ಭಟ್ಕಳ: ಪಟ್ಟಣದ ಬಂದರು ರಸ್ತೆಯಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನವರು ನೂತನವಾಗಿ ನಿರ್ಮಿಸಿದ ಶ್ರೀ ಗುರು ವಿದ್ಯಾಧಿರಾಜ ನ್ಯೂ ಇಂಗ್ಲಿಷ್ ಪಿಯು ಕಾಲೇಜು ಕಟ್ಟಡವನ್ನು ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಲೋಕಾರ್ಪಣಗೊಳಿಸಿದರು.

ಆನಂತರ ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ವಿದ್ಯಾರ್ಥಿಗಳು ಕೇವಲ ಅಂಕಗಳ ಹಿಂದೆ ಓಡದೇ ಕೌಶಲ್ಯ ಹೊಂದಿದ ಜೀವನಪರವಾದ ವಿದ್ಯೆ ಪಡೆಯಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನ ಇದ್ದರೆ ಸಾಲದು, ಅದರ ಜತೆಗೆ ಕೌಶಲ್ಯವೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಅನುಭವ, ನೈತಿಕತೆ ಮತ್ತು ವಿನಯ ಬೆಳೆಸಿಕೊಂಡು ಉತ್ತಮ ವ್ಯಕ್ತಿಗಳಾಗಬೇಕು ಎಂದರು.೯೦ ವರ್ಷಗಳ ಹಿಂದೆ ಹಿರಿಯರು ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ, ಅದಕ್ಕೆ ಭಟ್ಕಳದ ಹೆಸರನ್ನು ಇಟ್ಟು ಉದಾರತೆ ಮೆರೆದಿದ್ದಾರೆ. ಅಂದು ಸಣ್ಣ ಸಸಿಯಂತೆ ಆರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಅಸಂಖ್ಯಾತ ಜನರಿಗೆ ವಿದ್ಯೆ ನೀಡಿದೆ. ಕೇವಲ ಕಾಲೇಜಿನ ಹೆಸರಿಗಿಂತ, ಅದರೊಳಗೆ ವಿದ್ಯಾರ್ಥಿಗಳಿಗೆ ನೀಡುವ ಗುಣಮಟ್ಟದ ಶಿಕ್ಷಣ ಮತ್ತು ಆವಿಷ್ಕಾರಗಳು ಮುಖ್ಯವಾಗಿವೆ. ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದು ಹೇಳಿದರು. ಸಚಿವ ಮಂಕಾಳ ವೈದ್ಯ ಮಾತನಾಡಿ, ನನ್ನದು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ಆಗಿದೆ. ಭಟ್ಕಳ ಎಜ್ಯುಕೇಶನ್ ಟ್ರಸ್ಟಿಗೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು. ಹ

ಳೆಯ ವಿದ್ಯಾರ್ಥಿಗಳಾದ ಸದಾನಂದ ಬಾಳಿಗಾ, ದೇವೇಂದ್ರ ನಾಯ್ಕ ಹಾಗೂ ಹಾಂಗ್ಯೋ ಐಸ್‌ಕ್ರೀಮ್ ದಿನೇಶ್ ಪೈ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ್ ನಾಯಕ್, ಟ್ರಸ್ಟಿ-ಮ್ಯಾನೇಜರ್ ರಾಜೇಶ್ ನಾಯಕ ಉಪಸ್ಥಿತರಿದ್ದರು. ಪ್ರದೀಪ್ ಜಿ. ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೂತನ ಕಟ್ಟಡ ನಿರ್ಮಾಣಕ್ಕಾಗಿ ₹೧ ಕೋಟಿ ದೇಣಿಗೆ ನೀಡಿದ ಅಮೆರಿಕದಲ್ಲಿ ವಾಸವಾಗಿರುವ ಭಟ್ಕಳದ ವಾಮನ ಆರ್. ಶ್ಯಾನಭಾಗ ಹಾಗೂ ₹೧೦ ಲಕ್ಷ ದೇಣಿಗೆ ನೀಡಿದ ಅವರ ಪುತ್ರರ ಪರವಾಗಿ ವಸಂತ ಶ್ಯಾನಭಾಗ ಅವರನ್ನು ಸ್ವಾಮೀಜಿ ಗೌರವಿಸಿದರು. ಕೊಠಡಿಗಳಿಗೆ ದೇಣಿಗೆ ನೀಡಿದ ದಾನಿಗಳಿಗೆ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವದಿಸಿದರು. ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ ೮.೧೩ಕ್ಕೆ ದ್ವಾರಪೂಜೆ ಹಾಗೂ ಸರಸ್ವತಿ ಪೂಜೆ ನೆರವೇರಿಸಿದ ಶ್ರೀಗಳು, ಗೀತಾ ವಾಮನ ಬ್ಲಾಕ್ ಹಾಗೂ ನೂತನ ಕಟ್ಟಡ ಉದ್ಘಾಟಿಸಿದರು.

ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಉಪಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಟ್ರಸ್ಟಿಗಳಾದ ಶ್ರೀಧರ ಶ್ಯಾನಭಾಗ, ಡಾ. ರಾಜೇಶ್ ಯು., ಚಿತ್ತರಂಜನ, ಸುಮಿತ್ರಾ ಕೌಸಿಕ್, ರಮೇಶ್ ಖಾರ್ವಿ, ಗುರುದತ್ ಶೇಟ್ ಹಾಗೂ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ, ಇತರ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಉಪನ್ಯಾಸಕರು ಇತರರು ಉಪಸ್ಥಿತರಿದ್ದರು. ಟ್ರಸ್ಟಿ ನಾಗೇಶ್ ಮೋಹನ ಭಟ್ ವಂದಿಸಿದರು. ಪ್ರಾಂಶುಪಾಲ ಶ್ರೀನಾಥ ಪೈ ಮತ್ತು ಉಪನ್ಯಾಸಕ ವಿಶ್ವನಾಥ ಭಟ್ ಕಾರ್ಯಕ್ರಮ ನಿರ್ವಹಿಸಿದರು.