ಹಿಂದೂ ಮಹಾಗಣಪತಿ ಕಾರ್ಯಕ್ರಮವು ಸೆ.7ರಿಂದ 19ರ ವರೆಗೆ ನಡೆಯಲಿದೆ ಎಂದು ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ ರಾಘವೇಂದ್ರ ಹಂಚಿನಮನೆ ತಿಳಿಸಿದರು.ಪತ್ರಿಕಾ ಹೇಳಿಕೆ ನೀಡಿ, ಗಣೇಶ ಚತುರ್ಥಿ ದಿನ ಸೆ.7ರಂದು ಸಂಜೆ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದೊಂದಿಗೆ ಕುಂಬಸಾಲೂರು ರೇಖಾ ಸತೀಶ್ ಮತ್ತು ಕುಟುಂಬ ಹಾಗೂ ಹಿಂದೂ ಮಹಾಗಣಪತಿ ಸಮಿತಿ ಮತ್ತು ಭಕ್ತವೃಂದದವರಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಸೆ.7 ರಿಂದ 19ರವರೆಗೂ ಪ್ರತಿ ನಿತ್ಯ ವಿವಿಧ ಗ್ರಾಮ ಮತ್ತು ವಾರ್ಡ್ ಬಾಂಧವರಿಂದ ಪೂಜಾ ಸೇವೆ, ಪ್ರಸಾದ ವಿನಿಯೋಗ, ಭಜನಾ ಸೇವೆ, ಸಂಗೀತ ಸೇವೆ ಮತ್ತು ನೃತ್ಯ ಸೇವೆ ಏರ್ಪಡಿಸಲಾಗಿದೆ.
ವಿಶೇಷವಾಗಿ ಸೆ.11ರಂದು ಬೆಳಗ್ಗೆ ಗಣಹೋಮ, ಮಹಾಲಕ್ಷ್ಮೀ ಹೋಮ ನಡೆಯಲಿದೆ. 15ರಂದು ಆಟೋಟ ಸ್ಪರ್ಧೆ, 18ರಂದು ಸಂಜೆ 6ಕ್ಕೆ ಹುಲಿ ಕಾರ್ತಿಕ್ ಸಾರಥ್ಯದಲ್ಲಿ ಗಿಚ್ಚಿಗಿಲಿಗಿಲಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೂ ಮಹಾಗಣಪತಿ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ದಾನಿಗಳಿಗೆ ಗೌರವ ಸಮರ್ಪಣೆ ಹಮ್ಮಿಕೊಳ್ಳಲಾಗಿದೆ. 19ರಂದು ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಪ್ರವಚನ ಆಯೋಜಿಸಲಾಗಿದೆ. ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1ರ ನಂತರ ಹಿಂದೂ ಮಹಾಗಣಪತಿ ಭವ್ಯವಾಸ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ಉತ್ಸವ ನಡೆಸಿ ಭದ್ರಾಹಿನ್ನೀರಿನಲ್ಲಿ ಜಲಸ್ತಂಬನ ಮಾಡಲಾಗುವುದು. ಮೆರವಣಿಗೆಯಲ್ಲಿ ಚಂಡೆ, ಮಹಾರಾಷ್ಟ್ರದ ನಾಸಿಕ್ ಡೋಲ್, ಕರಾವಳಿಯ ಡಿಜೆ ತಂಡದವರಿಂದ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.