ಚನ್ನಪಟ್ಟಣ: ಹೊಂಗನೂರಿನ ಕೆಪಿಎಸ್ ಶಾಲೆ ಹೆಸರಿನಲ್ಲಿ ಅಕ್ಕಪಕ್ಕದ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಆಗ್ರಹಿಸಿ ಎಐಡಿಎಸ್‌ಒ ಹಾಗೂ ಎಸ್‌ಡಿಎಂಸಿಯಿಂದ ನಗರದ ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು

ಚನ್ನಪಟ್ಟಣ: ಹೊಂಗನೂರಿನ ಕೆಪಿಎಸ್ ಶಾಲೆ ಹೆಸರಿನಲ್ಲಿ ಅಕ್ಕಪಕ್ಕದ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಆಗ್ರಹಿಸಿ ಎಐಡಿಎಸ್‌ಒ ಹಾಗೂ ಎಸ್‌ಡಿಎಂಸಿಯಿಂದ ನಗರದ ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರ ಬಿಇಒ ಕಚೇರಿ ಮುಂದೆ ಜಮಾಯಿಸಿದ ಎಐಡಿಎಸ್‌ಒ ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಹೊಂಗನೂರಿನ ಕೆಪಿಎಸ್ ಶಾಲೆ ಹೆಸರಿನಲ್ಲಿ ಸುತ್ತಮುತ್ತಲ ೭ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಸಿದರು.

ಸರ್ಕಾರ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳುತ್ತಲೇ ಇದೆ. ಆದರೆ ಹೊಂಗನೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ತಾಲೂಕಿನ ಹೊಡಿಕೆ ಹೊಸಹಳ್ಳಿ, ಕನ್ನೀದೊಡ್ಡಿ, ಅಮ್ಮಳ್ಳಿದೊಡ್ಡಿ, ಸಂತೆಮೊಗೇನ ಹಳ್ಳಿ, ಸುಣ್ಣ ಘಟ್ಟ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ. ಈ ಕುರಿತು ರಾಜ್ಯ ಬಜೆಟ್ ಮರುದಿನವೇ ನೋಟಿಸ್ ಜಾರಿ ಮಾಡಲಾಗಿದೆ. ಈ ಶಾಲೆಗಳ ವಿದ್ಯಾರ್ಥಿಗಳನ್ನು ಹೊಂಗನೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಕಳಿಸುವಂತೆ ಶಿಕ್ಷಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇಲ್ಲದಿದ್ದಲ್ಲಿ ಯಾವುದೇ ಮಾಹಿತಿ ನೀಡದೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಜಾರಿ ಮಾಡಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಈ ನಿರ್ಧಾರದ ಹಿಂದೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವಿದೆ. ಈ ಶಾಲೆಗಳನ್ನು ಮುಚ್ಚಿದಲ್ಲಿ ಅದರಿಂದ ಅಲ್ಲಿನ ವಿದ್ಯಾರ್ಥಿಗಳು ಓಡಾಡಲು ಅನಾನುಕೂಲವಾಗಲಿದೆ. ರಾಜ್ಯ ಸರ್ಕಾರ ಅಪ್ರಜಾತಾಂತ್ರಿಕ ಮತ್ತು ಧಮನಕಾರಿ ನೀತಿಯನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಇದೇ ಮಾ. ೭ರಂದು ಜಾರಿ ಮಾಡಿರುವ ನೋಟಿಸ್ ಅನ್ನು ಕೂಡಲೇ ಹಿಂಪಡೆಯಬೇಕು ಮತ್ತು ಯಾವ ಕಾರಣಕ್ಕೂ ಐದೂ ಹಳ್ಳಿಯ ಶಾಲೆಗಳನ್ನು ಮುಚ್ಚಬಾರದು. ಶಾಲೆಗಳ ಮುಚ್ಚಿದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಐಡಿಎಸ್‌ಒ ರಾಜ್ಯಾಧ್ಯಕ್ಷರಾದ ಅಶ್ವಿನಿ ಕೆ.ಎಸ್, ಉಪಾಧ್ಯಕ್ಷರಾದ ಅಪೂರ್ವ, ಎಸ್‌ಡಿಎಂಸಿ ರಾಜ್ಯಾಧ್ಯಕ್ಷ ಉಮೇಶ್, ಉಪಾಧ್ಯಕ್ಷ ಶಂಭು ಗೌಡ, ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿಯ ಅಧ್ಯಕ್ಷರು ಮಂಜುನಾಥ್ ಸೇರಿದಂತೆ ೫ ಗ್ರಾಮಸ್ಥರು ಹಾಜರಿದ್ದರು.

ಪೊಟೋ೧೧ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಕೆಪಿಎಸ್ ಶಾಲೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಆಗ್ರಹಿಸಿ ಎಐಡಿಎಸ್‌ಒ ಹಾಗೂ ಎಸ್‌ಡಿಎಂಸಿಯಿಂದ ಕ್ಷೇತ್ರ ಶಿಕ್ಷಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.