ಸತ್ಯ, ಅಹಿಂಸಾ ಮಾರ್ಗ ಪ್ರತಿಪಾದಿಸಿದ ಮಹಾನ್ ಚೇತನ ಗಾಂಧೀಜಿ: ಆರ್.ಐಶ್ವರ್ಯ

| Published : Oct 03 2025, 01:07 AM IST

ಸತ್ಯ, ಅಹಿಂಸಾ ಮಾರ್ಗ ಪ್ರತಿಪಾದಿಸಿದ ಮಹಾನ್ ಚೇತನ ಗಾಂಧೀಜಿ: ಆರ್.ಐಶ್ವರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀಜಿಯವರು ಸತ್ಯ ಅಹಿಂಸೆಯ ಮೂಲಕ ಇಡೀ ವಿಶ್ವಕ್ಕೆ ಬೆಳಕು ತೋರಿಸಿದ ಮಹಾನ್‌ ಚೇತನ ಎಂದು ಆರ್‌. ಐಶ್ವರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ ಹಾಗೂ ಅಹಿಂಸೆಯ ಮೂಲಕ ಇಡೀ ವಿಶ್ವಕ್ಕೆ ಬೆಳಕು ತೋರಿಸಿದ ಮಹಾನ್ ಚೇತನ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಪ್ರತಿಪಾದಿಸಿದ್ದಾರೆ.

ಜಿಲ್ಲಾಡಳಿತ, ಜಿ.ಪಂ. ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ, ನಗರಸಭೆ, ಕನ್ನಡ ಸಾಹಿತ್ಯ ಪರಿಷತ್ತು, ಸರ್ವೋದಯ ಸಮಿತಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜಾನಪದ ಪರಿಷತ್ತು ಇವರ ಸಹಕಾರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 156 ನೇ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 121 ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮವು ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸತ್ಯ ಹಾಗೂ ಅಹಿಂಸೆ ಎಂಬ ಅಸ್ತ್ರಗಳಿಂದ ಬ್ರಿಟೀಷರ ವಿರುದ್ದ ಹೋರಾಡಿದ ಮಹಾತ್ಮ ಗಾಂಧೀಜಿ, ಈ ಎರಡೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಇವರ ಹಾದಿಯಲ್ಲೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ನಡೆದರು. ನೈತಿಕತೆಗೆ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರು ಮಾದರಿಯಾಗಿದ್ದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ನುಡಿದರು.

ಭಗವಾನ್ ಬುದ್ದ ಅವರು ಇಡೀ ಮನುಕುಲಕ್ಕೆ ಸತ್ಯ ಹೇಳಿದರು, ಅದೇ ರೀತಿ ಗಾಂಧೀಜಿ ಅವರು ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದರು ಎಂದರು.

ಜಗತ್ತಿಗೆ ಅನುಕರಣೀಯ:

ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಇರುವುದನ್ನು ಕಾಣುತ್ತೇವೆ. ಗಾಂಧೀಜಿ ಅವರ ಸಂದೇಶಗಳು ಇಡೀ ಜಗತ್ತಿಗೆ ಅನುಕರಣೀಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು.

ವಿವಿಧೆತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿಕೊಂಡು ಹೋಗಬೇಕು. ಗಾಂಧೀಜಿ ಅವರು ಕರ್ಮ ಸಿದ್ಧಾಂತ ನಂಬಿ ಬದುಕಿದವರು. ಇವರೊಬ್ವ ಮನ್ವಂತರ ಯುಗ ಪುರುಷ, ಆ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವ ಮತ್ತು ಸಂದೇಶಗಳನ್ನು ರೂಢಿಸಿಕೊಳ್ಳಬೇಕು ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ರಾಷ್ಟ್ರದ ಬಗ್ಗೆ ಇದ್ದ ಗೌರವ ಮತ್ತು ಭಕ್ತಿ ಮಾದರಿ ಎಂದು ಆರ್.ಐಶ್ವರ್ಯ ಅವರು ತಿಳಿಸಿದರು.

ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಕೆ.ಸಿ.ದಯಾನಂದ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸೆಯನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ ಎಂದರು.

ಮಹಾತ್ಮ ಗಾಂಧೀಜಿ ಅವರ ಭವ್ಯ ಭಾರತ ನಿರ್ಮಾಣಕ್ಕೆ ಹಲವು ಚಳವಳಿಯಲ್ಲಿ ಪಾಲ್ಗೊಂಡು ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಹಾಗೆಯೇ ಯಂಗ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದರು.

ತತ್ವ ರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ಆತ್ಮ‌ಸಾಕ್ಷಿ ಇಲ್ಲದ ಕಾರ್ಯಗಳು, ತ್ಯಾಗ ಇಲ್ಲದ ಪೂಜೆ ಈ ಸಪ್ತ ಸೂತ್ರಗಳು ರಾಷ್ಟ್ರದ ದುಸ್ಥಿಗೆ ಕಾರಣ ಆಗಿದೆ ಎಂದು ಕೆ.ಸಿ.ದಯಾನಂದ ಅವರು ಹೇಳಿದರು.

ರಾಮರಾಜ್ಯ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಗಾಂಧೀಜಿ ಅವರು ಕಂಡಿದ್ದರು. ಸರ್ವೋದಯ ಹಾಗೂ ವಿಕೇಂದ್ರೀಕರಣಕ್ಕೆ ಒತ್ತು ನೀಡಿದ್ದರು. ಖಾದಿ ಗ್ರಾಮೋದ್ಯೋಗ ಹಾಗೂ ಮಹಿಳಾ ಸಬಲೀಕರಣ ಪ್ರತಿಪಾದಿಸಿದ್ದರು ಎಂದರು.

ಮಹಾನ್ ಚೇತನ:

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅತ್ಯಂತ ಪಾರದರ್ಶಕ ವ್ಯಕ್ತಿತ್ವ ಹೊಂದಿದ್ದ ಮಹಾನ್ ಚೇತನ ಎಂದರು.

ಜೈ ಜವಾನ್, ಜೈ ಕಿಸಾನ್ ಸಂದೇಶ ಸಾರಿದ್ದರು ಎಂದು ನುಡಿದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಂದೇಶ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಧಾನ ಆಯುಕ್ತರಾದ ಬೇಬಿ ಮ್ಯಾಥ್ಯು ಅವರು ಮಾತನಾಡಿ ಗಾಂಧಿ ಸ್ಮಾರಕ ಉದ್ಯಾನವನ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಯೊಬ್ಬರಿಗೂ ದಾರಿದೀಪ:

ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಂದೇಶಗಳು ಪ್ರತಿಯೊಬ್ಬರಿಗೂ ದಾರಿದೀಪ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಕೇಶವ ಕಾಮತ್ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರದ ಹೆಮ್ಮೆ ಎಂದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಪೌರಾಯುಕ್ತರಾದ ರಮೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚಿದಾನಂದ, ಸರ್ವೋದಯ ಸಮಿತಿ ಸದಸ್ಯರಾದ ಮುದ್ದಯ್ಯ, ಪ್ರೇಮ, ಸಿದ್ದರಾಜು ಬೆಳ್ಳಯ್ಯ, ಪಾರ್ವತಿ, ಶಾಲಾ ಶಿಕ್ಷಣ ಇಲಾಖೆ ಡಿವೈಪಿಸಿ ಕೃಷ್ಣಪ್ಪ ಇತರರು ಇದ್ದರು.

ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ/ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಮಹಾತ್ಮ‌ ಗಾಂಧೀಜಿ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.

ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು. ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ನಿರೂಪಿಸಿದರು, ಪ್ರೇಮ ರಾಘವಯ್ಯ, ರೇವತಿ ರಮೇಶ್ ಹಾಗೂ ಸುಶೀಲಾ ಅವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ವಂದಿಸಿದರು.