ಸಾರಾಂಶ
ಶ್ರೀಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರು ಹಣವನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯ ಸಂಸದರೂ ಆಗಿರುವ ಕೇಂದ್ರ ಸಚಿವರನ್ನು ಶ್ರೀಕ್ಷೇತ್ರಕ್ಕೆ ಕರೆಸಿ ಇಲ್ಲಿನ ಸಮಗ್ರ ಅಭಿವೃದ್ಧಿಗೆ ನೆರವಾಗುವ ಭರವಸೆಯನ್ನು ಶಾಸಕ ಎಚ್.ಟಿ.ಮಂಜು ನೀಡಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಬೆಟ್ಟದಹೊಸೂರು ಗ್ರಾಮದ ಸ್ಥಾಣಾದ್ರಿ ಬೆಟ್ಟದಲ್ಲಿರುವ ಉದ್ಭವ ಬೋಳಾರೆ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವವು ಕಡೇ ಶ್ರಾವಣ ಶನಿವಾರದಂದು ಭಕ್ತಿ ಮತ್ತು ಸಡಗರದಿಂದ ನಡೆಯಿತು.ದೇವಸ್ಥಾನದ ಅರ್ಚಕರಾದ ಸುಂದರ್ ಮತ್ತು ಮನೋಹರ್ ಅವರು ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಆನಂತರ ರಥದಲ್ಲಿ ವಿರಾಜಮಾನನಾದ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬೋಳಾರೆ ರಂಗನಾಥಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಬಿ.ಟಿ. ವೆಂಕಟೇಶ್, ಪದಾಧಿಕಾರಿಗಳಾದ ರಾಮಕೃಷ್ಣ, ರಂಗಸ್ವಾಮಿ, ಸುದರ್ಶನ್, ವೆಂಕಟರಮಣೇಗೌಡ, ತಹಸೀಲ್ದಾರ್ ಆದರ್ಶ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸಾವಿರಾರು ಭಕ್ತರು ಉಘೇ ರಂಗನಾಥ, ಉಘೇ- ಉಘೇ ಬೋಳಾರೆ ರಂಗನಾಥ ಎಂಬ ಜಯಘೋಷಗಳೊಂದಿಗೆ ರಥವನ್ನು ದೇವಸ್ಥಾನದ ಸುತ್ತ ಎಳೆದರು.ಈ ವೇಳೆ ಶಾಸಕ ಎಚ್.ಟಿ.ಮಂಜು ಮಾತನಾಡಿ, ಬೋಳಾರೆ ರಂಗನಾಥಸ್ವಾಮಿ ಅವರ ಸನ್ನಿಧಿಯಲ್ಲಿರುವ ಈ ಕ್ಷೇತ್ರಕ್ಕೆ ವಿಶೇಷ ಮಹತ್ವವಿದೆ. ಪ್ರತಿ ಶ್ರಾವಣ ಮಾಸದ ನಾಲ್ಕು ಶನಿವಾರಗಳಂದು ವಿಶೇಷ ಪೂಜೆ ನಡೆದು ಕಡೇ ಶನಿವಾರ ಬ್ರಹ್ಮರಥೋತ್ಸವ ನಡೆಸಲಾಗುತ್ತಿದೆ ಎಂದರು.
ಶ್ರೀಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರು ಹಣವನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯ ಸಂಸದರೂ ಆಗಿರುವ ಕೇಂದ್ರ ಸಚಿವರನ್ನು ಶ್ರೀಕ್ಷೇತ್ರಕ್ಕೆ ಕರೆಸಿ ಇಲ್ಲಿನ ಸಮಗ್ರ ಅಭಿವೃದ್ಧಿಗೆ ನೆರವಾಗುವ ಭರವಸೆ ನೀಡಿದರು.ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಅನ್ಯ ಕಾರ್ಯ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಆಗಮಿಸಿಲ್ಲ. ಶ್ರೀಕ್ಷೇತ್ರದ ಅಭಿವೃದ್ಧಿಗೆ ಅವಶ್ಯಕ ಅನುದಾನ ಮತ್ತು ಕೊಡುಗೆಯನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಬೂಕನಕರೆ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಜಿಪಂ ಮಾಜಿ ಸದಸ್ಯೆ ಸರ್ವಮಂಗಳ ವೆಂಕಟೇಶ್, ಬಿ.ಪುಟ್ಟಸ್ವಾಮಿ, ಕುರುಬಹಳ್ಳಿ ನಾಗೇಶ್, ತಾಪಂ ಮಾಜಿ ಸದಸ್ಯ ಹೆಳವೇಗೌಡ, ಬೆಟ್ಟೇಗೌಡ, ಪ್ರಕಾಶ್, ವೆಂಕಟರಾಮೇಗೌಡ, ಎಂ.ಆರ್.ಸುದರ್ಶನ್, ವಕೀಲ ಚಟ್ಟಂಗೆರೆ ನಾಗೇಶ್, ಡಾ.ರಂಗಸ್ವಾಮಿ, ರಾಮಕೃಷ್ಣಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.