ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಇಲ್ಲಿನ ಈದ್ಗಾ (ರಾಣಿ ಚನ್ನಮ್ಮ) ಮೈದಾನಕ್ಕೆ ಈ ಬಾರಿ ಬಾಲಕೃಷ್ಣನ ಪಾದಾರ್ಪಣೆ.ಈ ಬಾರಿ ಗಣೇಶ ಚತುರ್ಥಿ ಅಂಗವಾಗಿ ಇಲ್ಲಿನ ಈದ್ಗಾ ಮೈದಾನದಲ್ಲಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ ಯಶಸ್ವಿ 4ನೇ ಬಾರಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಬಾರಿ ಆ. 27ರಂದು ಬಾಲಕೃಷ್ಣ ರೂಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.
3 ವರ್ಷದ ಹಿಂದೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕುರಿತು ಹೋರಾಟ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಲವು ಹೋರಾಟ, ಶಾಸಕರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿ ಹಬ್ಬಕ್ಕೆ ಒಂದೇ ದಿನ ಬಾಕಿಯಿದ್ದ ವೇಳೆಗೆ ಅನುಮತಿ ಪಡೆದುಕೊಳ್ಳಲಾಗಿತ್ತು. ಈ ಬಾರಿ ಪಾಲಿಕೆ ಆಯುಕ್ತರು 4 ದಿನ ಮೊದಲೇ ಈದ್ಗಾ ಮೈದಾನದಲ್ಲಿ ಷರತ್ತುಬದ್ಧ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವುದು ಪ್ರತಿಷ್ಠಾಪನಾ ಮಂಡಳಿಯವರಲ್ಲಿ ಸಂತಸ ತಂದಿದೆ.ಬಾಲಕೃಷ್ಣ ರೂಪಿ ಗಣಪ: ಈ ಬಾರಿ ಪ್ರತಿಷ್ಠಾಪನಾ ಮಂಡಳಿಯು 7 ಅಡಿ ಎತ್ತರದ ಬಾಲಕೃಷ್ಣ ರೂಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಎಪಿಎಂಸಿಯಲ್ಲಿರುವ ಮೂರ್ತಿ ತಯಾರಕ ಪ್ರಶಾಂತ ಪತ್ತಾರ ಎಂಬುವರ ಕೈಚಳಕದಲ್ಲಿ ಈಗಾಗಲೇ ಮೂರ್ತಿ ಸಿದ್ಧಗೊಂಡಿದೆ. ಕಳೆದ ವರ್ಷ 5.5 ಅಡಿ ಎತ್ತರದ ಶ್ರೀರಾಮನ ಅವತಾರದಲ್ಲಿರುವ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.
29ರಂದು ನಡೆಯುವ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆ ಕೈಬಿಟ್ಟು ಕುಂಭ, ಜಗ್ಗಲಗಿ, ನಾಸಿಕ್ ಡೋಲ್, ಡೋಲ್ ತಾಷ, ಗಂಗಾವತಿಯ ತಮಟೆ, ಲೇಜಿಮ್, ಡೊಳ್ಳು, ಚಂಡೆ ವಾದ್ಯ, ಬೊಂಬೆ ಕುಣಿತ, ಕೋಲಾಟ, ಕಥಕಳಿ ಬೊಂಬೆ, ಕಂಸಾಳೆ, ವಾರ್ಕರಿ ಸೇರಿದಂತೆ 25ಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳ 300ಕ್ಕೂ ಹೆಚ್ಚು ಕಲಾವಿದರು ವಿವಿಧ ವಾದ್ಯ, ಮೇಳಗಳು ಈ ಬಾರಿ ಗಣೇಶೋತ್ಸವದ ಮೆರುಗು ಹೆಚ್ಚಿಸಲಿವೆ.ಮೂರು ವರ್ಷಗಳಿಂದ ರಾಣಿ ಚನ್ನಮ್ಮ ಮೈದಾನದಲ್ಲಿ ಯಶಸ್ವಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. 4ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಲಾಗುತ್ತಿದೆ. ಈ ಬಾರಿ ವಿಸರ್ಜನಾ ಮೆರವಣಿಗೆಯಲ್ಲಿ ದೇಸಿ ಕಲಾವಿದರಿಗೆ ಆದ್ಯತೆ ನೀಡಿದ್ದು ಮೆರವಣಿಗೆಗೆ ಹೆಚ್ಚಿನ ಮೆರುಗು ತರಲಿದೆ ಎಂದು ಗಜಾನನ ಉತ್ಸವ ಮಂಡಳಿ ಅಧ್ಯಕ್ಷ ಸಂಜೀವ ಬಡಸ್ಕರ್ ತಿಳಿಸಿದರು.
ಸಾಂಸ್ಕೃತಿಕ ಕಲಾತಂಡಗಳ ಮೆರಗು: ನಗರದ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನಲ್ಲಿ ಈ ಬಾರಿ ವಿಶಿಷ್ಠವಾಗಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಡಿಜೆ ಬದಲಿಗೆ ಸಾಂಸ್ಕೃತಿಕ ಕಲಾ ತಂಡಗಳ ಮೆರಗು ಹಬ್ಬಕ್ಕೆ ಪ್ರಮುಖ ಆಕರ್ಷಣೆಯಾಗಿದೆ.ಗಣೇಶ ಪ್ರತಿಷ್ಠಾಪನೆ ಮೊದಲ ದಿನ ಆ. 27ರಂದು ಬುಧವಾರ ಬೆಳಗ್ಗೆ 8ಕ್ಕೆ ಮೂರುಸಾವಿರ ಮಠದಿಂದ ಗಣಪತಿಯನ್ನು ಮೆರವಣಿಗೆಯ ಮೂಲಕ ಚೆನ್ನಮ್ಮ ಮೈದಾನಕ್ಕೆ ತಂದು ನಿಶ್ಚಿತಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಯನ್ನು ಕಲಾವಿದ ಪ್ರಶಾಂತ ಪತ್ತಾರ ಸಿದ್ಧಪಡಿಸಿದ್ದು ಆಕರ್ಷಕವಾಗಿದೆ.
ಅಂದು ಬೆಳಗ್ಗೆ 9ಕ್ಕೆ ಪ್ರತಿಷ್ಠಾಪನೆ ಪೂಜೆ, ಮಧ್ಯಾಹ್ನ 1ರಿಂದ ಭಜನೆ, ಸಂಜೆ 5ಕ್ಕೆ ಗೊಂದಲಿಗರ ಪದ, ಸಂಜೆ 7ಕ್ಕೆ ಮಂಗಳಾರತಿ, 7.30ಕ್ಕೆ ಗಂಗಾರತಿ ನಡೆಯಲಿದೆ.ಎರಡನೆಯ ದಿನ ಆ. 28ರಂದು ಬೆಳಗ್ಗೆ 6.30ರಿಂದ 7.30ರ ವರೆಗೆ ಯೋಗಾಸನ ಬಳಗದಿಂದ ಯೋಗ ಪೂಜೆ, ಬೆಳಗ್ಗೆ 8ಕ್ಕೆ ಗಣೇಶನ ಪೂಜೆ ಹಾಗೂ ಆರತಿ, ಬೆಳಗ್ಗೆ 9ರಿಂದ 11ರ ವರೆಗೆ ಗಣಹೋಮ, 11ರಿಂದ 12ರ ವರೆಗೆ ಪಟುಗಳಿಂದ ಗಣೇಶನ ಸ್ತೋತ್ರ, 12ರಿಂದ ಸಂಜೆ 5ರ ವರೆಗೆ ಭಜನೆ, 5.30ರಿಂದ 7ರ ವರೆಗೆ ವಾರಿಕರಿ ಭಜನೆ, ಸಂಜೆ 7ಕ್ಕೆ ಗಣೇಶ ವಂದನೆ ಕಾರ್ಯಕ್ರಮ, ರಾತ್ರಿ 8ಕ್ಕೆ ಗಂಗಾರತಿ ಹಮ್ಮಿಕೊಳ್ಳಲಾಗಿದೆ.
3ನೇ ದಿನ ಬೆಳಗ್ಗೆ 7ರಿಂದ 8ರ ವರೆಗೆ ವಿಷ್ಣು ಸಹಸ್ರನಾಮ, 9ರಿಂದ ಲಿಲಾವು, 12ಕ್ಕೆ ಗಣೇಶ ವಿಸರ್ಜನೆ ಮೆರವಣಿಗೆ ಪ್ರಾರಂಭವಾಗಲಿದೆ. ಮಧ್ಯಾಹ್ನ 12:30ಕ್ಕೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.ವಿಸರ್ಜನೆಯ ಮೆರವಣಿಗೆಯಲ್ಲಿ ಡಿಜೆ ಬದಲು ವಿಶೇಷ ಆಕರ್ಷಣೆಯಾಗಿ ಕರ್ನಾಟಕ ರಾಜ್ಯದ ಪ್ರಸಿದ್ಧ ವಾದ್ಯ ಮೇಳಗಳು ಹಾಗೂ ವಿವಿಧ ವೇಷಭೂಷಣಗಳಿಂದ ಕೂಡಿದ ಸಾಂಸ್ಕೃತಿಕ ಮೆರವಣಿಗೆ ಇರಲಿದೆ.
19 ಷರತ್ತುಗಳು: ಇಲ್ಲಿನ ಈದ್ಗಾ ಮೈದಾನದಲ್ಲಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯಿಂದ 4ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹು-ಧಾ ಮಹಾನಗರ ಪಾಲಿಕೆಯು 19 ಷರತ್ತುಗಳನ್ನು ವಿಧಿಸಿ ಅವಕಾಶ ಕಲ್ಪಿಸಿದೆ.ಷರತ್ತುಗಳೇನು?: ಮೈದಾನದಲ್ಲಿ 30 ಅಡಿ ಉದ್ದ, 30 ಅಡಿ ಅಗಲಕ್ಕೆ ಮೀರದಂತೆ ಹಾಗೂ ಪಾಲಿಕೆ, ಪೊಲೀಸ್, ಕಂದಾಯ ಅಧಿಕಾರಿಗಳು ಸೂಚಿಸುವ ಜಾಗದಲ್ಲಿ ಮಾತ್ರ ಪೆಂಡಾಲ್ ಹಾಕುವುದು. ಸಾರ್ವಜನಿಕ ಗಣೇಶ ಉತ್ಸವ ಆಚರಣೆಗೆ ಉತ್ಸವ ಮೂರ್ತಿಯ ಹೊರತಾಗಿ ಯಾವುದೇ ರೀತಿಯ ಬಾವುಟಗಳು ಹಾಗೂ ಇತರೆ ಮೈದಾನದ ಭಾಗದಲ್ಲಿ ಯಾವುದೇ ರೀತಿಯ ವಿವಾದಿತ ಹಾಗೂ ಪ್ರಚೋದನಕಾರಿ ಫೋಟೋಗಳು, ಬಿತ್ತಿಪತ್ರ, ಬ್ಯಾನರ್, ಬಂಟಿಂಗ್ಸ್ ಅಳವಡಿಸಕೂಡದು.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಉತ್ಸವ ಮೂರ್ತಿ ಪ್ರತಿಷ್ಠಾಪಿಸುವ ಪೂರ್ವದಲ್ಲಿ ಸಮಿತಿಯು ಕಡ್ಡಾಯವಾಗಿ ಹು-ಧಾ ಮಹಾನಗರ ಪೊಲೀಸ್ ಆಯುಕ್ತರಿಂದ ಖುದ್ದಾಗಿ ಅನುಮತಿ ಪಡೆಯಬೇಕು.ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಸೂಚಿಸಿದಂತೆ ಗಣೇಶ ಮೆರವಣಿಗೆ ಮಾರ್ಗಕ್ಕೆ ಬದ್ಧರಾಗಿರಬೇಕು. ಮತ್ತು ಮೆರವಣಿಗೆಯನ್ನು ಒಂದು ಗಂಟೆಯೊಳಗೆ ಮುಕ್ತಾಯಗೊಳಿಸಿ ಪಾಲಿಕೆ ಹಾಗೂ ಪೊಲೀಸರು ಸೂಚಿಸಿದ ಜಾಗದಲ್ಲಿ ಮೂರ್ತಿ ವಿಸರ್ಜನೆ ಮಾಡುವುದು.
ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆ, ಭಾಷಣ ಮಾಡುವಂತಿಲ್ಲ. ಅನ್ಯ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ಕಾರ್ಯಕ್ರಮಗಳನ್ನು ಮಾಡುವ ಹಾಗಿಲ್ಲ. ಹೀಗೆ ಒಟ್ಟು 19 ಷರತ್ತುಗಳನ್ನು ವಿಧಿಸಿ ಪಾಲಿಕೆ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿದೆ.