ಗಣೇಶ, ಈದ್ ಮಿಲಾದ್: 400 ಡ್ರಗ್ ಪೆಡ್ಲರ್‌ಗಳ ಪರೇಡ್

| Published : Aug 26 2025, 01:04 AM IST

ಗಣೇಶ, ಈದ್ ಮಿಲಾದ್: 400 ಡ್ರಗ್ ಪೆಡ್ಲರ್‌ಗಳ ಪರೇಡ್
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಬಗಳ ಹಿನ್ನೆಲೆಯಲ್ಲಿ ಡ್ರಗ್‌ ಪೆಡ್ಲರ್‌ಗಳ ಮೇಲೆ 80ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ 250ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದು ಅವರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದೇವೆ. ಈ ವರ್ಷ ಗಡಿಪಾರು ಮಾಡಿದ 105 ಜನರಲ್ಲಿ 19 ಡ್ರಗ್‌ ಪೆಡ್ಲರ್‌ ಇದ್ದಾರೆ.

ಹುಬ್ಬಳ್ಳಿ: ಗಣೇಶೋತ್ಸವ ಮತ್ತು ಈದ್‌ ಮಿಲಾದ್‌ ಹಬ್ಬಗಳ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ನಗರದ ಹಳೆಯ ಸಿಎಆರ್ ಮೈದಾನದಲ್ಲಿ ಪೊಲೀಸರು ಡ್ರಗ್‌ ಪೆಡ್ಲರ್‌ ಮತ್ತು ಸೇವಿಸುವವರ ಪರೇಡ್‌ ನಡೆಸಿದರು.

ಸುಮಾರು 400 ಜನರಿಗೆ ಹಬ್ಬದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಲ್ಲಿ ತೊಡಗದಂತೆ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ಅವರು ಖಡಕ್‌ ವಾರ್ನಿಂಗ್‌ ನೀಡಿದರು.

ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹಬ್ಬಗಳ ಹಿನ್ನೆಲೆಯಲ್ಲಿ ಡ್ರಗ್‌ ಪೆಡ್ಲರ್‌ಗಳ ಮೇಲೆ 80ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ 250ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದು ಅವರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದೇವೆ. ಈ ವರ್ಷ ಗಡಿಪಾರು ಮಾಡಿದ 105 ಜನರಲ್ಲಿ 19 ಡ್ರಗ್‌ ಪೆಡ್ಲರ್‌ ಇದ್ದಾರೆ. ಗಣೇಶೋತ್ಸವ ಮತ್ತು ಈದ್ ಮಿಲಾದ್ ಮೆರವಣಿಗೆಯಲ್ಲಿ ಡ್ರಗ್‌ ಪೆಡ್ಲರ್‌ಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ 400 ಜನರ ಪರೇಡ್‌ ಮಾಡಲಾಗುತ್ತಿದೆ ಎಂದರು.

ನಗರದಲ್ಲಿ 800ಕ್ಕೂ ಹೆಚ್ಚು ಜನ ಡ್ರಗ್‌ ಸೇವಿಸುವವರಿದ್ದು, ತಪಾಸಣೆ ವೇಳೆ ಇವರೆಲ್ಲರಿಗೂ ಪಾಸಿಟಿವ್‌ ಬಂದಿದೆ. ಸೋಮವಾರ 400 ಜನರ ಪರೇಡ್ ಮಾಡಿದ್ದು, ಇನ್ನೂ ಕೆಲವರು ಮಾಹಿತಿ ತಿಳಿದು ಪರಾರಿಯಾಗಿದ್ದಾರೆ. ಅಂತಹವರ ಮನೆಗೆ ತೆರಳಿ ಅವರಿಗೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು.

ಹಬ್ಬದ ಸಂದರ್ಭದಲ್ಲಿ ಶಾಂತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರು, ಆಯೋಜಕರು ಸೇರಿ ಹಲವರನ್ನು ಭೇಟಿ ಮಾಡಲಾಗಿದೆ. ಮರವಣಿಗೆ ಸಾಗುವ ಮಾರ್ಗ, ವಿದ್ಯುತ್ ವ್ಯವಸ್ಥೆ ಮತ್ತು ಮಹಿಳೆಯರಿಗೆ ಸೇಫ್ಟಿ ಐಲ್ಯಾಂಡ್‌ಗೆ ಪಾಲಿಕೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.