ಬರ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿ

| Published : Jan 20 2024, 02:00 AM IST

ಸಾರಾಂಶ

ಇಂಡಿ ಪಟ್ಟಣದ ತಾಲೂಕು ಸೌಧ ಸಭಾಂಗಣದಲ್ಲಿ ಶುಕ್ರವಾರ ಕರೆದ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಎಸಿ ಅಬೀದ್ ಗದ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು ಹೀಗೆ...

ಕನ್ನಡಪ್ರಭ ವಾರ್ತೆ ಇಂಡಿ

ಬರ ಎದುರಿಸಲು ತಾಲೂಕು ಮಟ್ಟದ ಅಧಿಕಾರಿಗಳು ಸನ್ನದ್ಧರಾಗಬೇಕು. ತಾಲೂಕಿನ ಯಾವುದೇ ಗ್ರಾಮ, ಜನವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತ ಕ್ರಮಕೈಗೊಳ್ಳಬೇಕು ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.

ಪಟ್ಟಣದ ತಾಲೂಕು ಸೌಧ ಸಭಾಂಗಣದಲ್ಲಿ ಶುಕ್ರವಾರ ಕರೆದ ಟಾಸ್ಕ್‌ಫೋರ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಿನ ಮೂಲ ಇದ್ದರೇ ಅದನ್ನು ಪಡೆದುಕೊಂಡು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕು. ಕುಡಿಯುವ ನೀರಿನ ಮೂಲವೇ ಇಲ್ಲದ ಸಮಸ್ಯಾತ್ಮಕ ಗ್ರಾಮಗಳು ಇದ್ದರೇ ಆ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಬೇಕು. ಬರವನ್ನು ಯುದ್ಧೋಪಾದಿಯಲ್ಲಿ ಎದುರಿಸಿ ಯಾವುದೇ ಗ್ರಾಮಕ್ಕೆ, ಜನವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮ ಪಂಚಾಯತಿ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್‌ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕೆರೆ, ಹಳ್ಳ, ಕಾಲುವೆಗಳ ಸುತ್ತಲು ಇರುವ ಬಾವಿ, ಬೊರವೆಲ್‌ಗಳನ್ನು ಪತ್ತೆ ಹಚ್ಚಿ ಅವುಗಳು ತಮ್ಮ ವ್ಯಾಪ್ತಿಗೆ ಪಡೆದುಕೊಂಡು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬೇಕು. ಇಂದಿನಿಂದ ಜೂನ್‌ ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಲ್ಲ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿರುವ ಇರುವ ಅಧಿಕಾರಿಗಳು ಇದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಟ್ಯಾಂಕರ್‌ ಮೂಲಕ ನೀರು ಸರಿಯಾಗಿ ಸರಬರಾಜು ಆಗುತ್ತದೆಯೋ ಇಲ್ಲವೊ, ಟ್ಯಾಂಕರ್‌ ಮಾಲೀಕರು ಅನುಮತಿ ಪಡೆದ ಟ್ರೀಪ್‌ದಂತೆ ನೀರು ಸರಬರಾಜು ಮಾಡುತ್ತಾರೆಯೊ ಇಲ್ಲವೊ ಎಂಬುವುದನ್ನು ಪ್ರತಿನಿತ್ಯ ಪರಿಶೀಲಿಸಬೇಕು ಎಂದರು.

15 ದಿನಕ್ಕೊಮ್ಮೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವವರಿಗೆ ಬಾಡಿಗೆ ಹಣ ನೀಡಿದರೇ ಟ್ಯಾಂಕರ್‌ ಸರಬರಾಜು ಮಾಡುವವರಿಗೂ ಅನುಕೂಲವಾಗುತ್ತದೆ. ತಾಲೂಕಿನ ಅಥರ್ಗಾ, ಹೊರ್ತಿ (ಮೊರಾರ್ಜಿ ವಸತಿ ಶಾಲೆಗಳು), ಬಳ್ಳೊಳ್ಳಿ, ಗಣವಲಗಾ, ಚಿಕ್ಕಬೇವನೂರ, ಅಂಜುಟಗಿ, ಕಪನಿಂಬರಗಿ, ಅಗಸನಾಳ, ತೆಗ್ಗಿಹಳ್ಳಿ ಗ್ರಾಮಗಳಿಗೆ ತುರ್ತಾಗಿ 15 ದಿನಗಳ ಒಳಗಾಗಿ ಟ್ಯಾಂಕರ್‌ ಮಂಜೂರು ಮಾಡಲು ಸಭೆಯಲ್ಲಿ ಚಿರ್ಚಿಸಲಾಯಿತು.

ತಹಸೀಲ್ದಾರ್‌ ಬಿ.ಎಸ್‌.ಕಡಕಬಾವಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ತಗೆದುಕೊಂಡು ಮೂರ್ನಾಲ್ಕು ತಿಂಗಳವರೆಗೆ ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಲ್‌ ಅಧಿಕಾರಿಗಳು, ಗ್ರಾಮ ಪಂಚಾಯತಿ ಪಿಡಿಒ ಮುತುವರ್ಜಿ ವಹಿಸಿಕೊಂಡು ನೋಡಿಕೊಳ್ಳಬೇಕು ಎಂದರು.

ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಸರ್ಕಾರಿ ಘೋಷಣೆ ಮಾಡಿದ್ದು, ಯಾವ ತಾಂಡಾಗಳಿಗೆ ಹಕ್ಕುಪತ್ರ ನೀಡಿರುವುದಿಲ್ಲ ಎಂಬುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಎಲ್ಲರಿಗೂ ಹಕ್ಕುಪತ್ರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯತಿ ಇಒ ಬಾಬುರಾವ ರಾಠೋಡ, ಗ್ರಾಮೀಣ ಕುಡಿಯುವ ನೀರು,ನೈರ್ಮಲ್ಯ ಇಲಾಖೆಯ ಎಇಇ ಎಸ್‌.ಆರ್‌.ರುದ್ರವಾಡಿ, ಎಇಇ ಚವ್ಹಾಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವುರ,ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್‌.ಎಸ್‌.ಪಾಟೀಲ, ಹೆಸ್ಕಾಂ ಎಇಇ ಎಸ್‌.ಆರ್‌.ಮೇಡೆಗಾರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮೊದಲಾದವರು ಸಭೆಯಲ್ಲಿ ಇದ್ದರು.ಗ್ರಾಮ ಮಟ್ಟದಲ್ಲಿರುವ ಸಿಬ್ಬಂದಿ ಬಳಕೆ ಮಾಡಿಕೊಂಡು ಬರ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರಬಹುದು ಎಂಬ ಬಗ್ಗೆ ಮುಂಜಾಗ್ರತೆ ವಹಿಸಿ ಆ ಗ್ರಾಮಗಳ ಪಟ್ಟಿ ತಯಾರಿಸಿಕೊಳ್ಳಬೇಕು.

-ಅಬೀದ್ ಗದ್ಯಾಳ,

ಎಸಿ.