ಮೇ 1 ರಿಂದ 16 ರವರೆಗೆ ನಮ್ಮ ನಡೆ ಸರ್ವೋದಯದೆಡೆಗೆ ಜನಜಾಗೃತಿ ಆಂದೋಲನ ನಡೆಯಲಿದೆ. ಚನ್ನಗಿರಿ ತಾಲೂಕು ಪಾಂಡೋಮಟ್ಟಿಯ ವಿರಕ್ತ ಮಠದಲ್ಲಿ ಮಂಗಳವಾರ ನಡೆದ ಜನಜಾಗೃತಿ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

- ಚನ್ನಗಿರಿ ತಾಲೂಕು ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಮಠಾಧೀಶರ ತೀರ್ಮಾನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮೇ 1 ರಿಂದ 16 ರವರೆಗೆ ನಮ್ಮ ನಡೆ ಸರ್ವೋದಯದೆಡೆಗೆ ಜನಜಾಗೃತಿ ಆಂದೋಲನ ನಡೆಯಲಿದೆ. ಚನ್ನಗಿರಿ ತಾಲೂಕು ಪಾಂಡೋಮಟ್ಟಿಯ ವಿರಕ್ತ ಮಠದಲ್ಲಿ ಮಂಗಳವಾರ ನಡೆದ ಜನಜಾಗೃತಿ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

ಈ ಆಂದೋಲನವು ಮೇ 1ರಂದು ಬೆಳಗಾವಿಯಿಂದ ಪ್ರಾರಂಭವಾಗಿ 16ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಮುಕ್ತಾಯಗೊಳ್ಳುವುದು. ಆದ್ದರಿಂದ ಕರ್ನಾಟಕದ 31 ಜಿಲ್ಲೆಗಳ ಜನರಲ್ಲಿ “ಅರಿವು ಆಧಾರಿತ ಸಾಮೂಹಿಕ ಚಿಂತನೆ ಮತ್ತು ಕಾರ್ಯಾಚರಣೆ” ಮೂಲಕ ಸಮಾಜದ ಪರಿವರ್ತನೆ ಮಾಡಲು ಮುಂದಾಗಬೇಕಾಗಿದೆ.

ಆಂದೋಲನದಲ್ಲಿ ‘ಸರ್ವೋದಯ ಸಮುದಾಯ ಕರ್ನಾಟಕ’ ಸಂಸ್ಥೆ ಪದಾಧಿಕಾರಿಗಳು, ಚಿಂತಕರು, ಪ್ರಗತಿಪರ ಕೃಷಿಕರು, ವೈದ್ಯರು, ಶಿಕ್ಷಣ ಪ್ರೇಮಿಗಳು, ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವವರು, ಯುವಜನತೆ ಮತ್ತು ಸ್ವಾಮಿಗಳು ಭಾಗವಹಿಸಲಿದ್ದಾರೆ. ಪ್ರತಿದಿನ 2 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಸರ್ವೋದಯದ ಈ ಐದು ಕ್ಷೇತ್ರಗಳ ಪರಿವರ್ತನೆ ನೈತಿಕತೆಯಿಂದ ಆಗಬೇಕೆಂದು ಒಕ್ಕೊರಲಿನ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಸಾಣೆಹಳ್ಳಿ ಡಾ.ಪಂಡಿತಾರಾಧ್ಯ ಶ್ರೀ, ಪಾಂಡೋಮಟ್ಟಿಯ ಡಾ.ಗುರುಬಸವ ಶ್ರೀ, ಅರಸಿಕೆರೆಯ ರುದ್ರಮುನಿ ಶ್ರೀ, ಹೊಳಲ್ಕೆರೆ ಒಂಟಿಕಂಬ ಮಠದ ಶ್ರೀ ತಿಪ್ಪೇರುದ್ರಸ್ವಾಮಿ, ತುಮಕೂರು ಗವಿಮಠದ ಚಂದ್ರಶೇಖರ ಸ್ವಾಮಿಗಳು, ಚಿಕ್ಕಮಗಳೂರಿನ ಬಸವನಾಂದ ಸ್ವಾಮಿಗಳು, ಚನ್ನಗಿರಿಯ ಕೇದಾರಲಿಂಗ ಶಿವಾಚಾರ್ಯ ಸ್ವಾಮಿಗಳು ಮಾರ್ಗದರ್ಶನದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಮಹಿಮಾ ಜೆ. ಪಟೇಲ್, ಶಿವನಕೆರೆ ಬಸವಲಿಂಗಪ್ಪ, ಎಸ್.ಎಲ್.ಪಾಟೀಲ್, ರವಿಕೃಷ್ಣ ರೆಡ್ಡಿ ಬೆಂಗಳೂರು, ಜಗದೀಶ್ ವಡ್ನಾಳ್, ಚನ್ನಗಿರಿ, ಕೆ.ಎಸ್.ಈಶ್ವರಪ್ಪ, ಜಗನ್ನಾಥ್ ಇತರರ ಒಕ್ಕೊರಲಿನಿಂದ ಸರ್ವೋದಯದ ಐದು ಕ್ಷೇತ್ರಗಳ ಪರಿವರ್ತನೆಗೆ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಬಸವಾದಿ ಶರಣರ ಕಲ್ಯಾಣ ರಾಜ್ಯದ ಉದ್ದೇಶ “ಸರ್ವೋದಯ’ವನ್ನು ನೆಲೆಗೊಳಿಸುವುದು. ಬದುಕಿನ ಆಸ್ತಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ. ಈ ಆಸ್ತಿಯನ್ನು ನೈತಿಕವಾಗಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಆನಂದಮಯ ಸರ್ವೋದಯ ತತ್ವಗಳನ್ನು ಬದುಕಿನಲ್ಲಿ ಜಾರಿಯಲ್ಲಿ ತರುವ ಮೂಲಕ ನಮ್ಮ ಗ್ರಾಮಗಳನ್ನು ಸರ್ವೋದಯ, ಸುಸ್ಥಿರ, ಗ್ರಾಮಗಳನ್ನಾಗಿಸಬೇಕು. ತಾಲೂಕು, ಜಿಲ್ಲೆ, ರಾಜ್ಯ, ದೇಶವನ್ನು ಉಳಿಸಿಕೊಂಡು ಈ ಮಣ್ಣಿನ ಋಣ ತೀರಿಸಬೇಕು ಎಂಬುದು ಆಂದೋಲನದ ಉದ್ದೇಶವಾಗಿದೆ ಎಂದು ತಿಳಿಸಲಾಗಿದೆ.

- - -

-11ಕೆಡಿವಿಜಿ32:

ಚನ್ನಗಿರಿ ತಾಲೂಕು ಪಾಂಡೋಮಟ್ಟಿಯಲ್ಲಿ ವಿವಿಧ ಮಠಾಧೀಶರ ಸಮ್ಮುಖ ಜನಜಾಗೃತಿ ಆಂದೋಲನ ಪೂರ್ವಭಾವಿ ಸಭೆ ನಡೆಯಿತು.