ಸಾರಾಂಶ
ಕನ್ನಡಪ್ರಭ ತುಮಕೂರು
ಸಮಾಜಕ್ಕೆ ಕೊಡುಗೆ ಕೊಟ್ಟ ಮಹನೀಯರನ್ನು ಸದಾ ಸ್ಮರಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ತಂದೆ ತಾಯಿ ಜನ್ಮ ಕೊಟ್ಟರೆ ಸಮಾಜ ಜೀವನ ರೂಪಿಸುತ್ತದೆ. ಅಂತಹ ಆದರ್ಶ ಸಮಾಜವನ್ನು ನಿರ್ಮಾಣ ಮಾಡಿ ಮುಂದಿನ ಪೀಳಿಗೆಯ ಬೆಳವಣಿಗೆಗೆ ಸಹಕಾರ ನೀಡುವುದು ಹಿರಿಯರ ಕರ್ತವ್ಯ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.ಶುಕ್ರವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ರೆಡ್ಡಿ ಜನಸಂಘದ ಆಶ್ರಯದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೆಡ್ಡಿ ಜನಾಂಗದವರು ನಗರದಲ್ಲಿ ನಿರ್ಮಾಣ ಮಾಡುತ್ತಿರುವ ಬಾಲಕರ, ಬಾಲಕಿಯರ ಹಾಸ್ಟೆಲ್‌ಗೆ ತಲಾ ಎರಡು ಲಕ್ಷದಂತೆ ನಾಲ್ಕು ಲಕ್ಷ ರು.ಗಳ ವೈಯಕ್ತಿಕ ನೆರವು ನೀಡುವುದಾಗಿ ಹೇಳಿದರು. ಎರಡು ಕೋಟಿ ರು. ಅನುದಾನ ನೀಡಲು ರೆಡ್ಡಿ ಜನಸಂಘದವರು ಸರ್ಕಾರಕ್ಕೆ ಮನವಿ ಮಾಡಿದ್ದು ಆ ಹಣವನ್ನೂ ಕೊಡಿಸಲು ಪ್ರಯತ್ನ ಮಾಡಿ ಮುಂದಿನ ವೇಮನ ಜಯಂತಿ ವೇಳೆಗೆ ಎರಡೂ ಹಾಸ್ಟೆಲ್‌ಗಳ ಉದ್ಘಾಟನೆಯಾಗಲು ಪ್ರಯತ್ನಿಸಿ ಎಂದು ತಿಳಿಸಿದರು.ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಆದರ್ಶ ಸಮಾಜಕ್ಕಾಗಿ ಕವಿ, ದಾರ್ಶನಿಕ ವೇಮನರು ನೀಡಿದ ಕೊಡುಗೆ ಅಪಾರ. ಕನ್ನಡದ ಸರ್ವಜ್ಞ ಕವಿಯಂತೆ ತೆಲುಗಿನಲ್ಲಿ ಸಾಹಿತ್ಯ ರಚಿಸಿ ಸಮಾಜ ಪರಿವರ್ತನೆಗೆ ಕಾಣಿಕೆ ನೀಡಿದ್ದಾರೆ. 14 ನೇ ಶತಮಾನದಲ್ಲಿ ಜನಿಸಿದ ವೇಮನರು ಆಧ್ಯಾತ್ಮಿಕ ಸಾಧಕರಗಿ, ಸಮಾಜ ಸುಧಾರಕರಾಗಿ ಎಂದೆಂದಿಗೂ ಪ್ರಸ್ತುತರಾಗಿದ್ದಾರೆ. ಸಪ್ತ ಋಷಿಗಳಿಗೆ ನೀಡುವಷ್ಟೇ ಪೂಜ್ಯ ಸ್ಥಾನಮಾನ ಹೊಂದಿರುವ ವೇಮನರು ಈ ಸಮಾಜಕ್ಕೆ ಸಾವಿರಾರು ವರ್ಷಗಳಿಗೆ ಬೇಕಾಗುವಂತಹ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ತುಮಕೂರು ವಿವಿ ಪ್ರಾಧ್ಯಾಪಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಉಪನ್ಯಾಸ ನೀಡಿ, ಇಂದು ಮೌಲ್ಯಾಧಾರಿತ ಸಮಾಜ ಕಾಣುತ್ತಿಲ್ಲ. ಆದರ್ಶ ವ್ಯಕ್ತಿಗಳ ಕೊರತೆ ಇದೆ. ನಮ್ಮ ಮಕ್ಕಳು ಯಾರನ್ನು ಆದರ್ಶರೆಂದು ಸ್ವೀಕರಿಸಬೇಕು ಎಂದು ಕಾಣದಂತಾಗಿದೆ. ಆದರೆ ಈ ಹಿಂದೆ ಸಮಾಜಕ್ಕೆ ಮೌಲ್ಯಗಳನ್ನು ಬಿತ್ತಿಹೋದ ಮಹನೀಯರ ಆದರ್ಶಗಳನ್ನು ಪಾಲನೆ ಮಾಡಬೇಕು, ಮಕ್ಕಳಿಗೆ ಅಂತಹವರ ತತ್ವಸಿದ್ಧಾಂತಗಳನ್ನು ಹಿರಿಯರು ತಿಳಿಹೇಳಬೇಕು ಎಂದರು.ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ.ಶ್ರೀನಿವಾಸ ರೆಡ್ಡಿ ಮಾತನಾಡಿ, ನಗರದಲ್ಲಿ ಸುಸಜ್ಜಿತವಾದ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್ ಪೂರ್ಣಗೊಳಿಸಲು ಹಣದ ಕೊರತೆ ಇದೆ. ಎರಡು ಕೋಟಿ ರೂಪಾಯಿ ಅನುದಾನ ನಿಡಲು ಸರ್ಕಾರವನ್ನು ಕೋರಲಾಗಿದೆ. ಸಚಿವ ಕೆ.ಎನ್. ರಾಜಣ್ಣನವರು ಹಣ ಬಿಡುಗಡೆಗೆ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿ, ಶಕ್ತಿ ಇರುವವರು ಸಹಕಾರ ನೀಡುವಂತೆ ಕೋರಿದರು.
ಈ ವೇಳೆ ರೆಡ್ಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು. ತಹಸೀಲ್ದಾರ್ ಸಿದ್ದೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಜಿಲ್ಲಾ ರೆಡ್ಡಿ ಜನಸಂಘದ ಕಾರ್ಯದರ್ಶಿ ಬಿ.ಆರ್. ಮಧು, ಜಂಟಿ ಕಾರ್ಯದರ್ಶಿ ಕೆ.ಜೆ. ರಾಜಗೋಪಾಲ ರೆಡ್ಡಿ, ಖಜಾಂಚಿ ಎಂ.ಎ. ಶಿವಾರೆಡ್ಡಿ ಮೊದಲಾದವರು ಭಾಗವಹಿಸಿದ್ದರು.QUOTEಉನ್ನತ ವಿದ್ಯಾಭ್ಯಾಸಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ಬರುವ ಹೆಣ್ಣುಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿದರೆ ಅವರು ಉನ್ನತ ಸ್ಥಾನಮಾನ ಗಳಿಸಿ ಮುಂದೆ ಇದೇ ಸಮಾಜದ ಬೆಳವಣಿಗೆಗೆ ಸಹಕಾರಿಯಾಗುತ್ತಾರೆ.
ಕೆ.ಎನ್. ರಾಜಣ್ಣ ಸಹಕಾರ ಸಚಿವರು