ಗ್ಯಾಂಗ್‌ ರೇಪ್‌, ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ: ಬಿ.ಸಿ. ಪಾಟೀಲ ಆರೋಪ

| Published : Jan 14 2024, 01:35 AM IST

ಗ್ಯಾಂಗ್‌ ರೇಪ್‌, ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ: ಬಿ.ಸಿ. ಪಾಟೀಲ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಾನಗಲ್ಲ ಗ್ಯಾಂಗ್‌ ರೇಪ್‌ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಸರ್ಕಾರದಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಾನಗಲ್ಲ ಗ್ಯಾಂಗ್‌ ರೇಪ್‌ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.

ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್ಲ ಸಮೀಪದ

ನಾಲ್ಕರ ಕ್ರಾಸ್ ಬಳಿ ಸುಮಾರು 7 ಜನರು ವಸತಿ ಗೃಹಕ್ಕೆ ನುಗ್ಗಿ ತನ್ನನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯೇ ಹೇಳಿಕೆ ನೀಡಿದ್ದಾಳೆ. ನೈತಿಕ ಪೊಲೀಸ್‌ಗಿರಿ ಬಗ್ಗೆ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಈ ಪ್ರಕರಣ ಬಗ್ಗೆ ಬಾಯಿ ಬಿಡುತ್ತಿಲ್ಲ. ಮುಸ್ಲಿಂ ಮಹಿಳೆ ಮೇಲೆ ಅತ್ಯಾಚಾರ ನಡೆದರೂ ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ, ಪೊಲೀಸರು ಮಾಡಿದ್ದಾರೆ. ಇಂಥ ದುಷ್ಕೃತ್ಯಗಳಿಗೆ ಕಾಂಗ್ರೆಸ್ ಸಪೋರ್ಟ್ ಮಾಡುತ್ತಿರುವ ಶಂಕೆ ಮೂಡುತ್ತಿದೆ. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಮೂವರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ರಾಜ್ಯದಲ್ಲಿ ಅದಕ್ಷ ಸರ್ಕಾರವಿದ್ದು, ಆರೋಪಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮಹಿಳೆಯರ ದೌರ್ಜನ್ಯ ಈ ಸರ್ಕಾರದ ಆರನೇ ಗ್ಯಾರಂಟಿ ಸ್ಲೋಗನ್ ಆಗಲಿದೆ ಎಂದು ವಾಗ್ದಾಳಿ ನಡೆಸಿದರು.

ಹಾನಗಲ್ಲ ತಾಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ ಇಂತಹ ನಾಲ್ಕು ಪ್ರಕರಣ ದಾಖಲಾಗಿವೆ. ದಲಿತ ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಮಲ್ಲಿಗಾರ್ ಒಣಿಯಲ್ಲಿ ಕಿಡ್ನ್ಯಾಪ್‌ ಕೇಸ್‌ ದಾಖಲಾಗಿತ್ತು.

ಮಕರವಳ್ಳಿ ಗ್ರಾಮದ ಯುವತಿ ಬಟ್ಟೆ ಖರೀದಿ ಮಾಡಲು ಹೋದಾಗ ಟ್ರಯಲ್ ರೂಮಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ಆಕೆಯನ್ನು ಬ್ಲ್ಯಾಕ್‌ಮೇಲ್‌ ಮಾಡುವ ಪ್ರಯತ್ನ ನಡೆದಿತ್ತು. ಎರಡು ದಿನಗಳ ಹಿಂದೆ ಮತ್ತೊಂದು ಕಿಡ್ನ್ಯಾಪ್‌ ಪ್ರಕರಣವಾಗಿದ್ದರೂ ಶುಕ್ರವಾರ ರಾತ್ರಿ ಕೇಸ್‌ ದಾಖಲಿಸಿಕೊಂಡಿದ್ದಾರೆ. ತಕ್ಷಣ ಹಾನಗಲ್ಲ ಸಿಪಿಐ ಹಾಗೂ ಪಿಎಸ್ಐ ಸಸ್ಪೆಂಡ್ ಆಗಬೇಕು. ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯ ಆಗಿದೆ ಎಂದು ಹೇಳಿದರು.

ಪಿಎಫ್ಐ ಲಿಂಕ್‌:

ಗ್ಯಾಂಗ್‌ ರೇಪ್‌ ಪ್ರಕರಣ ಆರೋಪಿಗಳಿಗೆ ಪಿಎಫ್‌ಐ ಸಂಘಟನೆಯೊಂದಿಗೆ ಲಿಂಕ್ ಇದೆ ಎಂಬ ಮಾಹಿತಿಯಿದೆ. ಈ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಗಾಂಜಾ ಸಿಗುತ್ತಿದೆ. ಅಕ್ರಮ ಮದ್ಯ, ಜೂಜು ಅವ್ಯಾಹತವಾಗಿ ನಡೆಯುತ್ತಿದೆ. ಅಕ್ರಮ ದಂಧೆಯಿಂದಲೇ ಕಾಂಗ್ರೆಸ್‌ ಸರ್ಕಾರ ಹಣ ಸಂಗ್ರಹಿಸುತ್ತಿರುವ ಶಂಕೆ ಮೂಡುತ್ತಿದೆ. ಒಬ್ಬ ಮುಸ್ಲಿಂ ಮಹಿಳೆಯ ಮೇಲೆ ಅತ್ಯಾಚಾರ ಆಗಿದ್ದರೂ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲಿ, ಮಹಿಳಾ ಕಲ್ಯಾಣ ಸಚಿವೆಯಾಗಲಿ ಸಾಂತ್ವನ ಹೇಳಲು ಬಂದಿಲ್ಲ. ಸ್ಥಳೀಯ ಶಾಸಕರು ಕೂಡ ಮೌನ ವಹಿಸಿದ್ದಾರೆ. ಇದನ್ನು ನೋಡಿದರೆ ಆರೋಪಿಗಳಿಗೆ ಇವರ ರಕ್ಷಣೆ ಇದ್ದಂತೆ ಕಾಣುತ್ತಿದೆ. ದೇಶ ಹಾಳಾದರೂ ಪರವಾಗಿಲ್ಲ, ಕಾಂಗ್ರೆಸ್‌ನವರಿಗೆ ಓಟ್ ಬ್ಯಾಂಕ್ ಮುಖ್ಯ ಎಂದು ಅವರು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಕಿರಣ ಕೋಣನವರ ಇತರರು ಇದ್ದರು.

ಗ್ಯಾಂಗ್‌ ರೇಪ್‌ ಪ್ರಕರಣ ಸಿಬಿಐಗೆ ಒಪ್ಪಿಸಿ:

ಇಲ್ಲಿಯ ಸ್ವಾಧಾರ ಸಾಂತ್ವನ ಕೇಂದ್ರದಲ್ಲಿರುವ ಗ್ಯಾಂಗ್‌ ರೇಪ್‌ ಸಂತ್ರಸ್ತೆಯನ್ನು ಮಾಜಿ ಸಚಿವ ಬಿ.ಸಿ. ಪಾಟೀಲ ನೇತೃತ್ವದ ಬಿಜೆಪಿ ನಿಯೋಗ ಭೇಟಿ ಮಾಡಿ ಸಾಂತ್ವನ ಹೇಳಿತು. ಈ ವೇಳೆ ತನ್ನ ಮೇಲಾದ ಸಾಮೂಹಿಕ ಅತ್ಯಾಚಾರದ ಬಗ್ಗೆ ಸಂತ್ರಸ್ತೆ ಅಳಲು ತೋಡಿಕೊಂಡಳು. ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಬಿಜೆಪಿ ಮುಖಂಡರು ಸಂತ್ರಸ್ತೆಗೆ ಧೈರ್ಯ ತುಂಬಿ, ಪಕ್ಷದಿದ ₹25 ಸಾವಿರ ಸಹಾಯಧನ ನೀಡಿದರು.

ಬಳಿಕ ಮಾತನಾಡಿದ ಬಿ.ಸಿ. ಪಾಟೀಲ, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಪ್ರಕರಣವನ್ನು ರಾಜೀ ಮಾಡಿ ಮುಚ್ಚಿಹಾಕಲು ಪೊಲೀಸರು ಹೊರಟಿದ್ದರು. ಹೀಗಾಗಿ ಹಾನಗಲ್ಲ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.