ಶಿರಹಟ್ಟಿ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಶಿರಹಟ್ಟಿ ಪಟ್ಟಣದಲ್ಲಿ ಮೇ ೧ರಿಂದ ಜಾತ್ರೆ ಆರಂಭವಾಗುತ್ತಿದ್ದು, ಜಾತ್ರೆಗಳಲ್ಲಿ ಜನಸಮೂಹ ಹೆಚ್ಚಾಗುವ ಕಾರಣ ಭದ್ರತೆ ಮತ್ತು ಶಿಸ್ತು ಕಾಪಾಡುವುದು ಪೊಲೀಸರ ಮುಖ್ಯ ಹೊಣೆಗಾರಿಕೆಯಾಗಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಮುಂಜಾಗ್ರತವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಡಿಎಸ್‌ಪಿ ಮುರ್ತುಜಾ ಖಾದ್ರಿ ಹೇಳಿದರು.
ಬುಧವಾರ ಸಂಜೆ ಫಕೀರೇಶ್ವರ ಮಠದ ಸಭಾ ಭವನದಲ್ಲಿ ಜಾತ್ರಾ ಕಮಿಟಿ ವತಿಯಿಂದ ಜರುಗಿದ ಪೂರ್ವ ಸಿದ್ದತೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಾತ್ರೆ ಆರಂಭಕ್ಕೂ ಮೊದಲು ಎಲ್ಲ ಸ್ಥಳ ಸಮೀಕ್ಷೆ ಮಾಡಲಾಗುತ್ತಿದೆ. ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಸ್ಪಷ್ಟವಾಗಿ ಗುರುತಿಸಿ ಅಪಾಯದ ಪ್ರದೇಶ ಮತ್ತು ಹೆಚ್ಚು ನೂಕು ನುಗ್ಗಲು ನಡೆಯುವಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ರಥೋತ್ಸವದ ವೇಳೆ ಒಂದೇ ಸಮಯದಲ್ಲಿ ಹೆಚ್ಚು ಜನ ಸೇರುವುದನ್ನು ತಪ್ಪಿಸಲು ಪ್ರಮುಖ ದ್ವಾರದಲ್ಲಿ (ಗೇಟ್‌ಗಳಲ್ಲಿ) ನಿಯಂತ್ರಣ ಮಾಡಲಾಗುವುದು. ಜನರನ್ನು ಸರಿಯಾದ ದಾರಿಯಲ್ಲಿ ಸಾಗಿಸಲು ಬ್ಯಾರಿಕೇಡ್‌ಗಳ ಅಳವಡಿಕೆ, ಇಲ್ಲವೆ ಬಿದಿರಿನ ಡಂಬು ಕಟ್ಟಿ ಜನಸಂದಣಿ ನಿಯಂತ್ರಣಕ್ಕೆ ಮುಂದಾಗುವುದಾಗಿ ತಿಳಿಸಿದರು.
ಮುಖ್ಯ ಸ್ಥಳಗಳಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿ ಮತ್ತು ಹೋಂ ಗಾರ್ಡ್‌ಗಳನ್ನು ನಿಯೋಜಿಸಿ ಜನರ ಚಲನವಲನವನ್ನು ಗಮನಿಸಲಾಗುವುದು ಎಂದರು.ಮಠದ ಆವರಣದಲ್ಲಿ ೫ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರೊಂದಿಗೆ ಜನಸಂದಣಿ ಮೇಲೆ ನಿಗಾ ಇಟ್ಟು ತುರ್ತು ಪರಿಸ್ಥಿತಿಯನ್ನು ತಕ್ಷಣ ಗುರುತಿಸಲು ಸಿದ್ದತೆ ಮಾಡಿಕೊಳ್ಳಲಾಗುವುದು. ಜನರಿಗೆ ಸೂಚನೆ, ಎಚ್ಚರಿಕೆ ನೀಡಲು ಲೌಡ್‌ಸ್ಪೀಕರ್ ವ್ಯವಸ್ಥೆಯನ್ನು ಮಠದ ವತಿಯಿಂದ ಮಾಡಬೇಕು ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ೨ ಕೆಎಸ್‌ಆರ್‌ಪಿ, ೨ ಡಿಎಆರ್ ತುಕಡಿ ಸೇರಿದಂತೆ ಜಿಲ್ಲೆಯ ಅನೇಕ ಸಿಬ್ಬಂದಿ ನಿಯೋಜಿಸಲಾಗುವುದು. ಜೊತೆಗೆ ಕಳ್ಳತನ ಪ್ರಕರಣ ತಡೆಗಟ್ಟುವುದಕ್ಕಾಗಿ ಪ್ರತ್ಯೇಕವಾಗಿ ಕ್ರೆö ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಅಗತ್ಯತೆ ಇರುವಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
ಪಟ್ಟಣದ ರಸ್ತೆಯು ಇಕ್ಕಟ್ಟಾಗಿರುವದರಿಂದ ಸುಗಮ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸುವುದಕ್ಕಾಗಿ ಸಿದ್ದತೆ ಮಾಡಲಾಗುವುದು. ಶ್ರೀಮಠದ ವತಿಯಿಂದ ವಾಲಂಟಿಯರ್ಸ್ ಪಟ್ಟಿ ನೀಡಬೇಕು. ಅವರಿಗೆ ಪ್ರತ್ಯೇಕ ಐಡೆಂಟಿಟಿ ಕಾರ್ಡ್ ನೀಡಲಾಗುವುದು. ಅವರೂ ನಮ್ಮ ಜೊತೆಗೆ ಕೆಲಸ ಮಾಡಬೇಕು. ಶ್ರೀಮಠದ ವತಿಯಿಂದ ಮೈಕ್ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಅಧಿಕಾರಿಗಳು ಬಾಡಿ ಕ್ಯಾಮೆರಾ ಸಹಿತ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ವಿಶೇಷವಾಗಿ ಕಡುಬಿನ ಕಾಳಗದ ದಿನಂದು ಶ್ರೀಗಳ ಸುತ್ತಮುತ್ತ ಜನದಟ್ಟಣೆಯ ನಿಯಂತ್ರಣಕ್ಕಾಗಿ ಪ್ರತ್ಯೇಕವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗುವುದು. ಪಟ್ಟಣದ ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಿ ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಗಳು ಯಶಸ್ವಿಯಾಗಿಸಬೇಕು. ಪಟ್ಟಣದ ಹಿರಿಯರು, ಯುವಕರು ಇಲಾಖೆಗೆ ಸಹಕಾರ ನೀಡಬೇಕು ಎಂದು ಹೇಳಿದರು.ತಹಸೀಲ್ದಾದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಫಕೀರೇಶ್ವರ ಮಠದಲ್ಲಿ ರಥೋತ್ಸವ ಮತ್ತು ಕಡುಬಿನ ಕಾಳಗದಲ್ಲಿ ಎರಡು ದಿನ ಧರ್ಮಸಭೆ ಜರುಗಲಿದ್ದು, ಜನದಟ್ಟಣೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು. ಹೆಸ್ಕಾಂ, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ತಂಡಗಳು ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕು. ಮಠದ ಆವರಣ ಸ್ವಚ್ಛತೆ ಬಗ್ಗೆ ಪಟ್ಟಣದ ಪಂಚಾಯಿತಿಯವರು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಜಾತ್ರೆ ನಿಮಿತ್ತ ರಥದ ಫಿಟನೆಸ್ ಪಡೆದುಕೊಳ್ಳಬೇಕು. ಸುತ್ತಮುತ್ತ ವಿದ್ಯುತ್ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ ಎಂದರು.ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಪಪಂ ಮುಖ್ಯಾಧಿಕಾರಿ ಸವಿತಾ ತಾಂಭ್ರೆ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ, ಚಂದ್ರಕಾಂತ ನೂರಶೆಟ್ಟರ, ಸಿ.ಕೆ. ಮುಳಗುಂದ, ಅಜ್ಜುಗೌಡ್ರ ಪಾಟೀಲ, ಸಂದೀಪ ಕಪ್ಪತ್ತನವರ, ಬಿ.ಎಸ್. ಹಿರೇಮಠ, ಎಂ.ಸಿ. ಹಿರೇಮಠ ಸೇರಿ ಅನೇಕರು ಇದ್ದರು.