ಧಾರವಾಡ: ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದರೆ ಮಾತ್ರ ಭವಿಷ್ಯದಲ್ಲಿ ಗಂಗಾಮತ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಚೌಡದಾನಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ಇಲ್ಲಿಯ ಆಲೂರು ವೆಂಕಟರಾವ್ ಸಭಾಭವನದಲ್ಲಿ ಗಂಗಾಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮತ್ತು ಸಮಾವೇಶದ ಕುರಿತ ಮುಖಂಡರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗಂಗಾಮತಸ್ಥರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ. ಸಮಾಜದವರು ಅಕ್ಷರಸ್ಥರಾದರೆ ಉನ್ನತಿ ಸಾಧಿಸಬಹುದು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಉನ್ನತ ಮತ್ತು ಉತ್ತಮ ಶಿಕ್ಷಣ ಕೊಡಿಸುವತ್ತ ಸಮಾಜದವರು ಗಮನಹರಿಸಬೇಕು. ಬರೀ ಮೀಸಲಾತಿಯಿಂದ ಸಮುದಾಯದ ಕಲ್ಯಾಣ ಆಗಲಾರದು. ಆದ್ದರಿಂದ ಶೈಕ್ಷಣಿಕವಾಗಿ ಸುಧಾರಣೆಯಿಂದ ಎಲ್ಲವನ್ನೂ ಪಡೆಯಬಹುದು ಎಂದರು.

ವಿಧಾನಪರಿಷತ್‌ ಸದಸ್ಯ ತಿಪ್ಪಣಪ್ಪ ಕಮಕನೂರ ಮಾತನಾಡಿ, ಗಂಗಾಮತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಈಗಾಗಲೇ ಸರ್ಕಾರಕ್ಕೆ ಹಲವಾರು ಸಲ ಮನವಿ ಮಾಡಲಾಗಿದೆ. ಈ ಬೇಡಿಕೆ ಈಡೇರುವ ತನಕ ಪ್ರಯತ್ನ ಮುಂದುವರಿಯಲಿದೆ. ಸಮುದಾಯದ ಬೇಡಿಕೆ ಈಡೇರುವ ನಿರೀಕ್ಷೆ ಇದೆ ಎಂದರು.

ಸಮಾಜದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿಲಯಕ್ಕೆ ತಮ್ಮ ಅನುದಾನದಡಿ ₹15 ಲಕ್ಷ ಅನುದಾನ ನೀಡುವುದಾಗಿ ಪ್ರಕಟಿಸಿದ ತಿಪ್ಪಣಪ್ಪ, ಸಮುದಾಯದ ಕಾರ್ಯಗಳಿಗೆ ಸದಾ ಕೈಜೋಡಿಸುವುದಾಗಿ ಭರವಸೆ ನೀಡಿದರು.


ವಿಧಾನ ಪರಿಷತ್‌ ಇನ್ನೋರ್ವ ಸದಸ್ಯ ಎನ್.ರವಿಕುಮಾರ ಮಾತನಾಡಿ, ಸಮಾಜದ ಜನರು ಇನ್ನಷ್ಟು ಸಂಘಟಿತರಾಗುವ ಮೂಲಕ ಸರ್ಕಾರದ ಸೌಲತ್ತುಗಳನ್ನು ಪಡೆಯಬೇಕು. ಜೊತೆಗೆ ಪ್ರಸ್ತುತ ಪರಿಸ್ಥಿತಿಯಲ್ಲಿನ ಸವಾಲುಗಳನ್ನು ಎದುರಿಸಲು ಜಾಗೃತರಾಗಬೇಕು ಎಂದರು.

ಮುಖಂಡರಾದ ಮಂಜುನಾಥ ಮಗಿನಹಳ್ಳಿ, ದಿಲೀಪ ಕುರಂದವಾಡಿ, ಗುರಪ್ಪ ಜಿದ್ದಿ, ಬಸವಂತಪ್ಪ ಬಾರ್ಕಿ, ಅಶೋಕ ಕುರಿಯವರ, ಬಸಪ್ಪ ತಪ್ಪೇಲಿ, ಗುರು ಮತ್ತೂರ, ಎಚ್.ಎಸ್. ನಾಯ್ಕೋಡಿ, ಬಸವರಾಜ ಗುಳಬಾಳ, ಹನುಮಂತಪ್ಪ ಇಟಗಿ ಇದ್ದರು.

ಜಿಲ್ಲಾ ಗಂಗಾಮತಸ್ಥರ ಹಿತರಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಭೀಮಕ್ಕನವರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮನೋಜಕುಮಾರ ಕರ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರೇಶ ಬಾರ್ಕಿ ನಿರೂಪಿಸಿದರು. ಯಲ್ಲಪ್ಪ ಸುಣಗಾರ ವಂದಿಸಿದರು.