ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಕೇವಲ ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ.
ಸಿರುಗುಪ್ಪ: ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಕೇವಲ ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಪೋಷಕರು, ಶಿಕ್ಷಕರು ಮತ್ತು ಇಡೀ ಸಮಾಜದ ಸಹಕಾರ ಅತ್ಯಗತ್ಯ. ನಿಮ್ಮ ಸುತ್ತಮುತ್ತ ಇಂತಹ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ ಹೇಳಿದರು.
ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ತಡೆಗಟ್ಟುವಿಕೆಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಯುವ ಪೀಳಿಗೆಯನ್ನು ಹೆಮ್ಮಾರಿಯಂತೆ ಕಾಡುತ್ತಿರುವ ಮಾದಕ ವಸ್ತುಗಳ ವ್ಯಸನದಿಂದ ಮುಕ್ತಗೊಳಿಸಲು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 26 ರಂದು ಅಂತರರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ತಡೆಗಟ್ಟುವಿಕೆಯ ಜಾಗೃತಿಯನ್ನು ಮೂಡಿಸಲು ಆಚರಿಸಲಾಗುತ್ತದೆ ಎಂದರು.
ಇತ್ತೀಚಿನ ದಿನದಲ್ಲಿ ಅನೇಕ ಯುವಕ ಮತ್ತು ಯುವತಿಯರು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗಿದ್ದಾರೆ. ಹದಿಹರೆಯದವರಲ್ಲಿ ಮಾದಕ ವ್ಯಸನದ ಚಟ ಹೆಚ್ಚುತ್ತಿದ್ದು, ಸಮಾಜದ ನಿರ್ಲಕ್ಷ್ಯದಿಂದಾಗಿ ಇಂದು ಯುವ ಜನತೆ ಹೆಚ್ಚೆಚ್ಚು ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದು ಯುವ ಜನತೆಯ ಆರೋಗ್ಯ ಮತ್ತು ವೃತ್ತಿ ಜೀವನದ ಮೇಲೆ ಜೊತೆಗೆ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದರು.ಮಾದಕವಸ್ತು ಸೇವನೆ ಮಾಡುವವರ ಮೇಲೆ ಮಾತ್ರವಲ್ಲದೇ ಸಮಾಜನ ಮೇಲೆ ಕೂಡ ಭಾರೀ ಪರಿಣಾಮ ಬೀರುತ್ತದೆ. ಇದು ಸಾಮಾಜಿಕವಾಗಿ, ದೈಹಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹಾಳು ಮಾಡುತ್ತದೆ. ಮಾದಕ ದ್ರವ್ಯಗಳಯ ಜನರಲ್ಲಿ ಭಯ, ಆತಂಕ ಮತ್ತು ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತದೆ. ಇದು ಮೆದುಳು ಮತ್ತು ನರಮಂಡಲದ ಬೂದು ದ್ರವ್ಯವನ್ನು ನೇರವಾಗಿ ಪರಿಣಾಮ ಬೀರುತ್ತದೆ, ಇದು ಅವರಿಗೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಲು ಕಷ್ಟಕರವಾಗುತ್ತದೆ. ಮಾದಕ ವ್ಯಸನವು ಹಸಿವು ಮತ್ತು ತೂಕದ ತೀವ್ರ ನಷ್ಟ, ಮಲಬದ್ಧತೆ, ಹೆಚ್ಚಿದ ಆತಂಕ ಮತ್ತು ಕಿರಿಕಿರಿ, ನಿದ್ರಾಹೀನತೆ ಮತ್ತು ಬೌದ್ಧಿಕ ಕಾರ್ಯಚಟುವಟಿಕೆಗಳ ಕ್ರಮೇಣ ದುರ್ಬಲತೆಗೆ ಕಾರಣವಾಗಬಹುದು ಎಂದರು.
ಆಪ್ತ ಸಮಾಲೋಚಕ ಮಲ್ಲೇಶಪ್ಪ, ಪ್ರಾಂಶುಪಾಲ ದಾದಾಪೀರ್ ಹಾಗೂ ವಿದ್ಯಾರ್ಥಿಗಳು ಇದ್ದರು.ಸಿರುಗುಪ್ಪ ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ತಡೆಗಟ್ಟುವಿಕೆಯ ಜಾಗೃತಿ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ ಮಾತನಾಡಿದರು.