ಶಿವಕುಮಾರ ಕುಷ್ಟಗಿ

ಗದಗ​: ಈ ಬಾರಿಯ ಬಜೆಟ್‌ ಜಿಲ್ಲೆಯ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಜಿಲ್ಲೆಗೆ ಹೊಸ ಯೋಜನೆಗಳನ್ನು ತರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ಮತ್ತೊಮ್ಮೆ ಹುಸಿಯಾಗಿದೆ.

ತಜ್ಞರ ವರದಿಯಂತೆ ಡಂಬಳದಲ್ಲಿ ನೂತನ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಮೊದಲ ಹಂತದ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇದು ಜಿಲ್ಲೆಯ ಕೃಷಿ ಸಂಶೋಧನೆಗೆ ಬಲ ನೀಡಲಿದೆ. ಹಿಂದುಳಿದ ವರ್ಗಗಳ ಇಲಾಖೆಯಡಿ ಒಂದು ಹೊಸ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಇದರೊಂದಿಗೆ ಎರಡು ಎಂಜಿನಿಯರಿಂಗ್ ವಸತಿನಿಲಯಗಳ ಆರಂಭಕ್ಕೆ ಅನುಮೋದನೆ ದೊರೆತಿದೆ.

ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಸುಲಭವಾಗಲಿದೆ. ಜಿಲ್ಲೆಗೊಂದು ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ ಘೋಷಣೆಯಾಗಿದ್ದು, ಅದರ ಭಾಗವಾಗಿ ಗದುಗಿನಲ್ಲಿಯೂ ಪ್ರಾರಂಭವಾಗಲಿದ್ದು, ಇದರಿಂದಾಗಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಭೂಸ್ವಾಧೀನಕ್ಕೆ ಸಂಪೂರ್ಣ ವೆಚ್ಚ: ಬಹುನಿರೀಕ್ಷಿತ ರೈಲ್ವೆ ಮಾರ್ಗದ ಭೂಸ್ವಾಧೀನದ ಸಂಪೂರ್ಣ ವೆಚ್ಚ ಹಾಗೂ ಶೇ. 50ರಷ್ಟು ನಿರ್ಮಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವುದಾಗಿ ಘೋಷಿಸಿರುವುದು ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಪ್ರಗತಿಗೆ ವೇಗ ನೀಡಲಿದೆ. ಗದಗ ನಗರಕ್ಕೆ ಸುಸಜ್ಜಿತ ಹೊಸ ಬಸ್ ನಿಲ್ದಾಣದ ಭಾಗ್ಯ ಕೂಡಾ ಸಿಕ್ಕಿದೆ.


ಪ್ರವಾಸಿಗರ ಆಕರ್ಷಣೆ: ಗದಗ- ಕಪ್ಪತಗುಡ್ಡ- ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಇದರಿಂದ ಐತಿಹಾಸಿಕ ಲಕ್ಕುಂಡಿ ಮತ್ತು ಜೀವವೈವಿಧ್ಯದ ತಾಣವಾದ ಕಪ್ಪತಗುಡ್ಡಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಯೋಜನೆಗೆ ಯಾವುದೇ ಅನುದಾನದ ಬಗ್ಗೆ ತಿಳಿಸಿಲ್ಲ.

2026- 27ನೇ ಸಾಲಿನೊಳಗೆ ಶಿರಹಟ್ಟಿ ಭಾಗದ ಕೆರೆಗಳನ್ನು ತುಂಬಿಸುವ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹಾಗೂ ರೋಣ ತಾಲೂಕಿನ ಕೆರೆ ತುಂಬಿಸುವ ಯೋಜನೆ ಹಾಗೂ ಮಲಪ್ರಭಾ ಯೋಜನೆಯಡಿ ಕಾಲುವೆಗಳ ಆಧುನೀಕರಣಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಬಜೆಟ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ​

ಎರಡು ವಸತಿ ಶಾಲೆ: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಜಿಲ್ಲೆಗೆ ಎರಡು ಶ್ರಮಿಕ ವಸತಿಶಾಲೆಗಳು ದೊರೆತಿದ್ದು, ​ಮೊದಲ ಹಂತದಲ್ಲಿ ರೋಣ ತಾಲೂಕಿನಲ್ಲಿ ಮತ್ತು ಎರಡನೇ ಹಂತದಲ್ಲಿ ಗದಗ ನಗರದಲ್ಲಿ ಈ ಶಾಲೆಗಳು ಆರಂಭವಾಗಲಿವೆ. ಇದು ಬಡ ಕಾರ್ಮಿಕ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ.ಆದ್ಯತೆ ಸಿಕ್ಕಿಲ್ಲ: ​ಈ ಬಜೆಟ್‌ನಲ್ಲಿ ಜಿಲ್ಲೆಗೆ ಕೇವಲ ಭರವಸೆಗಳೇ ಹೆಚ್ಚಾಗಿ ದೊರೆತಿವೆ. ಅನುಮೋದಿತ ಕಾಮಗಾರಿಗಳ ಅನುಷ್ಠಾನಕ್ಕೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿರುವುದು ಸ್ವಾಗತಾರ್ಹ. ಆದರೆ, ಗದಗ ಮತ್ತು ರೋಣ ತಾಲೂಕುಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಇದು ಸಹಜ ಕೂಡಾ, ಜಿಲ್ಲೆಯ ಇನ್ನುಳಿದ ನರಗುಂದ ಮತ್ತು ಶಿರಹಟ್ಟಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಪ್ರಾಧಾನ್ಯ ನೀಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಕಳೆದ ಬಜೆಟ್‌ನಲ್ಲೂ ಅನ್ಯಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಕ್ಕಪಕ್ಕದ ಜಿಲ್ಲೆಗಳಾದ ಬಾಗಲಕೋಟೆ, ಕೊಪ್ಪಳ, ಧಾರವಾಡ, ವಿಜಯನಗರ ಜಿಲ್ಲೆಗಳಿಗೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ. ಒಂದಿಲ್ಲೊಂದು ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಆದರೆ, ಅದ್ಯಾವ ಕಾರಣಕ್ಕೊ ಗೊತ್ತಿಲ್ಲ, ಗದಗ ಜಿಲ್ಲೆಗೆ ಒಂದೇ ಒಂದು ಹೊಸ ಯೋಜನೆಯನ್ನೂ ಘೋಷಿಸಿಲ್ಲ. ಕಳೆದ ಸಾಲಿನ ಬಜೆಟ್‌ನಲ್ಲಿಯೂ ಗದಗ ಜಿಲ್ಲೆಗೆ ಇದೇ ರೀತಿಯ ಅನ್ಯಾಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.